ಉತ್ತರ ಕರ್ನಾಟಕ ಕಡೆಗಳಲ್ಲಿ ಕಂಡುಬರುವ ಬೇಟೆ ಜಾತ್ರೆ. ಹೋಳಿ ಹುಣ್ಣಿಮೆ ಹಬ್ಬದ ನಂತರ ಈ ಬೇಟೆ ಆರಂಭವಾಗುತ್ತದೆ. ಐದು ದಿನ ನಡೆಯುವ ಹೋಳಿ ಹುಣ್ಣಿಮೆ ಮುಗಿಸಿ ಆರನೇ ದಿನ ಊರಿನ ಎಲ್ಲರೂ ಒಂದೆಡೆ ಸೇರುತ್ತಾರೆ. ಕಾಮದಹನ ಮುಗಿದ ಮಾರನೇ ದಿನ ನಸುಕಿನಲ್ಲೇ ಊರಿನ ತಳವಾರನೊಬ್ಬ, ಬೀದಿ ಬೀದಿಗಳಲ್ಲಿ ತಮಟೆ ಬಡಿದು ಸಮೂಹ ಬೇಟೆಗೆ ಕರೆ ನೀಡುತ್ತಾನೆ.

ತಳವಾರನ ಕರೆ ಆಲಿಸಿದ ಜನ ನಿರ್ದಿಷ್ಟ ಸ್ಥಳಕ್ಕೆ ಬೇಟೆ ಸಾಮಾಗ್ರಿಗಳನ್ನು ಹಿಡಿದು ಬೇಟೆ ನಾಯಿಗಳೊಂದಿಗೆ ಬಂದು ಸೇರುತ್ತಾರೆ. ಕಾಡಿನಲ್ಲಿ ಊಟಕ್ಕಾಗಿ ಬುತ್ತಿಯನ್ನು ಪ್ರತಿಯೊಬ್ಬರು ಇಟ್ಟುಕೊಂಡಿರುತ್ತಾರೆ. ನಂತರ ಎಲ್ಲರೂ ಕಾಡಿನ ಕಡೆಗೆ ನಾಯಿಗಳೊಂದಿಗೆ ನುಗ್ಗುತ್ತಾರೆ. ತಮಟೆ ಬಡಿಯುತ್ತ ತಂಡೊಪತಂಡವಾಗಿ ಕಂಡ ಮುಳ್ಳು ಪೊದೆ, ಮಟ್ಟಿ, ಗಿಡಗಂಟಿಗಳನ್ನು ಬಿಡದೆ ದೊಣ್ಣೆ ಗಳಿಂದ ಬಡಿಯುತ್ತಾ ಪ್ರಾಣಿಗಳನ್ನು ಓಡಿಸಿ, ಹೊಡೆದು ಕೊಲ್ಲುತ್ತಾರೆ. ಬೇಟೆಗಾರರು ಕಾಡಿನಲ್ಲಿ ಸಿಗುವ, ತಾವು ತಿನ್ನದ ಉಡ, ಗೋಸುಂಬೆ, ಕಾಗೆ, ಗೂಗೆಗಳನ್ನು ಬಡಿದು ಕೊಲ್ಲುತ್ತಾರೆ. ಕಾಡು ಹಂದಿ ಇತ್ಯಾದಿ ಪ್ರಾಣಿಗಳನ್ನು ಓಡಿಸಿ, ಓಡಿಸಿ, ಬಡಿಗೆಯಿಂದ ಬಡಿದು, ಮಚ್ಚಿನಿಂದ ಕಡಿದು, ಕಾಲು ಮುರಿದು ಓಡದಂತೆ ಮಾಡುತ್ತಾರೆ. ಹಂದಿಗಳ ಕಾಲು ಗಳನ್ನು ಬಳ್ಳಿಯಿಂದ ಕಟ್ಟಿ, ಮಧ್ಯೆ ದೊಣ್ಣೆ ತೋರಿಸಿ, ಇಬ್ಬರು ಹೊತ್ತು ಸಾಗಿಸುತ್ತಾರೆ.

ಬೇಟೆಯಾಡಿದ ನೂರಾರು ಪ್ರಾಣಿಗಳನ್ನು ಹೊತ್ತ ಬೇಟೆಗಾರರು ಊರು ಪ್ರವೇಶ ಮಾಡುವಾಗ ನೆರೆದ ಸಮೂಹವೂ ಮೆರವಣಿಗೆಯಲ್ಲಿ ಸೇರಿ ಎಲ್ಲರೂ ವಾದ್ಯಗಳೊಂದಿಗೆ ನಡೆಯುತ್ತಾರೆ. ಅಲ್ಲಿಗೆ ಊರಿನ ಬೇಟೆ ಜಾತ್ರೆ ಮುಗಿಯುತ್ತದೆ. ಹೀಗೆ ಉತ್ತರ ಕರ್ನಾಟಕದ ಊರು ಊರುಗಳಲ್ಲಿ ಹೋಳಿಯಿಂದ ಆರಂಭವಾದ ಬೇಟೆ ಜಾತ್ರೆ ಮುಂದೆ ಒಂದು ತಿಂಗಳು ಸತತವಾಗಿ ನಡೆಯುತ್ತದೆ. ಊದಾಹರಣೆಗೆ ರಂಗನಾಥನ ಬೇಟೆ ಜಾತ್ರೆ, ಬಾವಲತ್ತಿ ರಂಗನಾಥನ ಬೇಟೆ ಜಾತ್ರೆ, ಬದಾಮಿ ಬನಶಂಕರಿ ಗುಡ್ಡದ ಬೇಟೆ ಜಾತ್ರೆ, ರಾಮದುರ್ಗ ಬೇಟೆ ಜಾತ್ರೆ, ಲೋಕಾಪುರ ಬೇಟೆ ಜಾತ್ರೆ, ರೋಣ, ಬಿಜಾಪುರಗಳ ಬೇಟೆ ಜಾತ್ರೆ… ಹುಕ್ಕೇರಿ, ಗೋಕಾಕ, ಮುಧೋಳ, ಬಾಗಲಕೋಟೆ, ಲಿಂಗಸಗೂರು, ಖಾನಾಪುರ, ಸವದತ್ತಿ, ಕಮತಗಿ, ಸಿರಸಂಗಿ, ಬೂದನೂರು, ಬೈಲಹೊಂಗಲ, ಜಮಖಂಡಿ, ಕೌಜಲಗಿ ಇತ್ಯಾದಿ ಊರುಗಳಲ್ಲಿ ಬೇಟೆ ಜಾತ್ರೆ ನಡೆಯುತ್ತದೆ.