ವಾಲ್ಮೀಕಿ ನಾಯಕ ಸಮುದಾಯದ ಆರಾಧ್ಯ ದೈವ. ಉತ್ತರ ಕರ್ನಾಟಕದ ಭಾಗಗಳಲ್ಲಿ ಹೆಚ್ಚಾಗಿ ಗುಡ್ಡೇಕಲ್ಲುಗಳ ಆರಾಧನೆ ಕಂಡುಬರುತ್ತದೆ. ಜೀವನಾವರ್ತನ ಹಾಗೂ ವಾರ್ಷಿಕಾವರ್ತನ ಆಚರಣೆಗಳಲ್ಲಿ ಗುಡ್ಡೇಕಲ್ಲುಗಳು ಮೊದಲು ಪೂಜೆಗೊಳ್ಳುತ್ತವೆ. ಸಮುದಾಯದ ಜನರು ವಾಸವಿರುವ ಊರುಗಳನ್ನು ಕೇರಿಗಳೆಂದು ಕರೆಯುತ್ತಾರೆ. ಒಟ್ಟು ಏಳು ಕೇರಿಗಳು ಸೇರಿ ಒಂದು ದೊಡ್ಡ ಗ್ರಾಮವಾಗಿರುತ್ತದೆ. ಊರಿಗೆ ತಗಲುವ ಪೀಡೆ, ಅನಿಷ್ಟ ಇತ್ಯಾದಿ ಕೆಟ್ಟ ಶಕ್ತಿಗಳನ್ನು ತಡೆಯುವ ಕಾರ್ಯವನ್ನು ಗುಡ್ಡೇಕಲ್ಲುಗಳು ಮಾಡುತ್ತವೆ ಎಂಬ ನಂಬಿಕೆ ಇದೆ. ಊರಿಗೆ ಯಾರೇ ಬಂದರೂ ಮೊದಲು ಗುಡ್ಡೇಕಲ್ಲಿಗೆ ನಮಸ್ಕರಿಸಿಯೇ ಪ್ರವೇಶ ಮಾಡ ಬೇಕು.

ಗುಡ್ಡೇಕಲ್ಲಿನ ಪ್ರತಿಷ್ಠಾಪನೆಯೂ ವಿಚಿತ್ರವೂ, ವಿಶಿಷ್ಟವೂ ಆಗಿದೆ. ಸಮುದಾಯದ ಹಿರಿಯರೊಂದಿಗೆ ಎಲ್ಲರೂ ಸೇರಿ ಊರಿನ ಪ್ರವೇಶ ದ್ವಾರದ ಬಳಿ ನೆಲವನ್ನು ಅಗೆದು ಕಂದಕವನ್ನು ತೆಗೆಯುತ್ತಾರೆ. ನಸುಕಿ ನಲ್ಲಿ ಕಂದಕವನ್ನು ಪೂಜಿಸಿ, ಜೀವಂತ ಹಂದಿಯೊಂದನ್ನು ಲಿಂಬೆಹಣ್ಣುಗಳ ಜೊತೆ ಪೂಜಿಸಿ, ಮಣ್ಣು ಮುಚ್ಚಲಾಗುತ್ತದೆ. ನಂತರ ಹಂದಿಯ ಜೀವಂತ ಸಮಾಧಿಯ ಮೇಲೆ ಒಂದು ಕಲ್ಲನ್ನು ನೆಟ್ಟು, ಎಣ್ಣೆಹಚ್ಚಿ, ಹೂಗಳಿಂದ ಅಲಂಕರಿಸಿ, ಕುಂಕುಮದ ತಿಲಕವಿಟ್ಟು, ನೈವೇದ್ಯ ಅರ್ಪಿಸಿ, ಪೂಜಿಸುತ್ತಾರೆ. ಅಂದಿನಿಂದ ಆ ಕಲ್ಲು ಊರನ್ನು ಕಾಯುವ ಶಾಶ್ವತ ಕಾವಲುದೈವವಾಗಿ ನಿಲ್ಲುತ್ತದೆ.

ಗುಡ್ಡೇಕಲ್ಲುಗಳನ್ನು ಸಾಕ್ಷಾತ್ ಭೂಮಿತಾಯಿ ಎಂದೇ ಹೇಳಲಾಗುತ್ತಿದೆ. ಕೆಲವು ಭಾಗಗಳಲ್ಲಿ ಭರಮಪ್ಪ ಎಂತಲೂ ಇನ್ನೂ ಕೆಲವು ಭಾಗಗಳಲ್ಲಿ ದುರುಗಮ್ಮನೆಂದು ಕರೆಯುತ್ತಾರೆ.