ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಗ್ರಾಮದೇವತೆ. ವರ್ಷಕ್ಕೆ ಒಂದು ಬಾರಿ ದೀಪಾವಳಿಯ ಬಲಿಪಾಡ್ಯಮಿ ಮರುದಿನ ನಡೆಯುವ ಗ್ರಾಮದೇವರ ಉತ್ಸವ. ಸಂಬಂಧಿಸಿದ ಊರಿನ ದೇವತೆಗಳು ಸಕಲೇಶಪುರ ತಾಲ್ಲೂಕಿನ ಹಾನುಬಾಳು ಗ್ರಾಮದ ‘ಉದ್ದಿಗುಡ್ಡ’ಕ್ಕೆ ಮೆರವಣಿಗೆಯಲ್ಲಿ ಬರುತ್ತವೆ. ಆಯಾಯ ಊರಿನವರು ದೇವರ ಮೆರವಣಿಗೆಯಲ್ಲಿ ಉದ್ದದ ಸತ್ತಿಗೆ ಹೊತ್ತು ಬರುವುದು ಈ ಆಚರಣೆಯ ವಿಶೇಷ. ಯಾವ ಗ್ರಾಮದವರು ಹೊತ್ತು ತಂದ ಬಿದಿರಿನ ಸತ್ತಿಗೆ ಹೆಚ್ಚು ಉದ್ದವಾಗಿರುತ್ತದೋ ಆ ಗ್ರಾಮದ ಜನರಿಗೆ ಹೆಚ್ಚು ಗೌರವ. ಉತ್ಸವದಲ್ಲಿ ಮಲೆನಾಡಿನ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಜನ ಸೇರಿರುತ್ತಾರೆ. ಈ ಜಾತ್ರೆಯನ್ನು ‘ಉದ್ದಿ ಜಾತ್ರೆ’ ಎಂದು ಕರೆಯುತ್ತಾರೆ.

ಜಾತ್ರೆಗೆ ಹಿಂದಿನ ದಿನ ಗುಂಡುಬ್ರಹ್ಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಸುಗ್ಗಿ ಹಾಗೂ ಕೆಂಡೋತ್ಸವ ನಡೆಸುತ್ತಾರೆ. ಜಾತ್ರೆಯಂದು ಬೆಳಿಗ್ಗೆ ಆಯಾಯ ಗ್ರಾಮಗಳ ಗುಂಡುಬ್ರಹ್ಮ ದೇವಸ್ಥಾನದ ಎದುರು ಸಿದ್ಧವಾದ ಕೆಂಡದ ಕೊಂಡವನ್ನು ಹಾಯ್ದು, ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ತರುತ್ತಾರೆ. ಮೆರವಣಿಗೆಯಲ್ಲಿ ಅಗನಿ, ಹಾನುಬಾಳು ಹಾಗೂ ಮಕ್ಕಿಹಳ್ಳಿ ಗ್ರಾಮಸ್ಥರು, ಗುಂಡುಬ್ರಹ್ಮ ಸಹೋದರ ಉತ್ಸವಮೂರ್ತಿಗಳನ್ನು ಸೇರಿಸಿಕೊಂಡಿರುತ್ತಾರೆ. ಹಳದಿ ಬಣ್ಣದ ಚೆಂಡು ಹೂಗಳಿಂದ ಗುಂಡುಬ್ರಹ್ಮ ಉತ್ಸವಮೂರ್ತಿಗಳನ್ನು ಅಲಂಕರಿಸುತ್ತಾರೆ.

ಕರಡಿವಾದ್ಯ, ಸುಗ್ಗಿ ಕುಣಿತ, ಗೊಂಬೆ ಕುಣಿತ, ಹುಲಿವೇಷ ಇತ್ಯಾದಿಗಳಿಂದ ಉತ್ಸವ ರಂಗೇರುತ್ತದೆ. ಉದ್ದಿಗುಡ್ಡ ತಲುಪಿದ ನಂತರ ಆಯಾಯ ದೇವರುಗಳಿಗೆ ಪ್ರತ್ಯೇಕವಾಗಿ ಮಾಡಿದ ಪುಷ್ಪಾಲಂಕೃತಗೊಂಡ ಕಟ್ಟೆಗಳ ಆಸನಗಳ ಮೇಲೆ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾರೆ. ಸಂಜೆಯವರೆಗೂ ಭಕ್ತರು ವಿವಿಧ ಬಗೆಯ ಹರಕೆ, ಸೇವೆ ಇತ್ಯಾದಿಗಳನ್ನು ಸಲ್ಲಿಸುತ್ತಾರೆ. ಜಾತ್ರೆಯ ಕೊನೆಯಲ್ಲಿ ಮತಾಪುಗಳನ್ನು ಹಾರಿಸಿ ಸಂಭ್ರಮಿಸುತ್ತಾರೆ.