ಲಕ್ಕಮ್ಮ ಮೂಕಿ ದೇವತೆ. ಊರಿನ ಜಾನುವಾರುಗಳ ಅಧಿದೇವತೆ. ಲಕ್ಕಮ್ಮನನ್ನು ಏಪ್ರಿಲ್ ತಿಂಗಳಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಜನ ಊರ ಹೊರಗೆ ಗುಳೆ ಹೋಗುವುದರ ಮೂಲಕ ಜಾತ್ರೆ ಆಚರಿಸುತ್ತಾರೆ. ಜಾತ್ರೆ ಪ್ರತಿವರ್ಷ ನಡೆಯದೆ ಮೂರು ಅಥವಾ ಐದು ವರ್ಷಗಳಿಗೊಮ್ಮೆ ನಡೆಯುತ್ತದೆ. ಅಂದು ಇಡೀ ಊರಲ್ಲಿ ಒಂದೇ ಒಂದು ನರಪಿಳ್ಳೆಯೂ  ಒಂದೇ ಒಂದು ನಾಯಿಯೂ ಇರುವುದಿಲ್ಲ. ಇಡೀ ಊರು ಯಾರದೇ ಬಲಾತ್ಕಾರವಿಲ್ಲದೇ ಗುಳೆ ಹೋಗುತ್ತದೆ. ಊರ ಹೊರಗೆ ಒಂದಾಗಿ ಗುಳೆ ಲಕ್ಕಮ್ಮನ ಜಾತ್ರೆ ಮಾಡುತ್ತಾರೆ.

ಜಾತ್ರೆಗಾಗಿ ಯಾರ ಮನೆಯಲ್ಲೂ ಸಿಂಗಾರ ಮಾಡುವುದಿಲ್ಲ. ತಳಿರು ತೋರಣ ಕಾಣುವುದೇ ಇಲ್ಲ. ಅಂದು ಕತ್ತಲು ಕಳೆದು ಬೆಳಕು ಹರಿಯುತ್ತಿದ್ದಂತೆಯೇ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಮೀಸಲು ದೇವರಿಗೆ ಸಲ್ಲಬೇಕಾದ ಗೌರವ ಪಡಿಯನ್ನು ವಿತರಿಸಿ, ನಂತರ ಒಂದು ಮೊರದಲ್ಲಿ ಲಕ್ಕಮ್ಮನ ಚಿಹ್ನೆಯನ್ನಿಟ್ಟು ಹಲಗೆ ಬಡಿಯುತ್ತ ಜನರನ್ನು ಊರಾಚೆ ಹೊರಡಿಸುತ್ತಾರೆ. ಊರಿನಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ವನದಲ್ಲಿ ಮಟಮಟ ಮಧ್ಯಾಹ್ನ ಸೇರುತ್ತಾರೆ. ಊರಿಗೆ ಅಂದು ಅನಾಮಿಕರು, ಬಂಧುಗಳು ಪ್ರವೇಶಿಸದಿರಲೆಂದು ಅಗಿಸೆ ಬಾಗಿಲಲ್ಲಿ ಒಂದು ತಂಡ ನಿಂತು ಮಾಹಿತಿ ನೀಡುತ್ತದೆ.

ಇತ್ತ ಗುಳೆಹೋದ ತಂಡ ಮರದ ನೆರಳನ್ನು ಆಶ್ರಯಿಸಿ ಅರವಟ್ಟಿಗೆಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಅಂದು ಬಂದ ಬಂಧುಗಳಿಗೆ ಸಂಭ್ರಮದ ಸ್ವಾಗತ. ಬಗೆ ಬಗೆಯ ತಿಂಡಿ ತಿನಿಸುಗಳನ್ನು ನೀಡಿ, ಉಪಚರಿಸುತ್ತಾರೆ. ವಿವಿಧ ಬಗೆಯ ಜನಪದ ಕಲಾಮೇಳಗಳ ಪ್ರದರ್ಶನಗಳೊಂದಿಗೆ ಲಕ್ಕಮ್ಮನಿಗೆ ಸರಳವಾದ ಪೂಜೆ ನಡೆಯುತ್ತದೆ. ದೇವಿಗೆ ಹೊತ್ತ ಹರಕೆಗಳನ್ನು ಅರ್ಪಿಸಿ ತಮ್ಮ ಭಕ್ತಿಯನ್ನು ತೋರುತ್ತಾರೆ.

ಸಂಜೆ ಗೋಧೂಳಿ ಸಮಯಕ್ಕೆ ಸರಿಯಾಗಿ ಚರಗವನ್ನು ಚೆಲ್ಲುತ್ತಾ ಮುಂದೆ ಮುಂದೆ ಸಾಗುತ್ತಾರೆ. ಲಕ್ಕಮ್ಮ ದೇವಿಯ ಹೊತ್ತು ಮೆರವಣಿಗೆಯ ಮೂಲಕ ಪಟ್ಟಣವನ್ನು ಪ್ರವೇಶ ಮಾಡುತ್ತಾರೆ. ಆಗಲೇ ಊರಿನ ಪ್ರವೇಶದ್ವಾರದಲ್ಲಿ ಬಂಡೆಕಲ್ಲಿನ ಬಳಿ ನಿರ್ಮಿಸಲಾದ ಅಗ್ಗಿಷ್ಟಿಕೆಯಿಂದ ಬೆಂಕಿಯನ್ನು ಕಾಕುಳ್ಳು ಎಂಬ ಸಾಧನದಲ್ಲಿ ಸಂಗ್ರಹಿಸಿಕೊಂಡು ತಮ್ಮ ತಮ್ಮ ಗೃಹಗಳಿಗೆ ಒಯ್ಯುತ್ತಾರೆ. ತಮ್ಮ ಮನೆಯ ಮುಚ್ಚಿದ ಬಾಗಿಲಿಗೆ ಪೂಜಿಸಿ, ಹಟ್ಟಿಗೆ ಕಾಯಿ ಒಡೆದು ನಂತರ ಗೃಹ ಪ್ರವೇಶ ಮಾಡಿ, ಅಗ್ಗಿಷ್ಟಿಕೆಯಿಂದ ತಂದ ಬೆಂಕಿಯಿಂದ ಮನೆಯ ದೀಪವನ್ನು ಬೆಳಗುತ್ತಾರೆ.

ಜಾತ್ರೆಯಲ್ಲಿ ಸಾಮೂಹಿಕವಾಗಿ ವನಬೋಜನ ಮಾಡುವುದರ ಮೂಲಕ  ಹಳೆಯ ಜಗಳ, ಮನಸ್ತಾಪಗಳನ್ನು ಮರೆತು ಒಂದಾಗುತ್ತಾರೆ. ಜಾತ್ರೆಯನ್ನು ಊರಾಚೆ ಹೋಗಿ ಮಾಡುವುದರಿಂದ ಸಾಂಕ್ರಾಮಿಕ ರೋಗ ಇತ್ಯಾದಿ ಅನಿಷ್ಠಗಳು ಬರುವುದಿಲ್ಲವೆಂದು ನಂಬುತ್ತಾರೆ.