ಉಡುಪಿ ಜಿಲ್ಲೆಯ ಕಂಡೇವು ಊರಿನಲ್ಲಿ ಆಚರಣಾತ್ಮಕವಾಗಿ ನಡೆಯುವ ಸಾಮೂಹಿಕ ಮೀನು ಶಿಕಾರಿ. ಶತಮಾನಗಳ ಇತಿಹಾಸವಿರುವ ಮೀನು ಜಾತ್ರೆ ಪ್ರತಿ ವರ್ಷ ಮೇ ತಿಂಗಳ ತುಲಾ ಸಂಕ್ರಮಣದ ದಿನ ಜರುಗುತ್ತದೆ. ಕಂಡೇವು ಸುರತ್ಕಲ್ ಮತ್ತು ಹಳೆಯಂಗಡಿಯ ನಡುವೆ ಇರುವ ಊರು. ಉಳ್ಳಯ್ಯ ಇಲ್ಲಿಯ ಗ್ರಾಮದೇವತೆ. ಉಳ್ಳಯ್ಯ ಜಾತ್ರೆಯ ದಿನದಂದೇ ಈ ಮೀನು ಶಿಕಾರಿಯು ನಡೆಯುತ್ತದೆ. ಉಳ್ಳಯ್ಯನ ಜಾತ್ರೆಯ ಮೊದಲ ಒಂದು ತಿಂಗಳ ಕಾಲ ಇಲ್ಲಿ ಯಾರೂ ಮೀನು ಹಿಡಿಯುವಂತಿಲ್ಲ. ಈ ಧಾರ್ಮಿಕ ನಿಷೇಧವನ್ನು ಮೀರಿ ಯಾರಾದರೂ ನೀರಿಗಿಳಿದರೆ ಅವರ ಬಲೆಯಲ್ಲಿ ಮೀನಿನ ಬದಲಾಗಿ ವಿಷ ಸರ್ಪ ಕಾಣಿಸಿಕೊಳ್ಳುತ್ತದೆ ಎಂಬ ನಂಬಿಕೆ ಇಲ್ಲಿಯ ಜನರಲ್ಲಿದೆ.

ತುಲಾ ಸಂಕ್ರಮಣದ ಬೆಳಿಗ್ಗೆ ಪಾವಂಜೆ ಹೊಳೆಯ ದಂಡೆಯ ಮೇಲೆ ಸುತ್ತಲಿನ ಜನ ಸೇರಿರುತ್ತಾರೆ. ಅಂದು ಅವರ ಕೈಗಳಲ್ಲಿ ನಾನಾ ಬಗೆಯ ಮೀನು ಬೇಟೆಯ ಪರಿಕರಗಳಿರುತ್ತವೆ. ತಡಿಕೆಬಲೆ, ತಟ್ಟಿಬಲೆ, ಹಾಸುಬಲೆ, ಬೀಸುಬಲೆ, ಕೋಲುಬಲೆ, ಬಳ್ಳಿಬಲೆ, ಗಾಳ ಇತ್ಯಾದಿ ಪರಿಕರಗಳನ್ನು ಹಿಡಿದು ಮೀನು ಬೇಟೆಗೆ ಸರ್ವಸನ್ನದ್ಧರಾಗಿರುತ್ತಾರೆ. ಊರಿನ ಉಳ್ಳಯ್ಯನ ದೊಡ್ಡ ದೇವಾಲಯದ ಧರ್ಮದರ್ಶಿಗಳು ದೇವರಿಗೆ ಆರತಿ ಎತ್ತಿ, ಢಂ ಎಂದು ಬಾಂಬ್ ಸಿಡಿಸುವುದರ ಮೂಲಕ ಮೀನು ಜಾತ್ರೆಯ ಆರಂಭಕ್ಕೆ ಸಂದೇಶ ನೀಡುತ್ತಾರೆ. ದೇವಸ್ಥಾನದ ಕದಿಣಿ ಸದ್ದನ್ನೆ ಕಾದ ಜನ ಒಮ್ಮೆಲೇ ನೀರಿಗೆ ಹಾರಿ ಮೀನು ಬೇಟೆಯಾಡಲು ಆರಂಭಿಸುತ್ತಾರೆ. ಅಷ್ಟು ದಿನ ಹಾಯಾಗಿದ್ದ ಜಲಚರಗಳು ಹಠಾತ್ ಗದ್ದಲದ ಗೊಂದಲದಿಂದ ಓಡಿ, ಬಲೆಗೆ ಸಿಕ್ಕು, ಕಾಲ್ತುಳಿತಕ್ಕೆ ಸಿಕ್ಕು ಬಲಿಯಾಗುತ್ತವೆ. ಹೊಳೆಯ ನೀರೆಲ್ಲ ಕದಡಿ ಬಗ್ಗಡವಾಗಿ ಮೀನುಗಳು ನೀರನ್ನು ಕುಡಿದು ಶಕ್ತಿಹೀನವಾಗಿ ಬೇಟೆಗಾರರ ಬಲೆಗೆ, ಕೈಗೆ ಸಿಕ್ಕುತ್ತವೆ. ಅಂದು ಮೀನು ಹಿಡಿಯದವರು ಹಿಡಿದವರಿಂದ ಹಣ ಕೊಟ್ಟು ಪ್ರಸಾದವೆಂದು ಖರೀದಿಸುತ್ತಾರೆ. ಅಂದು ಹಿಡಿದ ಮೀನುಗಳನ್ನು ಮಾರಲು ಹೊಳೆಯ ದಂಡೆಯ ಮೇಲೆ ಸಂತೆಯೆ ನಡೆದುಹೋಗುತ್ತದೆ. ಅಂದು ಉಳ್ಳಯ್ಯನಿಗೆ ಮೀನಿನಿಂದ ಮಾಡಿದ ಎಡೆ ಅರ್ಪಿಸಿ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಜಾತ್ರೆಯ ದಿನ ಇಡೀ ಊರಿಗೆ ಊರೇ ಸಂಭ್ರಮಿಸುತ್ತದೆ. ಅತ್ತ ಗಂಡಸರು ಮಿೀನು ಬೇಟೆಗೆ ಹೋದರೆ ಇತ್ತ ಹೆಂಗಸರು ಮೀನು ಪದಾರ್ಥಕ್ಕೆ ಖಾರ ಅರೆದು ಪ್ರಸಾದ ತಯಾರಿಸಲು ಕಾದಿರುತ್ತಾರೆ.

ಆಚರಣಾತ್ಮಕ ಶಿಕಾರಿಯಲ್ಲಿ ಮೀನು ಸಂರಕ್ಷಣೆಯ ಸಂದೇಶವಿರುವುದು ಕಂಡುಬರುತ್ತದೆ. ಮಳೆಗಾಲದಲ್ಲಿ ಸಮುದ್ರದ ಕೆಲ ವಿಶಿಷ್ಟ ಬಗೆಯ ಮೀನುಗಳು ಸಮುದ್ರ ಸೇರುವ ನದಿಗಳ ಮೂಲಕ ಮೇಲೆ ಹತ್ತಿಬಂದು ಮುಂದೆ ಹಳ್ಳ, ಹೊಳೆ, ತೋಡು ಮತ್ತು ಕುಣಿಗಳಿಗೆ ಪ್ರವೇಶಿಸಿ ಮೊಟ್ಟೆ ಇಟ್ಟು ಹೋಗುತ್ತವೆ. ಹೀಗೆ ಜನಿಸಿದ ಮೀನು ಮರಿಗಳು ಮತ್ತೆ ಸಮುದ್ರಕ್ಕೆ ಹಿಂತಿರುಗಿ ಹೋಗುವವರೆಗೂ ಅವುಗಳ ರಕ್ಷಣೆ ಅಗತ್ಯ. ಈ ಸಂರಕ್ಷಣೆಯನ್ನು ಮೇಲಿನ ಆಚರಣೆ ಸಾಕ್ಷಿ ನೀಡುತ್ತದೆ.