ಕರ್ನಾಟಕದ ಎಲ್ಲ ಕಡೆ ಗ್ರಾಮದೈವಗಳ ಹಬ್ಬದಲ್ಲಿಯ ಬಲಿ ಪದ್ಧತಿ ಕಂಡುಬರುತ್ತದೆ. ಇದೊಂದು ಭಯಾನಕವಾದ ಆಚರಣೆ. ಕಪ್ಪುಬಣ್ಣದ ಕುರಿಯನ್ನು ಮಡಿವಾಳ ಅಥವಾ ನಾಯಕರ ಪೋತರಾಜ ಹಲ್ಲುಗಳಿಂದ ಕಚ್ಚಿ, ಸಿಗಿದು, ಅದರ ರಕ್ತ ಮಾಂಸಗಳನ್ನು ತಿನ್ನುವ ವಿಚಿತ್ರ ಆಚರಣಾ ಪದ್ಧತಿ. ಗಾವು ಸಿಗಿಯುವುದನ್ನು ವಂಶಪಾರಂಪರ್ಯವಾಗಿ ಮಾಡಿಕೊಂಡು ಬರುವ ಮನೆಯವರು ದೇವತೆಯ ಹಬ್ಬದಂದು ದೇವರು ಮೈತುಂಬಿದಾಗ ಗಾವು ಸಿಗಿಯುತ್ತಾರೆ. ಗಾವು ಎಂದರೆ ದೇವರ ಆಹಾರ ಎಂದು ಅರ್ಥವಿದೆ. ಗಾವು ಸಿಗಿಯಲು ಕುರಿಯ ಜೊತೆಗೆ ಕೋಳಿ, ಅಲ್ಲದೆ ಬಾಳೆಹಣ್ಣುಗಳನ್ನು ತೆಗೆದುಕೊಳ್ಳುತ್ತಾರೆ.

‘ಗಾವುಗು’ ಎಂದರೆ ಗಾವು ಕಟ್ಟಲು ಮೀಸಲಾಗಿರುವ ‘ಕುರಿ’ ಎಂಬ ಅರ್ಥವಿದೆ. ಗಾವು ಸಿಗಿಯುವಾತ ಮೂರು ದಿನಗಳ ಹಿಂದಿನಿಂದ ಉಪವಾಸವಿರಬೇಕೆಂಬ ನಿಯಮವಿದೆ. ದಿನವೊಂದಕ್ಕೆ ಮೂರು ಏಲಕ್ಕಿಯನ್ನು ತಿನ್ನಬೇಕು, ಅಲ್ಲದೆ ಮಡಿಯಿಂದ ಇದ್ದು, ಮಡದಿಯಿಂದ ದೂರವಿರಬೇಕು. ಆ ದಿನಗಳಲ್ಲಿ ದೈವಕ್ಕೆ ನಿಷ್ಠನಾಗಿದ್ದು, ಭಕ್ತಿಯಿಂದ ಪೂಜಿಸುತ್ತಿರಬೇಕು. ಹೀಗೆ ಇರುವುದರಿಂದ ಗಾವು ಸಿಗಿಯಲು ಶಕ್ತಿ ಬರುತ್ತದೆಂದು ನಂಬುತ್ತಾರೆ. ಗಾವು ಸಿಗಿಯುವವನನ್ನು ಪೋತರಾಜನೆಂದು, ಅವನು ಗ್ರಾಮದೇವತೆಯ ಸೇವಕನೆಂದೂ, ಸಹೋದರನೆಂದೂ, ಗಂಡನೆಂದೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿ ಭಾವಿಸಲಾಗುತ್ತದೆ.

ಗಾವು ಸಿಗಿಯುವ ದಿನ ಪೋತರಾಜನು ಸ್ನಾನ ಮಾಡಿ, ಜೇಡಿಮಣ್ಣಿನಿಂದ ಏಳು ಸುತ್ತಿನ ಕೋಟೆಯನ್ನು ಕಟ್ಟುತ್ತಾನೆ. ಅಲ್ಲಿ ಭಕ್ತರು ಪೋತರಾಜನನ್ನು ಪೂಜಿಸಿ, ಮೇಳದೊಂದಿಗೆ ದೇವಾಲಯಕ್ಕೆ ಕರೆ ತರುತ್ತಾರೆ. ಪೋತರಾಜನ ಮುಖಕ್ಕೆ ಬಣ್ಣ ಬಳಿದು ಬಿಳಿಯ ಬಣ್ಣದ ಚುಕ್ಕೆ ಇಟ್ಟು, ಅರಿಶಿಣದ ಬಟ್ಟೆಯನ್ನು ಹೊದಿಸಿ, ಮೇಳದೊಂದಿಗೆ ಗಾವು ಸಿಗಿಯಲು ಕರೆತರುತ್ತಾರೆ. ಗಾವು ಸಿಗಿದ ಪೋತರಾಜ ಅದರ ರಕ್ತವನ್ನು ಅನ್ನಕ್ಕೆ ಮಿಶ್ರ ಮಾಡುತ್ತಾನೆ. ಹೀಗೆ ಗಾವು ಸಿಗಿಯುವ ಎಲ್ಲಾ ಪೋತರಾಜರು ರಕ್ತಕ್ಕೆ ಅನ್ನವನ್ನು ಮಿಶ್ರ ಮಾಡಿದ ನಂತರ ನೆರೆದ ಭಕ್ತರು ಅನ್ನವನ್ನು ಸ್ವೀಕರಿಸಿ, ತಮ್ಮ ಮನೆಯ ಸೂರಿಗೆ, ಮಕ್ಕಳ ಕೊರಳಿನ ತಾಯತಕ್ಕೆ ಭಕ್ತಿಯಿಂದ ಕಟ್ಟುತ್ತಾರೆ. ತುಮಕೂರು ಜಿಲ್ಲೆಯ ಕಡೆ ಗಾವು ಸಿಗಿದ ನಂತರ ಅದರ ಕರುಳನ್ನು ಪೋತರಾಜ ಹಾರವಾಗಿ ಧರಿಸುವ ಪದ್ಧತಿ ಇದೆ.

ಗುನ್ನಾರೆ ಎಲ್ಲಮ್ಮನ ಹಬ್ಬದಲ್ಲಿ ಗಾವು ಸಿಗಿಯುವವನು ಮಡಿವಾಳನಾಗಿದ್ದು, ಅವನನ್ನು ‘ಚಾಟಿ ಪತ್ಯ’ ಎಂದು ಕರೆಯುತ್ತಾರೆ. ವರ್ಷವಿಡೀ ಸಸ್ಯಾಹಾರಿಯಾಗಿದ್ದು, ಹಬ್ಬದಂದು ಒಂದು ದಿನ ಮಾತ್ರ ಪೋತರಾಜ ಮಾಂಸಹಾರಿಯಾಗುತ್ತಾನೆ. ಚಿತ್ರದುರ್ಗ ಜಿಲ್ಲೆಯ ಭಾಗಗಳಲ್ಲಿ ಗಾವು ಸಿಗಿದ ನಂತರ ಕುರಿಯನ್ನು ಭೂಮಿಯಲ್ಲಿ ಹೂಳುವ ಪದ್ಧತಿ ಇದೆ. ಈ ಗಾವು ಆಚರಣೆ ಆದಿಮಾನವನ ಬೇಟೆ ಹಾಗೂ ಆಹಾರ ಪದ್ಧತಿಯನ್ನು ಸಂಕೇತಿಸುತ್ತದೆ.