ಕೊಡಗಿನ ಕಡೆ ಆಚರಿಸುವ ವಿಶಿಷ್ಟ ಹಬ್ಬ. ಕೊಡಗಿನ ಕುಲದೈವವೆಂದೇ ಹೆಸರಾಗಿರುವ ಇಗ್ಗುತಪ್ಪದೇವ ಸಹೋದರಿ ಪನ್ನಂಗಾಲತಮ್ಮೆಯ ಹಬ್ಬಕ್ಕೆ ‘ಕೊಡೆ ಹಬ್ಬ’ವೆಂದು ಕರೆಯುತ್ತಾರೆ. ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳ ಮಧ್ಯದಲ್ಲಿ ಆಚರಣೆಗೊಳ್ಳುತ್ತದೆ. ಕೊಡಗಿನ ಕಕ್ಕಬ್ಬೆಯ ಯವಕಪಾಡಿ ಗ್ರಾಮದಲ್ಲಿ ಪನ್ನಂಗಾಲತಮ್ಮೆ ದೇವಾಲಯವಿದೆ.

ಹಬ್ಬದ ದಿನ ದೇವಿಯ ಉತ್ಸವ ಮೂರ್ತಿ ಯನ್ನು ಹೊತ್ತ ವ್ಯಕ್ತಿಯು ಹೂಂಕರಿಸುತ್ತಾ, ನೃತ್ಯ ಮಾಡುತ್ತಾ ಸಾಗುತ್ತಾನೆ. ಭಕ್ತರು ತಮ್ಮ ಕಷ್ಟಗಳಿಗೆ ಪರಿಹಾರ ಹಾಗೂ ಕಾರಣಗಳನ್ನು ಕೇಳುತ್ತಾರೆ. ಉತ್ಸವಮೂರ್ತಿಯನ್ನು ಹೊತ್ತ ವ್ಯಕ್ತಿ ದೇವಾಲಯದ ಸುತ್ತ ಮೂರು ಸುತ್ತು ಬಂದು ಭಕ್ತರ ಕಷ್ಟಗಳಿಗೆ ಪರಿಹಾರ ಹೇಳು ತ್ತಾನೆ. ಮೆರವಣಿಗೆಯಲ್ಲಿ ಭಾಗಿಯಾದವರೆಲ್ಲ ದೇವಿಯ ಜೊತೆಗೆ ನೃತ್ಯ ಮಾಡುತ್ತಾರೆ.

ಹಬ್ಬದ ಅಂಗವಾಗಿ ದೇವಾಲಯದ ಆವರಣದಲ್ಲಿ ಹತ್ತಾರು ರೋಚಕ ಆಚರಣೆಗಳು ನಡೆಯುತ್ತವೆ. ‘ಬಲಿ ಬರುವ’ ಸಂಪ್ರದಾಯ ನೋಡುಗರನ್ನು ಭಯಭೀತರನ್ನಾಗಿಸುತ್ತದೆ. ಸುಮಾರು ಹತ್ತರಿಂದ ಹನ್ನೆರಡು ಮಂದಿ ಜನರು ಕೆಂಪು ಬಟ್ಟೆ ಧರಿಸಿ, ಕೊರಳಿಗೆ ಹೂಮಾಲೆ, ಕೈಯಲ್ಲಿ ತ್ರಿಶೂಲ, ಕತ್ತಿ ಹಿಡಿದು, ಸೊಂಟದಲ್ಲಿ ಡಾಬು ಧರಿಸಿ, ಕತ್ತಿಗಳನ್ನು ಝಳಪಿಸುತ್ತಾ, ಹೂಂಕರಿಸುತ್ತಾ ದೇವಾಲಯದ ಸುತ್ತ ಸುತ್ತುತ್ತಾರೆ. ಮುಂದೆ ಅವರು ಆಯುಧಗಳಿಂದ ತಮ್ಮ ತಮ್ಮ ತಲೆಯನ್ನು ರಕ್ತ ಚಿಮ್ಮುವವರೆಗೆ ಕಡಿದುಕೊಳ್ಳುತ್ತಾರೆ. ಅಂದು ಕಡಿದುಕೊಂಡ ಭಾಗಗಳು ವಾಸಿಯಾಗುವುದಕ್ಕೆ ತಿಂಗಳುಗಳು ಬೇಕಾಗುತ್ತವೆ. ಅದರ ಆರೈಕೆಗಾಗಿ ಕಪ್ಪುಮಸಿಯನ್ನು ಹಚ್ಚಿಕೊಳ್ಳುತ್ತಾರೆ.

ದೇವಾಲಯದ ಸಮೀಪ ಗದ್ದೆಯಲ್ಲಿ ಇನ್ನೊಂದು ಬಗೆಯ ಆಚರಣೆ ಜರುಗುತ್ತದೆ. ಅಮ್ಮಂಗೇರಿ ಎಂಬ ಊರಿನಿಂದ ತಂದ ಬಿದಿರಿನ ದೊಡ್ಡ ಕೊಡೆಗಳನ್ನು ನಿಲ್ಲಿಸುವ ಆಚರಣೆಗೆ ಕೊಡೆ ಊರುವುದು ಎಂದು ಕರೆಯುತ್ತಾರೆ. ಸಂಪ್ರದಾಯದಂತೆ ಊರಿನ ಮುಖ್ಯಸ್ಥರ ಮನೆಯಿಂದ ಭಂಡಾರ ತಂದ ನಂತರ ಹಬ್ಬಕ್ಕೆ ಚಾಲನೆ ದೊರಕುತ್ತದೆ. ಉದ್ದ ಹಿಡಿಕೆಯುಳ್ಳ ನಾಲ್ಕು ಬಿದಿರಿನ ಕೊಡೆಗಳನ್ನು ಹಿಡಿದ ವ್ಯಕ್ತಿಗಳು ಲಂಬವಾಗಿ ನಿಲ್ಲಿಸಲು ಪ್ರಯತ್ನಿಸುತ್ತಾರೆ. ಆದರೆ ದೇವಿಯ ಮಹಿಮೆಯ ಫಲವಾಗಿ ಕೊಡೆಯನ್ನು ಲಂಬವಾಗಿ ನಿಲ್ಲಿಸಲು ಸಾಧ್ಯವಾಗುವುದಿಲ್ಲವೆಂದು ಹೇಳುತ್ತಾರೆ.

ವರ್ಷಕ್ಕೆ ಒಂದು ಬಾರಿ ಹಬ್ಬ ಆಚರಿಸಿದರೂ ಪ್ರತಿ ವರ್ಷ ಒಂದೇ ರೀತಿ ಆಚರಿಸುವುದಿಲ್ಲ. ಒಂದು ವರ್ಷ ಎರಡು ಕೊಡೆಗಳ ಸಣ್ಣ ಹಬ್ಬವನ್ನು ಇನ್ನೊಂದು ವರ್ಷ ನಾಲ್ಕು ಕೊಡೆಗಳ ದೊಡ್ಡ ಹಬ್ಬವನ್ನು ಆಚರಿಸುವುದು ವಾಡಿಕೆ. ಪ್ರತಿ ವರ್ಷ ಹಬ್ಬದ ಅಂಗವಾಗಿ ವಾದ್ಯಗೋಷ್ಠಿಯೊಂದಿಗೆ ದೇವಿಯ ಮೆರವಣಿಗೆ, ಎತ್ತುಗಳನ್ನು ಓಡಿಸುವುದು, ದೇವಿಯ ಜಳಕ, ಚಾಮುಂಡಿ ಬಲಿ, ತೆಂಗಿನಕಾಯಿಗೆ ಗುಂಡು ಹೊಡೆಯುವುದು ಇತ್ಯಾದಿಗಳನ್ನು ಮಾಡುತ್ತಾರೆ. ಅಲ್ಲದೆ ‘ಕುರುಂದ ಕಳಿ’ ಎಂಬ ವಿಶಿಷ್ಟ ಬಗೆಯ ಉರುಳು ಸೇವೆ ನಡೆಯುತ್ತದೆ. ಇಬ್ಬರು ಭಕ್ತರು ಒಬ್ಬರನೊಬ್ಬರು ತಬ್ಬಿಕೊಂಡು ಉರುಳುತ್ತಾ ದೇವರನ್ನು ಸುತ್ತುವ ಸೇವೆ. ಕೊಡೆ ಹಬ್ಬದಲ್ಲಿ ಅಂಜಪರವಂಡ, ಅಪ್ಪಾರಂಡ, ಕರ್ತಂಡ, ಐರೀರ ಇತ್ಯಾದಿ ಕುಟುಂಬದವರಲ್ಲದೇ ದೇವಿಯ ಭಕ್ತರು ಪಾಲ್ಗೊಂಡಿರುತ್ತಾರೆ.