ಮಂಡ್ಯ ಜಿಲ್ಲೆ ಮಳವಳ್ಳಿಯ ಗ್ರಾಮದೇವತೆ ಪಟ್ಟಲದಮ್ಮ. ದೇವತೆಗೆ ವರ್ಷಕ್ಕೆ ಒಂದು ಬಾರಿ ‘ಸಿಡಿ’ ಉತ್ಸವ ನಡೆಯುತ್ತದೆ. ಸಿಡಿ ಮರಕ್ಕೆ ಮನುಷ್ಯನ ಬದಲಿಗೆ ಗೊಂಬೆ ಕಟ್ಟುವುದು ಇಲ್ಲಿಯ ವಿಶೇಷ. ಈ ಗೊಂಬೆಯನ್ನು ‘ಸಿಡಿರಣ್ಣ’ ಎಂದು ಕರೆಯುತ್ತಾರೆ. ಸಿಡಿರಣ್ಣನನ್ನು ವೃತ್ತಾಕಾರವಾಗಿ ತಿರುಗಿಸುವುದು ಸುಮಾರು ಐದು ನೂರು ವರ್ಷಗಳಿಂದಲೂ ಆಚರಣೆಯಲ್ಲಿದೆ ಎಂದು ಹೇಳುತ್ತಾರೆ. ಮನುಷ್ಯನ ಆಕೃತಿಯ ಗೊಂಬೆಯನ್ನು ಕಟ್ಟುವ ಜಾಗದಲ್ಲಿ ಬಹಳ ಹಿಂದೆ ಜೀವಂತ ಮನುಷ್ಯನನ್ನೇ ಕಟ್ಟಿ ಹಬ್ಬ ಆಚರಿಸುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.

ಪ್ರತಿ ವರ್ಷ ಫೆಬ್ರವರಿ ತಿಂಗಳ ಕಡೆಯ ಕಾರ್ತಿಕ ಸೋಮವಾರ ರಾತ್ರಿ ಗಂಗಾಮತಸ್ಥರ ಬೀದಿಯ ದೇವಾಲಯದ ಬಳಿ ಹೂವಿನ ಪಲ್ಲಕ್ಕಿ ಉತ್ಸವ ಮಾಡಿಸಿ, ಪಟ್ಟಣದ ತುಂಬೆಲ್ಲಾ ಮೆರವಣಿಗೆ ಮಾಡಿಸಲಾಗುತ್ತದೆ. ಇದೇ ಹಬ್ಬದ ಅಧಿಕೃತ ಉದ್ಘಾಟನೆ. ಹಬ್ಬಕ್ಕೆ ಹದಿನೈದು ದಿನ ಮುಂಚಿತವಾಗಿ ಎಲ್ಲಾ ಮುಖಂಡರ ಮನೆಯ ಮುಂದೆ ಹಬ್ಬ ಸಾರುತ್ತಾರೆ. ದೇವರ ಒಕ್ಕಲುಗಳು ಹಬ್ಬದ ಖರ್ಚು ವೆಚ್ಚವನ್ನು ನಿರ್ವಹಣೆ ಮಾಡುತ್ತಾರೆ. ಶುಕ್ರವಾರ ಸರಿ ರಾತ್ರಿಯ ಸಮಯದಲ್ಲಿ ಕೋಟೆ ಬೀದಿಯ ಗೌಡರ ಮನೆಯ ಮುಂದೆ ಸಿಡಿರಣ್ಣನನ್ನು ಅಲಂಕರಿಸುತ್ತಾರೆ. ನಂತರ ಎಲ್ಲಾ ವರ್ಗದ ಮುಖಂಡರು ಸಿಡಿರಣ್ಣನನ್ನು ಎಳೆದು ಭಕ್ತಿ ತೋರುತ್ತಾರೆ. ಸಿಡಿಮೆರವಣಿಗೆಯಲ್ಲಿ ಅಣ್ಣರು ತಿಬ್ಬಾದೇವಿ ಪೂಜಾ ವಿಗ್ರಹ ಮತ್ತು ತೊರೆಬೊಮ್ಮನಹಳ್ಳಿ ಪಟ್ಟಲದಮ್ಮನ ದೇವರ ಪೂಜಾ ವಿಗ್ರಹಗಳು ಸಹ ಸಾಗುತ್ತವೆ. ಜನಪದ ಕಲಾ ತಂಡಗಳಿಂದ ಮೆರವಣಿಗೆ ರಂಗೇರುತ್ತದೆ. ಸಿಡಿರಣ್ಣ ಮೆರವಣಿಗೆ ಸಾರಂಗಪಾಣಿ ದೇವಾಲಯ, ಮೂಲೆ ಗಣಪತಿ ದೇವಾಲಯ, ಕಾಳಮ್ಮನ ಗುಡಿ ಬೀದಿ, ಕೋಟೆಯ ಎರಡು ಬಾಗಿಲುಗಳನ್ನು ಹಾದು ಮದ್ದೂರು ರಸ್ತೆಯ ಕುಪ್ಪಸ್ವಾಮಿ ಸರ್ಕಲ್‌ಗೆ ಬರುತ್ತದೆ. ಮುಂದೆ ಮೆರವಣಿಗೆಯು ಪೇಟೆ ಒಕ್ಕಲ ಬೀದಿಯಲ್ಲಿ ಸಾಗಿ, ಗಂಗಾಮತಸ್ಥರ ಬೀದಿ, ಸುಲ್ತಾನ್ ರಸ್ತೆಯಲ್ಲಿ ಹಾದು ಕೆರೆಯ ಬಳಿಯಿರುವ ಪಟ್ಟಲದಮ್ಮನ ದೇವಾಲಯದ ಬಳಿ ಬಂದು ಸೇರುತ್ತದೆ.

ಸಿಡಿ ನಡೆಯುವ ದೊಡ್ಡಕೆರೆ ಬಳಿಯಿರುವ ದೇವಾಲಯದ ಹತ್ತಿರ ಸಾವಿರ ಸಂಖ್ಯೆಯ ಭಕ್ತರು ಸಿಡಿ ಮೆರವಣಿಗೆಗೆ ಹಣ್ಣು ಜವನಗಳಿಂದ ಹೊಡೆಯುತ್ತಾರೆ. ಸಿಡಿಯ ಹಿಂದಿನ ದಿನ ರಾತ್ರಿಯಿಡೀ ಒಂದೊಂದು ಕೋಮಿನವರು ಒಂದೊಂದು ಕಾರ್ಯದಲ್ಲಿ ತೊಡಗಿರುತ್ತಾರೆ. ಮಹಿಳೆಯರು ಬೆಲ್ಲದನ್ನ, ಮೊಸರನ್ನ, ಕಜ್ಜಾಯ ತುಂಬಿದ ಮಡಿಕೆಗಳನ್ನು ಹೊತ್ತು ತಂದು ಪಟ್ಟಲದಮ್ಮ ದೇವತೆಗೆ ಪೂಜೆ ಸಲ್ಲಿಸುತ್ತಾರೆ. ಆ ಸಂದರ್ಭದಲ್ಲಿ ಹರಕೆ ಹೊತ್ತವರು ಬಾಯಿಬೀಗಗಳನ್ನು ಹಾಕಿಸಿಕೊಳ್ಳುತ್ತಾರೆ. ಪೂಜೆ ಸಲ್ಲಿಸಲು ಒಂದೊಂದು ಕೋಮಿನವರಿಗೂ ಒಂದೊಂದು ಸಮಯವನ್ನು ನಿಗದಿ ಮಾಡಿರುತ್ತಾರೆ. ಕೆಲವರು ಹಗ್ಗ ನೀಡಬೇಕು, ಮತ್ತೊಬ್ಬರು ದೇವಾಲಯಕ್ಕೆ ಸುಣ್ಣ ಮಾಡಿಸಬೇಕು, ಕೊಂಡವನ್ನು ಪಕ್ಕದ ತಮ್ಮಡಹಳ್ಳಿ ಗ್ರಾಮಸ್ಥರು ತೋಡಬೇಕು, ಮಾರೆಹಳ್ಳಿ ಜನ ಸೌದೆಯನ್ನು ಸುಟ್ಟು ಕೆಂಡವನ್ನು ಮಾಡಿ ಕೊಂಡ ಹಾಯಲು ಅನುವುಮಾಡಿ ಕೊಡಬೇಕು. ಪೂಜಾರಿಯು ದೇವಾಲಯದ ಬಳಿ ಕೊಂಡಕ್ಕೆ ಪೂಜೆ ಸಲ್ಲಿಸಿ, ಬೆಂಕಿಯ ಮೇಲೆ ನಡೆದುಕೊಂಡು ಹೋಗುತ್ತಾನೆ.

ಸುಮಾರು ನಲವತ್ತನಾಲ್ಕು ಅಡಿ ಉದ್ದದ ತವಸದ ಮರದ ಕಂಬಕ್ಕೆ ಮನುಷ್ಯನನ್ನು ಹೋಲುವ ಕಂಚಿನ ಪ್ರತಿಮೆ ಕಟ್ಟಲಾಗಿರುತ್ತದೆ. ಕಂಬದ ಕೆಳಭಾಗದಲ್ಲಿ ಗಾಲಿಗಳು, ಅವುಗಳನ್ನು ತಿರುಗಿಸಲು ಹಗ್ಗ ಎಳೆಯಲು ಸಾವಿರ ಸಂಖ್ಯೆಯಲ್ಲಿ ಮುಗಿಬೀಳುತ್ತಾರೆ.