ಕುಂದಾಪುರ ತಾಲೂಕು ಬಸ್ರೂರಿನ ದೇವದಾಸಿಯರು ನಡೆಸುವ ದೇವದಾಸಿ ದೀಕ್ಷೆ. ಸಂಗೀತ, ನೃತ್ಯ ವಿದ್ಯೆಗಳಲ್ಲಿ ಪಾರಂಗತ ಪಡೆದು, ಇನ್ನೂ ದೊಡ್ಡವಳಾಗುವ ಮೊದಲೇ ಸಂಪ್ರದಾಯಕ ವಿಧಿ ವಿಧಾನಗಳಿಂದ ಗಜ್ಜೆಕಟ್ಟಿ, ರಂಗಪ್ರವೇಶ ಮಾಡಿಸುತ್ತಾರೆ. ಅಂದಿನಿಂದ ಅವಳು ದೇವದಾಸಿಯಾಗಿ ನಿಯಕ್ತಿಗೊಳ್ಳುತ್ತಾಳೆ.

ಗೆಜ್ಜೆಪೂಜೆಗೆ ಒಂದು ಗೊತ್ತಾದ ದಿನವನ್ನು ಪುರೋಹಿತರಿಂದ ತಿಳಿದು, ಮದುವೆಗೆ ಬೇಕಾದ ತಾಳಿ, ಕರಿಮಣಿ, ಬಟ್ಟೆ ಇತ್ಯಾದಿಗಳನ್ನು ಸಿದ್ಧಪಡಿಸಿಕೊಳ್ಳಲಾಗುವುದು. ಮನೆಗಳಿಗೆ ಸುಣ್ಣಬಣ್ಣದಿಂದ ಅಲಂಕರಿಸಿ, ಚಪ್ಪರಹಾಕಿ, ತಳಿರುತೋರಣಗಳಿಂದ ಶೃಂಗರಿಸುತ್ತಾರೆ. ನೆಂಟರು, ಕುಲದವರು ಮತ್ತು ಊರಿನವರು ಸೇರಿರುತ್ತಾರೆ. ಗೆಜ್ಜೆ ಪೂಜೆಯ ಎಲ್ಲಾ ಜವಾಬ್ದಾರಿಯನ್ನು ಗೆಜ್ಜೆಕಟ್ಟಿಸಿಕೊಳ್ಳುವವಳ ಸೋದರ ಮಾವ ವಹಿಸುತ್ತಾನೆ. ಮದುವೆಯ ಹಿಂದಿನ ದಿನ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಐದು ಜನ ಊರಿನ ದೇವದಾಸಿಯರು ಹುಡುಗಿಗೆ ಸ್ನಾನ ಮಾಡಿಸಿ, ಹೊಸ ಸೀರೆ, ಆಭರಣ ಮತ್ತು ಹೂಗಳಿಂದ ಅಲಂಕರಿಸಿ, ವಾದ್ಯಮೇಳಗಳೊಂದಿಗೆ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಹೋಗುತ್ತಾರೆ. ಮದುವೆಯ ಎಲ್ಲಾ ವಸ್ತು ಪರಿಕರಗಳನ್ನು ಬುಟ್ಟಿಯಲ್ಲಿ ತುಂಬಿಸಿ ತರುತ್ತಾರೆ. ದೈವದ ಪೂಜಾರಿಯು ಬುಟ್ಟಿಯಿಂದ ಕರಿಮಣಿಯೊಂದಿಗಿನ ತಾಳಿ ಸರ, ಕಾಲುಂಗುರ, ಹೂಹಾರ ಇತ್ಯಾದಿಗಳನ್ನು ತೆಗೆದು ದೇವರಿಗೆ ಅರ್ಪಿಸಿ, ಪೂಜಿಸುತ್ತಾನೆ. ಮೂಹೂರ್ತದ ಸಮಯದಲ್ಲಿ ಬ್ರಾಹ್ಮಣರಿಗೆ ಫಲ ದಾನ ನೀಡಿದ ಅರ್ಚಕರು ದೇವರಿಗೆ ಅರ್ಪಿಸಿದ ತಾಳಿ, ಕರಿಮಣಿ, ಕಾಲುಂಗುರ, ಗೆಜ್ಜೆ ಹಾಗೂ ಹೂ ಮಾಲೆಗಳನ್ನು ದೇವದಾಸಿ ಯರಿಗೆ ನೀಡುತ್ತಾನೆ. ಐದು ಜನ ದೇವದಾಸಿ ಯರು ಸೇರಿ, ದೇವದಾಸಿಯಾಗುವ ಹುಡುಗಿಗೆ ತಾಳಿಕಟ್ಟಿ, ಕಾಲುಂಗುರ ತೊಡಿಸಿ, ಕಾಲಿಗೆ ಗೆಜ್ಜೆ ಕಟ್ಟುತ್ತಾರೆ. ಗೆಜ್ಜೆ ಕಟ್ಟಿಸಿಕೊಂಡ ಹುಡುಗಿ ದೇವರಿಗೆ ಕೈಮುಗಿದು, ತನ್ನ ತಾಯಿ, ಅಜ್ಜಿ ಹಾಗೂ ಅಲ್ಲಿ ನೆರೆದ ಹಿರಿಯರೆಲ್ಲರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದು, ತಾಳ ಮದ್ದಲೆ ಹಾಗೂ ಹಾರ್ಮೋನಿಯಂ ಹಿಮ್ಮೇಳದವರಿಗೆ ವಂದಿಸಿ ‘ತಟ್ಟೆಚಾಕರಿ’ ಸೇವೆ ಮಾಡುತ್ತಾಳೆ.

‘ತಟ್ಟೆಚಾಕರಿ’ ದೇವಾಲಯದಲ್ಲಿ ಪೂಜೆಯ ನಂತರ ದೇವದಾಸಿಯರು ಹಾಡಿ ನರ್ತಿಸುವ ಸೇವೆ. ದೇವರಿಗೆ ಮುಖಮಾಡಿದ ದೇವದಾಸಿಯವರು ಆರತಿ ತಟ್ಟೆ ಹಿಡಿದು, ತಾಳದ ಲಯಕ್ಕೆ ಕುಣಿಯುತ್ತಾ ಹಿಂದೆ, ಹಿಂದೆ ಹೆಜ್ಜೆ ಹಾಕುತ್ತಾ, ದೇವರ ಮಹಿಮೆಯನ್ನು ಕುರಿತು ಹಾಡುತ್ತಿರುತ್ತಾರೆ. ಸೋದರ ಮಾವ ಅಥವಾ ಅಣ್ಣ, ತಮ್ಮಂದಿರು ತಾಳ, ಮದ್ದಲೆ ಮತ್ತು ಹಾರ್ಮೋನಿಯಂಗಳ ಹಿಮ್ಮೇಳನವನ್ನು ಒದಗಿಸುತ್ತಾರೆ.