ದಕ್ಷಿಣ ಕರ್ನಾಟಕದ ಬಹುಭಾಗದಲ್ಲಿ ವಿಶೇಷವಾಗಿಯೂ ಕರ್ನಾಟಕದ ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಆಚರಣೆಯಲ್ಲಿದೆ. ಪ್ರತಿ ವರ್ಷ ಕಾರ್ತಿಕಮಾಸದ ಬೆಳದಿಂಗಳ ರಾತ್ರಿಗಳಲ್ಲಿ ಹದಿನಾರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ವಿಶೇಷವಾಗಿ ಇದು ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಹಬ್ಬವಾಗಿದೆ. ಹೆಚ್ಚಾಗಿ ಒಕ್ಕಲಿಗರು, ಹರಿಜನರು, ಗೊಲ್ಲರು, ಕುಂಚಿಟಿಗರು, ಬೆಸ್ತರು, ಉಪ್ಪಾರರು, ಶೆಟ್ಟರು, ಶಿವಭಕ್ತರು ಮುಂತಾದವರು ಪೂಜಿಸುತ್ತಾರೆ.

ಕಾರ್ತಿಕಮಾಸದ ಬೆಳದಿಂಗಳ ಸೋಮವಾರ ರಾತ್ರಿ ಹೆಂಗಸರು ಕೊಂತಿಯನ್ನು ಕೂರಿಸುವ ಸ್ಥಳವನ್ನು ಗೊತ್ತುಮಾಡುತ್ತಾರೆ. ಪಡಶಾಲೆಯ ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ, ನೆಲದಿಂದ ಒಂದು ಮೊಳ ಮೇಲಕ್ಕೆ ಹಸಿ ಎರೆಮಣ್ಣಿನಿಂದ ಅಥವಾ ಸಗಣಿಯಿಂದ ಕುದುರೆ ಗೊರಸಿನ ಆಕೃತಿಯ ಪ್ರಕಾರ ಬಿಡಿಸುತ್ತಾರೆ. ಪ್ರಕಾರದ ಮೇಲೆ ಎರೆಮಣ್ಣಿನಿಂದ ತಿದ್ದಿ ತೀಡಿ ಮಾಡಿದ ಕೊಂತಿಯ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಕೊಂತಿ ಕೂರಿಸುವ ಪಡಶಾಲೆಯ ನೆಲವನ್ನು ಸೆಗಣಿಯಿಂದ ಸಾರಿಸಿ, ರಂಗೋಲಿಯಿಂದ ಅಲಂಕಾರ ಮಾಡುತ್ತಾರೆ. ಕೆಲವು ಭಾಗಗಳಲ್ಲಿ ಕೊಂತಿಯನ್ನು ತೇಗದ ಮರದಿಂದಲೂ, ಬಳಪದ ಕಲ್ಲಿನಿಂದಲೂ ಮಾಡಿಟ್ಟುಕೊಳ್ಳುವ ಪದ್ಧತಿ ಇದೆ. ಕೆಲವು ಭಾಗಗಳಲ್ಲಿ ಗುಂಡು ಕಲ್ಲನ್ನೇ ಪ್ರತಿಷ್ಠಾಪಿಸಿ, ಕೊಂತಿ ಎಂದು ಪೂಜಿಸುತ್ತಾರೆ. ಕೊಂತಿ ಮೂರ್ತಿಯನ್ನು ಹುಚ್ಚೆಳ್ಳು ಹೂ, ಮುಂತಾದ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ, ಕುಂಕುಮ ತಿಲಕವಿಟ್ಟು, ಆಭರಣಗಳಿಂದ ಸಿಂಗರಿಸುತ್ತಾರೆ. ಬಗೆ ಬಗೆಯ ಆಹಾರ ಪದಾರ್ಥಗಳ ನೈವೇದ್ಯ ಅರ್ಪಿಸಿ, ಪೂಜಿಸುತ್ತಾರೆ.

ಪೂಜಾ ಸಮಯದಲ್ಲಿ ಕೊಂತಿ ಪದಗಳನ್ನು ಹಾಡುತ್ತಾರೆ. ಕೊಂತಿ ಪದಗಳಲ್ಲಿ ಸಮಗ್ರ ಭಾರತದ ಕಥೆ ತುಂಬಿಕೊಂಡಿರುತ್ತದೆ. “ಮಲ್ಲಿಗೆ ತಂದ ಕೊಂತಮ್ಮ ಚಿಲಕ ಬಟ್ಟಲ ನೀಡೋs…., ಶಿವರಾಯ ದಂಡೆತ್ತಿ ಕೇಳಿ ಬಂದಾ… ಸಾಲುಮಲ್ಲಿಗೆ ಕೊಂತಮ್ಮನ ಮುಡಿಗೆರಡು ಮುತ್ತಿನ ಕುಚ್ಚು; ತಣ್ಣೀರು ತನುವಾಯಿತೋ ಕೊಂತಮ್ಮ ತಾವರೆ ಕೊಳವಾಯಿತೋ; ಅಚ್ಚಿಚ್ಚಳ ಬೆಳದಿಂಗಳೋ ಕೊಂತಮ್ಮನಿಗೆ ನಿತ್ಯ ವೈಭೋಗವೋ; ಓಕುಳೋಕುಳಿಯ ಬೆಟ್ಟದ ಮೇಲಿರುವ ನೆಲ್ಲಿಮರಕ್ಕೆ ಚಲ್ಲಿದರೋಕುಳಿಯ; ಏನಾದರೇನಾಗಿತ್ತೋ ಹಸ್ತಿನಾಪುರದ ಠಾಣ್ಯವು ದಾಯಾದಿ ಪಾಲಾಗಿತ್ತೋ” ಮುಂತಾದ ಪಲ್ಲವಿಯನ್ನು ಕೊಂತಿ ಪದಗಳು ಒಳಗೊಂಡಿರುತ್ತವೆ.

ಕೊಂತಿ ಪೂಜೆಯ ಕೊನೆಯ ದಿನ ರಾತ್ರಿ ಕೊಂತಿಯನ್ನು ವಿಸರ್ಜಿಸುತ್ತಾರೆ. ಎರೆಮಣ್ಣಿನಿಂದ ಮಾಡಿದ ಪಾಂಡು ಮತ್ತು ಕುಂತಿಯ ಮೂರ್ತಿಗಳನ್ನು, ಕುಂತಿ ವಿಸರ್ಜನೆಯ ಮೆರವಣಿಗೆಗಾಗಿಯೇ ಮಾಡಿಕೊಂಡಿರುತ್ತಾರೆ. ಎರಡು ಜನ ಯುವಕ ಯುವತಿಯರಿಗೆ ಹೆಣ್ಣು ಗಂಡಿನ ವೇಷ ಹಾಕಿಸಿ, ಪಾಂಡು ಮತ್ತು ಕೊಂತಿಯ ಮೂರ್ತಿಗಳನ್ನು ಕೊಡುತ್ತಾರೆ. ಊರಿನ ಬೀದಿ ಬೀದಿಗಳಲ್ಲಿ ವಾದ್ಯಮೇಳದೊಂದಿಗೆ ಮೆರವಣಿಗೆ ಮಾಡುತ್ತಾ ನಿಗದಿತ ಹೊಲಕ್ಕೆ ಬಂದು ಎರಡೂ ಮೂರ್ತಿಗಳನ್ನು ಒಂದೆಡೆ ಇಟ್ಟು ಒಸಗೆಯ ಶಾಸ್ತ್ರ ಮಾಡಿ, ಪೂಜಿಸಿ, ನೈವೇದ್ಯ ಅರ್ಪಿಸುತ್ತಾರೆ. ಎಲ್ಲರೂ ಮತ್ತೊಮ್ಮೆ ಕೈಮುಗಿದು ಪ್ರಸಾದ ಸ್ವೀಕರಿಸುತ್ತಾರೆ.