ಕ್ಷಿಣ ಕನ್ನಡ ಜಿಲ್ಲೆಯ ಮರಾಟಿ ನಾಯ್ಕರ ಶಕ್ತಿದೇವತೆ ಮಹಾಮ್ಮಾಯಿಯ ಆರಾಧನೆ. ಇದನ್ನು ದೇವಿಪೂಜೆ, ಅಮ್ನೂರು ಪೂಜೆ, ದುರ್ಗಾ ಪೂಜೆ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಉಡುಪಿ ಪ್ರದೇಶದ ಮರಾಟಿ ನಾಯ್ಕರು ಊರಿನವರ ಜೊತೆ ಸೇರಿ ‘ಮಾರಿ ಗೋಂದೋಳು’ ಪೂಜೆಯನ್ನು ಆಚರಿಸುತ್ತಾರೆ. ಕುಣಿತ ಪ್ರಧಾನವಾದ ಈ ಆಚರಣೆ ಕಾಸರಗೋಡಿನ ಕರ್ಹಾಡ ಬ್ರಾಹ್ಮಣರಲ್ಲಿ ಕಂಡು ಬರುತ್ತದೆ. ಇದನ್ನು ‘ಗೋಂದಾಲ್’ವರು ಹೆಸರಿನಿಂದ ಆರಾಧಿಸುತ್ತಾರೆ.

ಗೋಂದೋಳು ಪೂಜೆಯನ್ನು ಮಂಗಳವಾರ ಅಥವಾ ಶುಕ್ರವಾರ ನಡೆಸುತ್ತಾರೆ. ಪ್ರಧಾನ ಪೂಜಾರಿ ಹಾಗೂ ದರ್ಶನಪಾತ್ರಿಯನ್ನು ನಿಗದಿತ ದಿನದಂದು ಭೇಟಿಯಾಗಿ ಪೂಜಾ ದಿನವನ್ನು ಗೊತ್ತುಮಾಡುತ್ತಾರೆ. ‘ಕದಳಿ ಬಾಳೆಗೊನೆ’ ಕಡಿಯುವುದರ ಮೂಲಕ ಪೂಜೆಗೆ ಚಾಲನೆ ನೀಡಲಾಗುತ್ತದೆ. ಪೂಜಾ ದಿನ ಬಂಧುಬಳಗದೊಂದಿಗೆ ಪೂಜೆ ಕಳೆಕಟ್ಟುತ್ತದೆ. ಪೂಜೆಯ ಹಿನ್ನೆಲೆಯಲ್ಲಿ ಮನೆಗೆ ಬಣ್ಣ ಹಚ್ಚಿ, ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುತ್ತಾರೆ. ಅಲ್ಲದೇ ಪೂಜೆಗೆ ಬೇಕಾದ ಎಲ್ಲಾ ಪರಿಕರಗಳನ್ನು ಹೊಂದಿಸಿಕೊಂಡಿರುತ್ತಾರೆ. ಅಂದು ಮಧ್ಯಾಹ್ನದ ಹೊತ್ತಿಗೆ ಗುರುಪದೇಶವಿರುವ ಪೂಜಾರಿ ಪರಿವಾರ ಪೂಜಾ ಸಾಮಗ್ರಿಗಳೊಂದಿಗೆ ಬಂದು ಸೇರುತ್ತಾರೆ. ತಂಡದಲ್ಲಿ ಏಳು, ಒಂಭತ್ತು ಅಥವಾ ಹನ್ನೊಂದು ಬೆಸಸಂಖ್ಯೆಯ ಪೂಜಾರಿಗಳಿರುತ್ತಾರೆ.

ಕುಟುಂಬದ ಹಿರಿಯ ಮಹಿಳೆ ಪೂಜಾ ದೀಪವನ್ನು ಬೆಳಗಿದಾಗ ಪೂಜಾರಿಯ ಪ್ರಾರ್ಥನೆ ಹಾಡಿ ಪೂಜೆಯನ್ನು ಆರಂಭಿ ಸುತ್ತಾನೆ. ಉಳಿದ ಪೂಜಾರಿಗಳು ನಂದಾದೀಪಕ್ಕೆ ತೆಂಗಿನ ಎಣ್ಣೆಯನ್ನು ಹಾಕಿ, ಒಬ್ಬರನೊಬ್ಬರು ಕಾಲು ಮುಟ್ಟಿ ನಮಸ್ಕರಿ ಸುತ್ತಾರೆ. ಅಲ್ಲದೆ ಗತಿಸಿದ ಮನೆಯ ಹಿರಿಯರ ಗೌರವಾರ್ಥವಾಗಿ ಜೋಡಿಸಿದ ಎರಡು ತೋರು ಬೆರಳುಗಳಿಂದ ತೆಂಗಿನೆಣ್ಣೆಗೆ ಅದ್ದಿ ಬೆರಳುಗಳಿಂದ ನೆಲ ಮುಟ್ಟುತ್ತಾರೆ. ಈ ಸಂಪ್ರದಾಯವನ್ನು ಮರಾಠಿಯಲ್ಲಿ ‘ಪಾಯದ್’ ಎಂದು ಕರೆಯುತ್ತಾರೆ. ಎಲೆ ಅಡಿಕೆ ಸ್ವೀಕರಿಸಿದ ಪೂಜಾರಿಗಳು, ಸ್ನಾನಮಾಡಿ ಪುಣ್ಯಾರ್ಚನೆಗಳಿಂದ ಮಡಿಯಾಗುತ್ತಾರೆ. ಬಲಿಗೆಂದೇ ಆರಿಸಿ ತಂದ ‘ಈಡು’ ಬಿಟ್ಟ ಎರಡು ಹಂದಿಗಳು ಹಾಗೂ ನಾಲ್ಕು ಕೋಳಿಗಳಿಗೆ ಅನ್ನಾಹಾರ ನೀಡಿ, ತಾವೂ ಊಟ ಮಾಡುತ್ತಾರೆ.

ಅಂದು ಸಂಜೆ ಮನೆಯ ಹೊರಗಿನ ಭೈರವ ಬನದಲ್ಲಿ ಪೂಜಾಕಾರ್ಯ ಮುಗಿಸಿದ ಪೂಜಾರಿಗಳು ಸ್ನಾನ ಮಾಡಿ, ಮಡಿಯುಟ್ಟು, ಮನೆಯ ಒಳಗೆ ಸಿದ್ಧಪಡಿಸಿದ ಗದ್ದುಗೆ ಸುತ್ತ ಕುಳಿತು, ಮಹಮ್ಮಾಯಿ ದೇವಿಯನ್ನು ಗದ್ದಿಗೆಯ ಮೇಲೆ ಪ್ರತಿಷ್ಠಾಪಿಸುತ್ತಾರೆ. ಮಂಡಲಾಕಾರದ ಗದ್ದಿಗೆ ಸುತ್ತ ಅಕ್ಕಿಯಿಂದ ಸೂರ್ಯ, ಚಂದ್ರ, ನಾಗ, ನಕ್ಷತ್ರ, ಕಾಮಧೇನು, ಡಮರುಗ, ಶಿವ ಇತ್ಯಾದಿ ಚಿತ್ರಗಳನ್ನು ಬರೆಯುತ್ತಾರೆ. ಮಂಡಲದ ಅಕ್ಕಪಕ್ಕ ಎರಡು ನಂದಾದೀಪ ಇಟ್ಟು, ಮಹಾಗಣಪತಿಯ ಸ್ವಸ್ತಿಕ ಹಾಗೂ ಭೈರವನ ಕಲಶ ಪ್ರತಿಷ್ಠಾಪಿಸುತ್ತಾರೆ. ಮಂಡಲದ ಪ್ರತಿ ವೃತ್ತದಲ್ಲಿಯೂ ತೆಂಗಿನಕಾಯಿ, ಹಣ್ಣು, ತೆಂಗಿನೆಣ್ಣೆ ಹಾಗೂ ಸೇಂದಿ ತುಂಬಿದ ‘ಭಂಡಾರ ಮಡಕೆ’ ಇಡುತ್ತಾರೆ. ಮಂಡಲ ಮಧ್ಯದಲ್ಲಿರುವ ‘ಗೇಟ್’ ಎಂದು ಕರೆಯುವ ಕಲಶದ ಒಳಗೆ ಪಂಚಾಮೃತ ಹಾಕಿ, ಅದರ ಮೇಲೆ ಮಾವಿನ ಎಲೆ ಹಾಗೂ ಎಳನೀರುಕಾಯಿ ಇಟ್ಟು, ವಿವಿಧ ಬಗೆಯ ಹೂಗಳಿಂದ ಶೃಂಗರಿಸಿರುತ್ತಾರೆ. ಅಲ್ಲದೇ ಬೆಳ್ಳಿ, ಬಂಗಾರದಿಂದ ಮಾಡಿದ ಸತ್ತಿಗೆಯನ್ನು ಇಡುತ್ತಾರೆ. ಪೂಜಾರಿಗಳು ಹತ್ತಾರು ಸಾರಿ ಹತ್ತಾರು ಬಗೆಯ ನೈವೇದ್ಯವನ್ನು ಅರ್ಪಿಸಿ, ಪೂಜಿಸುತ್ತಾರೆ. ಪೂಜೆಯ ಸಂದರ್ಭದಲ್ಲಿ ಸುಮಾರು ನಲವತ್ತೆಂಟು ಆರತಿಗಳನ್ನು ಮಾಡುತ್ತಾರೆ.

ಮನೆಯ ಒಲೆಯ ಬೂದಿಯನ್ನು ಅರ್ಪಿಸುವ ವಿಶಿಷ್ಟ ಆಚರಣೆಯಾದ ‘ಈಸ್‌ದೇವ್’ ಪೂಜೆ ರಾತ್ರಿ ನಡೆಯುತ್ತದೆ. ಮನೆಯ ಒಲೆಯಲ್ಲಿ ಪಂಚ ಕಜ್ಜಾಯವನ್ನು ಹಾಕಿ ಬೂದಿ ಮಾಡಿಕೊಳ್ಳುತ್ತಾರೆ. ಹಿಂದೆ ಈ ಪೂಜೆಗೆ ಸ್ಮಶಾನದ ಬೂದಿಯನ್ನು ಬಳಸುತ್ತಿದ್ದರಂತೆ. ಪೂಜೆಯ ಆರಂಭದಿಂದ ಕೊನೆಯವರೆಗೂ ಗತಿಸಿದ ಮನೆಯ ಹಿರಿಯರನ್ನು ನೆನಪಿಸಿ, ಶೇಂದಿಯನ್ನು ನೆಲಕ್ಕೆ ಅರ್ಪಿಸಿ, ಸೇವಿಸಿ ಗೌರವ ಸಲ್ಲಿಸುತ್ತಾರೆ. ಭಕ್ತಾದಿಗಳು ಗೋವಿಂದಾ… ಗೋವಿಂದಾ… ಎಂದು ಉದ್ಘೋಷ ಮಾಡುತ್ತಿರುವಾಗ ಗದ್ದಿಗೆಗೆ ಅಡ್ಡಲಾಗಿ ಕಟ್ಟಿರುವ ಪರದೆಯ ಹಿಂದೆ ಪೂಜಾರಿಗಳು ಹಂದಿ, ಕೋಳಿಗಳನ್ನು ಬಲಿ ಅರ್ಪಿಸುತ್ತಾರೆ. ಬಲಗಾಲನ್ನು ಬಾಯಲ್ಲಿ ಸಿಕ್ಕಿಸಿದ ಹಂದಿಯ ತಲೆಗಳ ಮೇಲೆ ಉರಿಯುವ ಹಣತೆ ಇಟ್ಟು, ಮಂಡಲದ ಅಕ್ಕಪಕ್ಕ ಇಡುತ್ತಾರೆ. ಬಲಿಯಾದ ಹೆಣ್ಣುಕೋಳಿಯ ಬಲಗಾಲಿನ ಮಾಂಸದ ಭಾಗ ಹಾಗೂ ಹಂದಿಯ ಕಾಲಿನ ಭಾಗವನ್ನು ಉರಿಯುತ್ತಿರುವ ಒಲೆಯಲ್ಲಿ ಸುಟ್ಟು, ಗದ್ದುಗೆಗೆ ನೈವೇದ್ಯ ಮಾಡುತ್ತಾರೆ. ಭಜನಾ ಮೇಳವು ಆಚರಣೆಯ ಒಂದು ಭಾಗವಾಗಿ ಕಂಡುಬರುತ್ತದೆ. ಪೂಜೆಯ ಆರಂಭದಿಂದ ಕೊನೆಯವರೆಗೂ ಅವರು ದೇವಿಯ ಕುರಿತು ಹಾಡುಗಳನ್ನು ಹೇಳುತ್ತಾರೆ. ಎಲ್ಲರಿಗೂ ಪೂಜೆಯ ಅಂಗವಾಗಿ ಹಂದಿ, ಕೋಳಿಗಳ ವಿಶೇಷ ಭೋಜನವಿರುತ್ತದೆ.