ಕೃಷಿಸಂಬಂಧೀ ಹಬ್ಬವಾದ ಇದನ್ನು ಉತ್ತರ ಕರ್ನಾಟಕದ ಭಾಗದಲ್ಲಿ ಆಚರಿಸುತ್ತಾರೆ. ಪ್ರತಿ ವರ್ಷ ಆಷಾಢ ಮಾಸದಲ್ಲಿ ಬರುವ ಈ ಹಬ್ಬವನ್ನು ಮಣ್ಣೆತ್ತಿನ ಅಮಾವಾಸ್ಯೆಯಿಂದ ನಾಗರ ಅಮಾವಾಸ್ಯೆಯವರೆಗೆ ಒಂದು ತಿಂಗಳ ಕಾಲ ಆಚರಿಸಲಾಗುತ್ತದೆ. ಹೆಣ್ಣುಮಕ್ಕಳ ಅತ್ಯಂತ ವೈಭವದ ಹಬ್ಬ. ಗುಳ್ಳವ್ವ ಪಾರ್ವತಿಯ ಪ್ರತಿರೂಪವೆಂದೇ ತಿಳಿಯಲಾಗಿದೆ. ಗುಳ್ಳವ್ವವನ್ನು ಚನಮೀರಿ, ಚನ್ನವ್ವ, ಕೊಂತಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಆಷಾಢದ ಮಂಗಳವಾರ ಗೆಳತಿಯರೆಲ್ಲ ಸೇರಿ ಹತ್ತಿರದ ಕೆರೆ ಅಥವಾ ಹೊಳೆಗಳಿಗೆ ಮಣ್ಣು ತರಲು ಹೋಗುತ್ತಾರೆ. ಗುಳ್ಳೆವ್ವ ಮೂರ್ತಿಗೆ ಬೇಕಾದ ಎರೆಮಣ್ಣನ್ನು ಸಂಗ್ರಹಿಸಿ, ತಾವು ತಂದಿದ್ದ ತಿಂಡಿ, ತಿನಿಸು, ಚುರುಮುರಿ, ಶೇಂಗಾ, ಬೆಲ್ಲ, ಅರಳು, ಕಡ್ಲಿ, ಪುಟಾಣಿಗಳನ್ನು ಹಂಚಿ ತಿನ್ನುತ್ತಾರೆ. ಮಣ್ಣನ್ನು ಹೊತ್ತ ಮಹಿಳೆಯರ ತಂಡ ಗುಳ್ಳವ್ವನ ಹಾಡುಗಳನ್ನು ಹೇಳುತ್ತಾ ಊರ ಕಡೆ ಬರುತ್ತಾರೆ.

ನಿಗದಿತ ಸ್ಥಳವನ್ನು ಸಗಣಿಯಿಂದ ಸಾರಿಸಿ, ಗುಳ್ಳವನ ಮೂರ್ತಿಯನ್ನು ಮಾಡುತ್ತಾರೆ. ಅರಿಶಿಣ, ಕುಂಕುಮ, ಸರ, ಮತ್ತಿನ ಮತ್ತು ಪಿಲ್ಲೆ, ವಾಲಿ, ಡಾಬುಗಳಿಂದ ಅಲಂಕರಿಸುತ್ತಾರೆ. ವಿವಿಧ ಬಗೆಯ ಹೂಹಾರಗಳನ್ನು ಹಾಕಿ, ಪೂಜಿಸಿ, ನೈವೇದ್ಯ ಅರ್ಪಿಸುತ್ತಾರೆ. ನಂತರ ಗುಳ್ಳವ್ವನನ್ನು ಆಡಲಿಕ್ಕೆ ಹೋಗುತ್ತಾರೆ. ಒಂದೆತ್ತರ ಗುಳ್ಳವ್ವ, ಎರಡೆತ್ತರ ಗುಳ್ಳವ್ವ, ಮೂರೆತ್ತರ ಗುಳ್ಳವ್ವ, ನಾಲ್ಕೆತ್ತರ ಗುಳ್ಳವ್ವ, ಐದೆತ್ತರ ಗುಳ್ಳವ್ವ ಹೀಗೆ ವಾರಕ್ಕೊಂದು ಎತ್ತರ ಏರಿಸುವ ಪದ್ಧತಿ ಇದೆ. ಗುಳ್ಳವ್ವನನ್ನು ಆಡಲು ಹೋಗುವ ಹೆಣ್ಣುಮಕ್ಕಳು ಗೋಧಿ ಪಾಯಸ, ಶ್ಯಾವಿಗಿ ಪಾಯಸ, ಗವಲಿ ಪಾಯಸ, ಗುಳಗಿ ಪಾಯಸ, ಚಪಾತಿ, ಹುಗ್ಗಿ, ಹೋಳಿಗೆ ಇತ್ಯಾದಿ ಸಿಹಿ ಅಡುಗೆಯನ್ನು ತಮ್ಮ ಶಕ್ತ್ಯಾನುಸಾರ ಮಾಡಿಕೊಂಡು ಹೋಗುತ್ತಾರೆ. ಜೊತೆಗೆ ಮಣ್ಣಿನಿಂದ ಮಾಡಿದ ಆರತಿ ಹಾಗೂ ದೀಪದಾರತಿಯನ್ನು ತೆಗೆದುಕೊಂಡು, ಮನೆಯಿಂದ ಮನೆಗೆ ಹೋಗುತ್ತಾರೆ. ಪ್ರತಿ ಮನೆಯಲ್ಲೂ ಗುಳ್ಳವ್ವನಿಗೆ ಮಣ್ಣಿನಾರತಿ ಮಾಡುತ್ತಾ ಗುಳ್ಳವ್ವನ ಹಾಡು ಹೇಳಿ, ತಮ್ಮ ಬಳಿಯಿರುವ ಮಣ್ಣಿನ ಆಟಿಕೆಗಳನ್ನು ನೀಡುತ್ತಾರೆ.

ಮೊದಲನೆಯ ಮಂಗಳವಾರ ಲಿಂಗಾಕಾರದ ಗುಳ್ಳವ್ವ, ಎರಡನೆಯ ಮಂಗಳವಾರ ಗುಡಿಯಕಾರದ ಗುಳ್ಳವ್ವ, ಮೂರನೆಯ ಮಂಗಳವಾರ ಕಟ್ಟಿಯಕಾರದ ಗುಳ್ಳವ್ವ, ನಾಲ್ಕನೆಯ ಗುಳ್ಳವ್ವ ನವಿಲಾಕಾರ ಹಾಗೂ ಐದನೆಯದು ಚೆಂಗುಳ್ಳೆವ್ವ ಎಂದು ಕರೆಯುವ ಪದ್ಧತಿ ಇದೆ. ಗುಳ್ಳವ್ವನನ್ನು ಆಡುತ್ತಾ ಹೆಣ್ಣುಮಕ್ಕಳು ನದಿ ತೀರದ ಕಡೆಗೆ ಹೋಗಿ ಗುಳ್ಳವ್ವನ ಪೂಜಿಸಿ, ನೈವೇದ್ಯ ಮಾಡುತ್ತಾರೆ. ನಂತರ ಗುಳ್ಳವ್ವನ ಸಾವನ್ನು ಕುರಿತ ಹಾಡುಗಳನ್ನು ಹೇಳುತ್ತಾ ನೀರಿಗೆ ವಿಸರ್ಜಿಸುತ್ತಾರೆ. ತಾವು ಕೊಂಡುಹೋದ ಸಿಹಿ ಅಡುಗೆಯನ್ನು ಹಂಚಿಕೊಂಡು ಉಣ್ಣುತ್ತಾರೆ. ಗುಳ್ಳವ್ವನ ಆಚರಣೆ ಕೊಂತಿ ಆಚರಣೆಯನ್ನು ಸ್ವಲ್ಪಮಟ್ಟಿಗೆ ಹೋಲುತ್ತದೆ.