ಮಲೆನಾಡಿನ ಒಕ್ಕಲಿಗರು ದೀಪಾವಳಿಯಂದು ಪೂಜಿಸುವ ಸಗಣಿಯ ದೇವತೆ. ಕುಡಿ ಬಾಳೆ ಎಲೆಯ ಮೇಲೆ ಬೇರೆ ಬೇರೆ ಆಕಾರಗಳಲ್ಲಿ ಸಗಣಿ ಇಟ್ಟು ಹುಚ್ಚೆಳ್ಳು, ಚೆಂಡುಹೂ,  ಉಗನೆಕಾಯಿ, ಹಣ್ಣಡಿಕೆ, ಪಚ್ಚೆತೆನೆ, ಉತ್ರಾಣಿಕಟ್ಟಿ, ಕಂಯಿಡ್ಲೆಕಾಯಿ, ಕಿತ್ತಲೆ ಸೊಪ್ಪು, ದರ್ಬೆ, ಹಿಂಗಾರ, ಮಾವಿನ ಎಲೆ, ಹಲಸಿನ ಎಲೆಗಳಿಂದ ಅಲಂಕೃತಗೊಂಡ ಆಕೃತಿಯನ್ನು ಕೆರಕ ಎಂದು ಕರೆಯುತ್ತಾರೆ. ಬಲಿ ಚಕ್ರವರ್ತಿಯ ಕೋಟೆಯ ಪ್ರತಿಕೃತಿಯೇ ಈ ಕೆರಕ ಎಂದು ನಂಬಲಾಗುತ್ತದೆ. ಜನರ ನಂಬಿಕೆಯ ಪ್ರಕಾರ ತ್ರಿವಿಕ್ರಮನ ಪಾದಹತಿಯಿಂದ ಪಾತಾಳ ಸೇರಿದ ಬಲೀಂದ್ರನು ಬಲಿಪಾಡ್ಯಮಿಯ ದಿನ ಮರಳಿ ಭೂಮಿಗೆ ಬರುತ್ತಾನಂತೆ. ಬಲಿಯ ನೆನಪಿಗಾಗಿ ‘ಕೆರಕಲು ಹೂಡುವುದು ರೂಢಿಗೆ ಬಂದಿದೆ’ ಎಂದು ಹೇಳುತ್ತಾರೆ. ಕೆರಕಲುಗಳನ್ನು ಹೊಸ್ತಿಲು, ಕೊಟ್ಟಿಗೆ, ಕಣ, ಬಲೀಂದ್ರ ಹಾಗೂ ತುಳಸಿಕಟ್ಟೆಯ ಮೇಲೆ ಪ್ರತಿಷ್ಠಾಪಿಸಿ, ದೀಪ ಬೆಳಗಲಾಗುತ್ತದೆ. ದೀಪಾವಳಿಯಲ್ಲಿ ಯಾರು ಬಲೀಂದ್ರನ ಹೆಸರಿನಲ್ಲಿ ಮೂರು ದಿನಗಳವರೆಗೆ ದೀಪ ದಾನ ಮಾಡುತ್ತಾರೊ, ಅವರ ಮನೆಗಳಲ್ಲಿ ಲಕ್ಷ್ಮಿ ನೆಲೆಸುತ್ತಾಳೆಂಬ ನಂಬಿಕೆ ಇದೆ.

ಮೇಳಿದೇವರು, ಗೋಪೂಜೆ, ಕಣಪೂಜೆ, ಕೊಟ್ಟಿಗೆಪೂಜೆ, ತುಳಸಿಪೂಜೆ ಇನ್ನೂ ಮುಂತಾದವುಗಳನ್ನು ಪೂಜಿಸುವ ಸಂದರ್ಭದಲ್ಲಿಯೂ ಕೆರಕಗಳಿಗೆ ‘ಜೈನ ಎಡೆ’ ಸಲ್ಲಿಸಿ ಪೂಜಿಸುತ್ತಾರೆ. ಹಬ್ಬದ ವಿನೋದಗಳಲ್ಲಿ ಒಂದಾದ ಕೆರಕಲು ಕೊಡುವುದು ಆರಂಭವಾಗುತ್ತದೆ. ಅತ್ತೆ-ಅಳಿಯ, ಅತ್ತಿಗೆ-ಮೈದುನ, ಸೊಸೆ-ಮಾವ, ಇವರ ನಡುವೆ ನಡೆಯುವ ಸರಸ ವಿನೋದದ ಸಂದರ್ಭವಾಗಿದೆ. ಇದೊಂದು ಮಾತಿನ ಚಮತ್ಕಾರ. ಮಾತನಾಡುವಾಗ ‘ಆ’, ‘ಓ’, ‘ಹೂಂ’ ಸೊಲ್ಲನ್ನು ಉಪಯೋಗಿಸುವಂತಿಲ್ಲ. ಅಂದಿನಿಂದ ಕೆರಕ ವಿಸರ್ಜನೆಯವರೆಗೆ ಎಚ್ಚರಿಕೆಯಿಂದ ವ್ಯವಹರಿಸುತ್ತಾರೆ. ಕೆರಕ ಹಾಕಿಸಿಕೊಳ್ಳುವುದು ಮಾತಿನಲ್ಲಿ ಅಸಮರ್ಥ ಎನ್ನುವುದೆಂದು ತಿಳಿಯುತ್ತಾರೆ. ಮತ್ತೆ ಕೆಲವರು ಮಾತಿನಲ್ಲಿ ‘ಆ’, ‘ಓ’, ‘ಹೂಂ’ ನುಸುಳದಂತೆ ಜಾಣತನದಿಂದ ಮಾತನಾಡುವ ಶಕ್ತರು ಹಲವರಿದ್ದಾರೆ.