ದಕ್ಷಿಣ ಕನ್ನಡ ಜಿಲ್ಲೆಯ ಮರಾಟಿ ನಾಯ್ಕರ ಆಚರಣಾತ್ಮಕ ಕುಣಿತ. ಗೋಂದೋಳು ಪೂಜೆಯಲ್ಲಿ ಮಾತ್ರ ನಡೆಯುತ್ತದೆ. ತಂಡದಲ್ಲಿ ಐದು ಜನರಿರುತ್ತಾರೆ. ಯುವಕರು ಅಂಗಳದಲ್ಲಿ ಮಂಡಲಾಕಾರದಲ್ಲಿ ನಿಂತು ಕುಣಿತಕ್ಕೆ ಸಿದ್ಧರಾಗುತ್ತಾರೆ. ಗೋಂದೋಳು ಪೂಜೆಯ ಗದ್ದುಗೆಯಿಂದ ಮುಖ್ಯ ಪೂಜಾರಿಯು ನಂದಾದೀಪದಿಂದ ಹೊತ್ತಿಸಿಕೊಂಡು ಬಂದ ಐದು ದೀವಟಿಗೆಗಳನ್ನು ಕುಣಿತಗಾರರಿಗೆ ನೀಡುತ್ತಾನೆ. ದೀವಟಿಗೆಗಳನ್ನು ಹಿಡಿದ ಕುಣಿತಗಾರರು ಹಿಮ್ಮೇಳದ ವಾದ್ಯಗೋಷ್ಠಿಗೆ ಹೆಜ್ಜೆ ಹಾಕುತ್ತಾ, ಹಾಡುಗಾರನು ಹಾಡುವ ಪಲ್ಲವಿಯನ್ನು ಹೇಳುತ್ತಾ ವೃತ್ತಾಕಾರವಾಗಿ ಕುಣಿಯುತ್ತಾರೆ.  “ಮಣ್ಣಿನ ಕೋಟೆ ಕಟ್ಟಿದಳಂತೆ ತಾಯಿ, ಲಾಗೆಲೋ ಪನಿ ಲಾಗೆಲಾಲೋ” ಎಂದು ಹಾಡುತ್ತಾ ದೇವಿಯ ಹುಟ್ಟು, ಪ್ರಸಾರ ಹಾಗೂ ಮಹಿಮೆಯನ್ನು ವರ್ಣಿಸುತ್ತಾರೆ.

ಪೂಜಾರಿಗಳಲ್ಲಿ ಒಬ್ಬನಿಗೆ ದೇವರ ಆವಾಹನೆ (ತುಳು : ದರ್ಶನ) ಬಂದು ಪೂಜಾ ಅಂಗಳದಿಂದ ಕುಣಿತದವರ ಬಳಿ ಬಂದು ಎಲ್ಲಾ ದೀವಟಿಗೆಗಳನ್ನು ಕೈಯಲ್ಲಿ ಹಿಡಿದು ಕೊಳ್ಳುತ್ತಾನೆ. ಆವೇಶದಿಂದ ನೃತ್ಯ ಮಾಡುತ್ತಾ ತನ್ನ ಎದೆ, ತಲೆ, ಮೈ, ಕೈಗಳಿಗೆ ಒತ್ತಿಕೊಳ್ಳುತ್ತಾ ಕುಟುಂಬದ ಯಜಮಾನ ಹಾಗೂ ಹಿರಿಯರನ್ನು ಉದ್ದೇಶಿಸಿ ಒಪ್ಪು-ತಪ್ಪುಗಳನ್ನು ನುಡಿಯುತ್ತಾನೆ. ತಪ್ಪಿದಲ್ಲಿ ಕಾರಣವನ್ನು, ಒಪ್ಪಿದಲ್ಲಿ ಅಭಯವನ್ನು, ಸಂತೋಷವನ್ನು ದೇವಿಯ ಹೆಸರಿನಲ್ಲಿ ನುಡಿಯುತ್ತಾನೆ. ನಂತರ ಎಲ್ಲಾ ದೀವಟಿಗೆಗಳನ್ನು ಕುಣಿತಗಾರರಿಗೆ ನೀಡಿ, ದರ್ಶನದಲ್ಲಿಯೇ ಪೂಜಾ ಸ್ಥಳಕ್ಕೆ ಪ್ರವೇಶ ಮಾಡುತ್ತಾನೆ. ನಂತರ ಮುಖ್ಯ ಪೂಜಾರಿಯ ಮೇಲೆ ದೇವಿ ಆವಾಹನೆಗೊಳ್ಳುತ್ತದೆ. ದರ್ಶನಗೊಂಡ ಪೂಜಾರಿ ನೃತ್ಯ ಮಾಡುತ್ತಾ ಪೂಜಾ ಸ್ಥಳದಿಂದ ಕುಣಿತಗಾರರ ಬಳಿ ಬಂದು ದೀವಟಿಗೆಗಳನ್ನು ಪಡೆದು ಆವೇಶದಿಂದ ಕುಣಿಯುತ್ತಾ ಹಿಂದಿನ ದರ್ಶನಧಾರಿ ಮಾಡಿದಂತೆ ಮೈ, ಕೈಗೆ ದೀವಟಿಗೆಗಳನ್ನು ಒತ್ತಿಕೊಳ್ಳುತ್ತಾನೆ. ಕುಟುಂಬದ ಯಾಜಮಾನ ಹರಕೆಯ ಕಾರಣಗಳನ್ನು ತಿಳಿಸುತ್ತಾನೆ.

ದರ್ಶನಪಾತ್ರಿಯು ಹಿಂಗಾರ ಸೇವೆ ಹಾಗೂ ಬತ್ತಿ ಸೇವೆ ಸಲ್ಲಿಸಿ, ಕುಟುಂಬದ ಯಜಮಾನಿಗೆ ಅಭಯ ನೀಡುತ್ತಾನೆ. ನಂತರ ನೆರೆದ ಭಕ್ತರಿಗೆ ಹಿಂಗಾರ ಹಾಗೂ ಕುಂಕುಮವನ್ನು ಪ್ರಸಾದವಾಗಿ ನೀಡುತ್ತಾನೆ. ಪ್ರಸಾದ ಸ್ವೀಕರಿಸಿ, ಭಕ್ತಿಭಾವದಿಂದ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿ ಕೈಮುಗಿಯುತ್ತಾರೆ. ಪೂಜಾರಿಯಿಂದ ದೇವಿ ನಿರ್ಗಮಿಸುತ್ತಾಳೆ. ಕೊನೆಗೆ ಎಲ್ಲಾ ಪೂಜಾರಿಗಳು ಮಹಾಮ್ಮಾಯಿಗೆ ಮಹಾಮಂಗಳಾರತಿ ಮಾಡಿ, ದೇವಿಯ ಹೊಗಳಿಕೆ ಹಾಗೂ ಶುಭನಮನಗಳನ್ನು ಹಾಡಿ ಹೊಗಳುತ್ತಾರೆ.