ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಂಬಲಗಿರಿ, ಮೂರು ನಾಮದ ಆಕೃತಿಯಂತಿದೆ. ಅಂಬಲಗಿರಿಯ ದೈವ, ಲಕ್ಷ್ಮೀವೆಂಕಟರಮಣಸ್ವಾಮಿ. ಗಿರಿಯ ತಪ್ಪಲಲ್ಲಿ ಒಂದು ಪುಟ್ಟ ಕೊಳವಿದ್ದು, ಗಿರಿಯ ಚಾರಣಕ್ಕೆ ಮೊದಲು ಅದರಲ್ಲಿ ಮುಖತೊಳೆದು, ಸ್ನಾನ ಮಾಡುವುದು ಪದ್ಧತಿ. ವೆಂಕಟತೀರ್ಥ ಎಂದು ಕರೆಯುವ ಕೊಳ ಯಾವಾಗಲೂ ನೀರಿನಿಂದ ತುಂಬಿಕೊಂಡಿರುತ್ತದೆ. ಅದರ ಆಸುಪಾಸಿನಲ್ಲಿ ನೀರಿನ ಸುಳಿವೇ ಇಲ್ಲದಿದ್ದರೂ ಬೆಟ್ಟದ ತಪ್ಪಲಿನ ಈ ಕೊಳದಲ್ಲಿ ನೀರಿರುವುದು ವಿಶೇಷ. ಗಿರಿ ಪ್ರದಕ್ಷಿಣೆಗೆ ಮೊದಲು ಬೆಟ್ಟದ ಬುಡದಲ್ಲಿ ಕುಳಿತು ನಂತರ ಎಲ್ಲರೂ ಹೊರಡುತ್ತಾರೆ. ಪ್ರತಿ ಹುಣ್ಣಿಮೆಯಂದು ವಿಶಿಷ್ಟ ಗಿರಿ ಪ್ರದಕ್ಷಿಣೆ ನಡೆಯುತ್ತದೆ.

ಹಳ್ಳಿಗರು, ಪಟ್ಟಣಿಗರು, ಹೆಂಗಸರು, ಗಂಡಸರು ಭಜನಾ ಚಾರಣದಲ್ಲಿ ಪಾಲ್ಗೊಳ್ಳಲು ಹುಣ್ಣಿಮೆಯ ದಿನ ಇಲ್ಲಿ ಸೇರುತ್ತಾರೆ. ಯಾರು ಕರೆಯದ ಪ್ರದಕ್ಷಿಣೆಗೆ ಸುಮಾರು ನಾಲ್ಕು ಸಾವಿರ ಭಕ್ತರು ಜಮಾಯಿಸುತ್ತಾರೆ. ಭಕ್ತರು ಭಜನೆ ಮಾಡುತ್ತಾ ಗಿರಿ ಪ್ರದಕ್ಷಿಣೆಗೆ ಸಾಲುಗಟ್ಟಿ ಸಾಗುತ್ತಾರೆ. ಕೆಲವು ವಿಶೇಷ ಸಂದರ್ಭಗಳಲ್ಲಿ ವೆಂಕಟೇಶ್ವರ – ತಾತಯ್ಯ ಉತ್ಸವ ಮೂರ್ತಿಗಳನ್ನು ಗಿರಿ ಪ್ರದಕ್ಷಿಣೆ ಮಾಡುವ ಪದ್ಧತಿ ಇದೆ. ಹಸು, ಹುಲಿಗೆ ಹಾಲುಣಿಸುತ್ತಿದ್ದ ಪುಣ್ಯ ಸ್ಥಳವೆಂದು ನಂಬಿಕೆ ಅಂಬಲಗಿರಿಗಿದೆ. ಗಿರಿ ಪ್ರದಕ್ಷಿಣೆ ಮುಗಿಸಿದ ನಂತರ ಕೈವಾರ ಶ್ರೀಕ್ಷೇತ್ರದವರು ಎಲ್ಲಾ ಭಕ್ತರಿಗೂ ಪ್ರಸಾದ ವಿನಿಯೋಗಿಸುತ್ತಾರೆ.