ಭೂಮಿ ಹುಣ್ಣಿಮೆಯಂದು ಮಕ್ಕಳು ಆಚರಿಸುವ ಆಚರಣೆ. ಸಾಗರ ತಾಲ್ಲೂಕಿನ ಸೂರುಗುಪ್ಪ, ಹಿರೇನಲ್ಲೂರು, ಯಲಕುಂದ್ಲಿ ಮುಂತಾದ ಊರುಗಳಲ್ಲಿ ಮಾತ್ರ ಕಂಡು ಬರುತ್ತದೆ. ಹೊಲದ ಪಕ್ಕದಲ್ಲಿ ಹುಲ್ಲು ಬೆಳೆಯುವ ವಿಸ್ತಾರವಾದ ಜಾಗದಲ್ಲಿ ಮಕ್ಕಳು, ದನಕರುಗಳಿಗೆ ಆಹಾರ ನೀಡುವ ಭೂಮಿ ತಾಯಿಯನ್ನು ಭಕ್ತಿಗೌರವಗಳಿಂದ ಎಡೆಹಾಕಿ ಪೂಜಿಸಿ, ಬಯಕೆ ತೀರಿಸಿ, ಬಾಗಿನ ಅರ್ಪಿಸುವ ವಿಶೇಷ ಆಚರಣೆ. ದೊಡ್ಡವರು ಆಚರಿಸುವ ಭೂಮಿ ಹುಣ್ಣಿಮೆಯಲ್ಲಿ ಮಕ್ಕಳು ಇರುತ್ತಾರೆ. ಆದರೆ ಅದೇ ದಿನ ಮಕ್ಕಳು ಆಚರಿಸುವ ಗುಡ್ಡೆ ಹುಣ್ಣಿಮೆಯಲ್ಲಿ ದೊಡ್ಡವರು ಇರುವುದಿಲ್ಲ. ಮಕ್ಕಳೇ ತಮಗೆ ತಿಳಿದಂತೆ ಹಬ್ಬ ಆಚರಣೆ ಮಾಡುತ್ತಾರೆ.

ಹೆಂಗಸರು ರಾತ್ರಿಯೆಲ್ಲಾ ನಿದ್ದೆ ಬಿಟ್ಟು ತಯಾರಿಸಿದ ಅಡುಗೆಯನ್ನು ಸಣ್ಣ ಭುಮ್ಮಣಿ ಬುಟ್ಟಿಯಲ್ಲಿ ತುಂಬಿಸಿಕೊಂಡ ಮಕ್ಕಳು ಅಂದಿನ ಪೂಜೆಗೆ ಬೇಕಾದ ವಸ್ತು, ಬಾಳೆ ಎಲೆ, ಸಣ್ಣ ಬಳೆ, ಹೋಳಿಗೆ ಇತ್ಯಾದಿ ಸಿಹಿ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಪೂಜೆಯ ಸ್ಥಳಕ್ಕೆ ಹೋಗುತ್ತಾರೆ. ಪ್ರತಿ ಮನೆಯಿಂದಲೂ ಬಂದ ಚಿಣ್ಣರು ಬೇಣದಲ್ಲಿರುವ ದೇವರ ಮೂರ್ತಿಗೆ ಮೊದಲು ಗಂಧ, ಪುಷ್ಪಗಳಿಂದ ಅಲಂಕರಿಸಿ, ಆರತಿ ಬೆಳಗಿ, ಎಡೆ ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಅಲ್ಲೇ ದಟ್ಟವಾಗಿ ಬೆಳೆದ ಹುಲ್ಲಿಗೂ ಬಳೆ, ಕುಂಕುಮ, ಹೂಗಳಿಂದ ಅಲಂಕರಿಸಿ, ಐದು ಬಾಳೆ ಎಲೆಯ ಮೇಲೆ ತಾವು ಮನೆಯಿಂದ ತಂದಿದ್ದ ಅಡುಗೆಯನ್ನು ಬಡಿಸಿ, ಸಾಲಾಗಿ ಇಟ್ಟು ತೆಂಗಿನಕಾಯಿ ಒಡೆದು, ಆರತಿ ಬೆಳಗಿ ಗುಡ್ಡೆಗೆ ಸಾಂಪ್ರದಾಯಿಕ ಬಾಗಿನ ಅರ್ಪಿಸುತ್ತಾರೆ. ಎಲ್ಲರೂ ಕೈಮುಗಿಯುತ್ತಾರೆ. ಮಕ್ಕಳು ಮನೆಯಿಂದ ತಂದ ಕಂಬಳಿಗಳನ್ನು ಸಾಲಾಗಿ ಹಾಸಿ, ಅದರ ಮೇಲೆ ಎಲ್ಲರೂ ಕುಳಿತು ಎಡೆಯನ್ನು ಊಟ ಮಾಡುತ್ತಾರೆ. ಊಟ ಮುಗಿದ ನಂತರ ಆಟವೂ ಇರುತ್ತದೆ. ಮನೆಗೆ ಮರಳುವ ಮುನ್ನ ಮಕ್ಕಳು ಮತ್ತೊಮ್ಮೆ ಪೂಜೆ ಸಲ್ಲಿಸುವುದು ಇಲ್ಲಿನ ರೂಢಿ.