ಉತ್ತರ ಕರ್ನಾಟಕದ ಭಾಗದಲ್ಲಿ ಕಂಡುಬರುವ ಕೃಷೀ ಸಂಬಂಧೀ ಆಚರಣೆ. ವಿಜಯದಶಮಿ ಹಬ್ಬ ಮುಗಿದ ಬಳಿಕ ರೈತರು ತಮ್ಮ ಹೊಲದಲ್ಲಿಯ ತೆನೆ ತುಂಬಿದ ಗೂಡುಗಳನ್ನು ಪೂಜಿಸುತ್ತಾರೆ. ಜೀವಿಗಳ ಜೀವನಾಡಿಯಾಗಿರುವ ರೈತ ನಡೆಸುವ ಪ್ರತಿಯೊಂದು ಆಚರಣೆ ಹಿಂದೆ ಉಪಯುಕ್ತ ವಿಚಾರಗಳಿವೆ ಎನ್ನುವುದನ್ನು ಮರೆಯುವಂತಿಲ್ಲ. ಗೂಡುಪೂಜೆ ಮೇಲ್ನೋಟಕ್ಕೆ ತೆನೆ ಪೂಜೆಯಾಗಿ ಕಂಡುಬಂದರೂ, ಅದು ಮಳೆಯಿಂದ ತೆನೆಯನ್ನು ರಕ್ಷಿಸುವ ಉಪಾಯವಾಗಿ ಪೂಜೆಯ ಮೂಲಕ ತಲೆಮಾರಿಗೆ ರವಾನೆಯಾಗುತ್ತದೆ. ಬಿಸಿಲ ಬೇಗೆ ಕಡಿಮೆಯಾಗಿರುವ ಹೊತ್ತಿಗೆ ಕಟಾವು ಮುಗಿದಿರುತ್ತದೆ. ಆಗ ಮಳೆ ಬರುವ ಎಲ್ಲಾ ಸಾಧ್ಯತೆಗಳಿರುತ್ತವೆ. ಮಳೆಯಿಂದ ಪೈರನ್ನು ರಕ್ಷಿಸಿಕೊಳ್ಳಬೇಕು. ಹಬ್ಬದ ಮೂಲಕ ಅದನ್ನು ಆಗು ಮಾಡಿಸುತ್ತದೆ. ಒಂದು ಬಗೆಯಲ್ಲಿ ಭೂಮಿ ತಾಯಿಯ ಮಡಿಲನ್ನು ಸಜ್ಜೆ, ನವಣೆ, ಎಳ್ಳು, ಗುರೆಳ್ಳು, ಜೋಳ ಮುಂತಾದ ಬೆಳೆಗಳಿಂದ ತುಂಬುವುದು ಗೂಡು ಸಂಕೇತಿಸುತ್ತದೆ. ತಾನು ಬೆಳೆದ ಮೊದಲ  ಫಲವನ್ನು ಆ ಮೂಲಕ ಭೂಮಿತಾಯಿಗೆ ಎಡೆ ಅರ್ಪಿಸುವ ವಿಧಾನವೂ ಹೌದು. ಆ ಬಗೆಗೆ ಜನಪದ ಗೀತೆಯೊಂದು ತೆನೆಗಳನ್ನು ಮುತ್ತು, ರತ್ನಗಳೆಂದು ವರ್ಣಿಸಿದೆ.

“ಮುಂಗಾರಿನ ಹಂಗಾಮು ಯ್ಯಂಗ್ಯಾಂಗ ಮುಗಿದೈತಾ,
ಮುತ್ತಿನ ಗೊನೆ ತುಂಬಿದ ತೆನೆಯ ಗೂಡಿನೊಳಗೈತಾ,
ಬೆಳ್ಳಿ ಬೆಡಗಿನ ಬಿಸಿಲೊಳಗ ರತ್ನತೆನೆ ತುಂಬಿದ ಗೂಡಾ,
ಭೂಮಿತಾಯಿ ಮಡಿಲೊಳಗೆ ದಿಟ್ಟ ಗೋಪುರದಾಗಿ ಬೆಳಗೈತಾ.”

ಗೂಡು ಪೂಜೆಗೆ ಬಂಧುಗಳನ್ನು ಕರೆಯುವ ಪದ್ಧತಿ ಇದೆ. ಅಂದು ಬೆಳಿಗ್ಗೆ ಮನೆ ಮಂದಿ, ಬಂಧುಗಳೆಲ್ಲ ಹೊಸ ಬಟ್ಟೆ ಧರಿಸಿ, ಬಂಡಿಗಳ ಮೂಲಕ ಗೂಡುಗಳಿರುವ ಹೊಲಗಳಿಗೆ ತೆರಳುತ್ತಾರೆ. ಐದು ಬೆಣಚು ಕಲ್ಲುಗಳನ್ನು ಆಯ್ದು, ತೊಳೆದು ಗೂಡಿನ ಮುಂದೆ ಇಡುತ್ತಾರೆ. ತಲೆಗೆ ಟವೆಲ್ ಸುತ್ತಿದ ರೈತನೊಬ್ಬ ಬೆಣಚು ಕಲ್ಲುಗಳ ಎರಡೂ ಬದಿಗೂ ಕುಡುಗೋಲುಗಳನ್ನು ಇಡುತ್ತಾನೆ. ನಂತರ ಮಳೆರಾಯನೇ ಈ ಪಂಚಕಲ್ಲುಗಳಲ್ಲಿ ಇಂತಹ ದೇವಗೆ ಪೂಜಿಸುವೆ ಎಂದು ವಿಭೂತಿ, ಕುಂಕುಮ, ಹೂವು, ಊದುಬತ್ತಿ, ಗಂಧದಂಥ ಪಂಚಭೂಷಣಗಳ ಮೆರಗಿನೊಂದಿಗೆ ಪೂಜಿಸುತ್ತಾನೆ. ಇನ್ನೊಬ್ಬ ರೈತ ತಲೆಗೊಂದು ಕಂಬಳಿ ಹೊದ್ದು ಹೆಗಲ ಮೇಲೆ ಸಜ್ಜೆ ಕಡುಬಿನ ಗಡಿಗೆಯ ಹೊತ್ತು, ಗಾಳಿ ದೇವಗೆ ಭೂ ದೇವರೆನ್ನುತ್ತ ಐದು ಬಾರಿ ಗೂಡು ಸುತ್ತುತ್ತಾ ಸಜ್ಜೆ, ಕಡುಬಿನ ತುಂಡುಗಳನ್ನು ನೈವೇದ್ಯವಾಗಿ ಗೂಡಿನ ಸುತ್ತಲು ಅರ್ಪಿಸುತ್ತಾನೆ. ಅದು ಭೂಮಿತಾಯಿಗೆ ತಾನು ಬೆಳೆದ ಮೊದಲ ತುತ್ತನ್ನು ಅರ್ಪಿಸುವ ಸಂಕೇತವಾಗಿ ಕಂಡುಬರುತ್ತದೆ. ಈ ಸಂದರ್ಭವನ್ನು ಗೀತೆಯೊಂದು ಹೀಗೆ  ವರ್ಣಿಸಿದೆ.

“ಮಿಂಚು ದೇವ ಪಂಚ ಕಲ್ಲುಗಳಲ್ಲಿ,
ಪಂಚಭೂಷಣದ ಮೆರಗು ಅವುಳೆಡೆಯಲಿ,
ಸಜ್ಜೆ ಕಡುಬಿನ ನೈವೇದ್ಯ ಗಾಳಿದೇವಗ, ಭೂದೇವಗೆನ್ನುತ,
ಭೂಮಿ ತಾಯಿ ಮಡಿಲೊಳಗೆ ಸಾಗೇತಿ ಗೂಡು ಪೂಜೆ ಗುಂಪಲಿ.”

ಗೂಡು ಪೂಜೆಯ ನಂತರ ಬಂಧು ಬಾಂಧವರ ಜೊತೆ ಸಾಲಾಗಿ ಕುಳಿತು ಸಹಬೋಜನ ಮಾಡುತ್ತಾರೆ. ಸಜ್ಜೆ ಕಡುಬು, ಬದನೆಕಾಯಿ ಪಲ್ಲೆ, ಬೆಲ್ಲದ ಬೇಳೆ,ಸಂಡಿಗೆ, ಹಪ್ಪಳ, ತುಪ್ಪ, ಉಪ್ಪಚ್ಚಿದ ಮೆಣಸಿನಕಾಯಿ, ಕೋಸಂಬರಿ ಬೇಳೆಯಿಂದ ಮಾಡಿದ ಸಿಹಿ, ಅನ್ನ, ಸಾರು ಇತ್ಯಾದಿಗಳು ಅಂದಿನ ಊಟದ ವಿಶೇಷ. ಊಟದ ನಂತರ ಯುವಕ ಯುವತಿಯರು ತೆನೆ ಕೊಯ್ದು ಕಣದಲ್ಲಿ ಹಾಕುವ ಪದ್ಧತಿ ಇದೆ.