ಪ್ರತಿ ವರ್ಷ ಗಾಳಿ ಹಬ್ಬವನ್ನು ಆಷಾಢದಲ್ಲಿ ಆಚರಿಸುತ್ತಾರೆ. ಆಷಾಢದಲ್ಲಿ ಆಚರಿಸುವ ಈ ವಿಶಿಷ್ಟ ಹಬ್ಬವನ್ನು ಚಿತ್ರದುರ್ಗ, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಕಾಣಬಹುದು. ಗಾಳಿ ದೇವರ ಹಬ್ಬವನ್ನು ಹೋಳಿಗಮ್ಮ, ಗಾಳಿದೇವತೆ, ಗಾಳಿ ಮಾರಮ್ಮ, ಕಡುಬಿನ ಹಬ್ಬ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.

ಹಬ್ಬಕ್ಕೆ ಮುಂಚಿತವಾಗಿ ಹಳ್ಳಿಯ ಹಿರಿಯರೆಲ್ಲ ಸೇರಿಕೊಂಡು ಹಬ್ಬದ ದಿನವನ್ನು ಗೊತ್ತುಮಾಡುತ್ತಾರೆ. ಹಬ್ಬದ ದಿನ ಮಂಗಳವಾರವೇ ಆಗಿರಬೇಕೆಂಬ ನಿಯಮವಿದೆ. ಆ ದಿನವನ್ನು ಊರಿನ ಸುತ್ತೆಲ್ಲ ತಮಟೆ ಮೂಲಕ ಸಾರುತ್ತಾರೆ. ಹಬ್ಬದ ಎಡೆಯ ವಿಶೇಷವೆಂದರೆ ಕಡುಬಿನ ಅಡುಗೆ. ಅಲ್ಲದೆ ದೇವತೆಗೆ ಎಡೆ ರೂಪದಲ್ಲಿ ಅರ್ಪಿಸುವ ಹೋಳಿಗೆ, ಕರ್ಪೂರ, ಊದುಬತ್ತಿ, ಬೇವಿನೆಲೆ, ಮಣ್ಣಿನ ಚಿಕ್ಕ ಮಡಿಕೆ, ಹಳೇಮೊರ ಇತ್ಯಾದಿ ಪೂಜಾ ಪರಿಕರ ಗಳೊಂದಿಗೆ ಸಿದ್ಧತೆ ನಡೆಸುತ್ತಾರೆ. ಗಾಳಿ ದೇವತೆಗೆ ಶಾಶ್ವತ ಗುಡಿ ಇರುವುದಿಲ್ಲ. ಪೂಜೆಯ ದಿನ ಊರ ಹೆಬ್ಬಾಗಿಲಿನಲ್ಲಿ ಬೇವಿನ ಕೊಂಬೆ ರೆಂಬೆ, ಎಲೆಗಳಿಂದ ಚಿಕ್ಕ ಗುಡಿಸಲಿ ನಂಥ ಗುಡಿಯನ್ನು ನಿರ್ಮಿಸಿ, ಜೇಡಿಮಣ್ಣಿನಿಂದ ಮಾಡಿದ ಗಾಳಿ ದೇವತೆಯನ್ನು ಪ್ರತಿಷ್ಠಾಪಿಸುತ್ತಾರೆ.

ಗಾಳಿ ದೇವತೆಯ ಪೂಜೆ ಮಾಡುವುದರಿಂದ ಮುಂಗಾರು ಮಳೆರಾಯ ಸಂತುಷ್ಠನಾಗಿ ಧರೆಗೆ ಬರುತ್ತಾನೆ ಎಂಬ ನಂಬಿಕೆ ಈ ಜನರಲ್ಲಿದೆ. ಎಲ್ಲ ವರ್ಗದ ಜನರು ಸೇರಿ ಆಚರಿಸುವುದು ಈ ಹಬ್ಬದ ವಿಶೇಷತೆಗಳೊಂದಾಗಿದೆ. ಹಬ್ಬದ ಸಂದರ್ಭದಲ್ಲಿ ರೈತ ಮಹಿಳೆಯರು ಗಾಳಿ ದೇವತೆಗೆ ಸಂಬಂಧಿಸಿದ ಜನಪದ ಗೀತೆಗಳನ್ನು ಹಾಡುತ್ತಾರೆ.

ಅಂದು ಸಂಜೆ ಎಲ್ಲರ ಮನೆಯ ಅಡುಗೆಯನ್ನು ದೊಡ್ಡದೊಂದು ಈಚಲ ಬುಟ್ಟಿಯಲ್ಲಿ  ಸಂಗ್ರಹಿಸುತ್ತಾರೆ. ನಂತರ ಗಾಳಿ ದೇವತೆಯನ್ನು ಹೊತ್ತು ಮೆರವಣಿಗೆಯ ಮೂಲಕ ಊರಿನ ಗಡಿ ಭಾಗದ ‘ವಲಮಾರಿ’ ಎಂಬಲ್ಲಿಗೆ ಬಂದು ಸೇರುತ್ತಾರೆ. ಗಾಳಿ ದೇವತೆಯನ್ನು ಹೊಂಗೆ ಮರವೊಂದರ ಕೆಳಗೆ ಕೂರಿಸಿ, ಮತ್ತೊಮ್ಮೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ, ‘ಮುಂಗಾರು ಮಳೆರಾಯ ಸಂತುಷ್ಟನಾಗು’ ಎಂದು ಬೇಡಿಕೊಳ್ಳುತ್ತಾರೆ.