ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಅಮೀನಗಡ ಹಾಗೂ ಸುತ್ತಲಿನ ಊರುಗಳಲ್ಲಿ ವರ್ಷಕ್ಕೆ ಒಂದು ಬಾರಿ ‘ಕೊಂತಿ ರೊಟ್ಟಿ’ ಹಬ್ಬ  ನಡೆಯುತ್ತದೆ. ಕಾರಹುಣ್ಣಿಮೆಯ ಮರುದಿನ ‘ಕೊಂತಿ ರೊಟ್ಟಿ’ ಮಾಡುತ್ತಾರೆ. ಈ ಹಬ್ಬವನ್ನು ‘ಗುಳ್ಳವ್ವನ’ ಹಬ್ಬ ಎಂತಲೂ ಕರೆಯುತ್ತಾರೆ.

ಕೃಷಿಸಂಬಂಧೀ ಹಬ್ಬವಾದ ಕಾರಹುಣ್ಣಿಮೆಯ ದಿವಸ ಎತ್ತುಗಳ ಮೈತೊಳೆದು ಅವುಗಳನ್ನು ಕೋಡಣಸು, ಹಣೆಕಟ್ಟು, ಗೆಜ್ಜೆ ಗುಮರಿ, ಜೂಲ ಹಾಕಿ ಸಿಂಗರಿಸುತ್ತಾರೆ. ಹೀಗೆ ಸಿಂಗಾರಗೊಂಡ ಎತ್ತುಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಅಂದು ಸಂಜೆ ಹೊತ್ತಿಗೆ ಬಿಳಿ, ಕಂದುಬಣ್ಣದ ಎತ್ತುಗಳನ್ನು ಪೂಜಿಸಿ ಐದು ಸಾರಿ ಅಗಸಿಯಲ್ಲಿ ಓಡಿಸುತ್ತಾರೆ. ಆ ಓಟದಲ್ಲಿ ಯಾವ ಬಣ್ಣದ ಎತ್ತು ಮುಂದೆ ಬಂದಿದೆ ಎಂಬುದನ್ನು ಆಧರಿಸಿ ಹಿಂಗಾರು ಇಲ್ಲವೇ ಮುಂಗಾರು ಸಮೃದ್ಧವಾಗಿ ಬೆಳೆಯುವುದೆಂಬ ನಂಬಿಕೆ ಇದೆ. ಅಂದು ಊರ ಮಧ್ಯದ ಬಯಲಿನಲ್ಲಿ ಉತ್ಸಾಹಿ ತರುಣರು ಕುಸ್ತಿ, ಗುಂಡೆತ್ತುವ ಕಸರತ್ತಿನ ಪ್ರದರ್ಶನ ಮಾಡುತ್ತಾರೆ. ಹುಣ್ಣಿಮೆಯ ಮರುದಿನ ‘ಕೊಂತಿರೊಟ್ಟಿ ಅಥವಾ ‘ಗುಳ್ಳೆಪ್ಪನ ಹಬ್ಬ’ ಆಚರಿಸುತ್ತಾರೆ. ಮಳೆ, ಬೆಳೆ ಚೆನ್ನಾಗಿರಲೆಂದು ಭೂತಾಯಿಯನ್ನು ಪೂಜಿಸುವ ಹಬ್ಬವು ಹೌದು. ಈ ಹಬ್ಬಕ್ಕಾಗಿ ಮನೆಯಲ್ಲಿ ಎರಡರಿಂದ ಮೂರು ದಿನಗಳವರೆಗೆ ತಯಾರಿ ನಡೆಸಿರುತ್ತಾರೆ. ಹೋಳಿಗೆ, ಕರಿಗಡಬು, ಕರ್ಚಿಕಾಯಿ, ಸಜ್ಜಿರೊಟ್ಟಿ, ಬಿಳಿಜೋಳದ ರೊಟ್ಟಿ, ಚಪಾತಿ, ಬದ್ನೆಕಾಯಿ ಪಲ್ಯೆ, ಶೆಂಗಾಚಟ್ನಿ, ಗುರೆಳ್ಳುಚಟ್ನಿ, ಕೋಸಂಬರಿ, ಹಪ್ಪಳ, ಸಂಡಿಗೆ ಇತ್ಯಾದಿ ತಿನಿಸುಗಳು ಎಲ್ಲರ ಮನೆಯಲ್ಲೂ ತಯಾರಾಗುತ್ತವೆ. ಪ್ರತಿಯೊಬ್ಬರೂ ಬುತ್ತಿಕಟ್ಟಿಕೊಂಡು ಊರಾಚಿನ ತೋಪಿನ ನೆರಳಿನಲ್ಲಿ ಸೇರುತ್ತಾರೆ. ಐದು ಕಲ್ಲುಗಳನ್ನು ಸಾಲಾಗಿ ಇರಿಸಿ, ಅವುಗಳನ್ನು ಪೂಜಿಸಿ, ಮನೆಯಲ್ಲಿ ಮೊದಲೇ ಬಿತ್ತಿದ ಗೋಧಿ ಇಲ್ಲವೇ ಭತ್ತದ ಸಸಿ ಇಟ್ಟು ನೈವೇದ್ಯ ಮಾಡಿ ಭೂತಾಯಿಗೆ ಅರ್ಪಿಸುತ್ತಾರೆ. ನಂತರ ಸಾಮೂಹಿಕವಾಗಿ ಊಟ ಮಾಡುತ್ತಾರೆ.

ಊಟದ ನಂತರ ಹೆಂಗಸರು ಸಕ್ಲಾಸರಿಗಿ, ಕುಂಟಲಿಪಿ, ಕಣ್ಣುಮುಚ್ಚಾಲೆ, ಹಾಡು ಹೇಳುವುದರಲ್ಲಿ ಮೈಮರೆತರೆ, ಗಂಡಸರು ಸರಗೇರಿ, ಕಬಡ್ಡಿ, ಹುಲಿಮನಿ, ಲಗೋರಿ, ಚಿನ್ನಿದಾಂಡು ಮುಂತಾದ ಆಟಗಳಲ್ಲಿ ತೊಡಗುತ್ತಾರೆ. ಅಂದಿನ ರೋಚಕ ಸ್ಪರ್ಧೆ ಎಂದರೆ ಯುವಕರು ಹಾರಿಸುವ ಗಾಳಿಪಟ