ಮಲೆನಾಡಿನ ಈಡಿಗರ ವಿಶಿಷ್ಟ ಬಗೆಯ ಹಬ್ಬ. ಹೊಸನಗರ ತಾಲ್ಲೂಕಿನ ಪಟಗುಪ್ಪ ಒಂದು ಸಣ್ಣಗ್ರಾಮ. ಈ ಗ್ರಾಮದ ದೈವ ಗಾಮ. ಗ್ರಾಮದ ರಕ್ಷಕ ದೈವಕ್ಕೆ ಮದುವೆ ಮಾಡುವುದೇ ಈ ಹಬ್ಬದ ವಿಶೇಷ. ಲಿಂಗನಮಕ್ಕಿ ಆಣೆಕಟ್ಟು ಊರನ್ನು ಮುಳುಗಿಸಿದ ಮೇಲೆ ಈ ಹಬ್ಬ ಕಾಣೆಯಾಗಿತ್ತು. ಈಚೆಗೆ ಈಡಿಗರು ಈ ಹಬ್ಬವನ್ನು ೪೦ ವರ್ಷಗಳ ನಂತರ ಆಚರಣೆಗೆ ತಂದಿದ್ದಾರೆ.

ಶರಾವತಿಯ ಹಿನ್ನೀರಿನ ದಡದಲ್ಲಿ ನಸುಕಿನಲ್ಲೇ ಮದುವೆಯ ಸಂಭ್ರಮ ಆರಂಭವಾಗುತ್ತದೆ. ‘ಗಾಮ’ ಎಂದರೆ ಅಲಂಕೃತ ಕುದುರೆಯ ಮೇಲೆ ಆಯುಧ ಹಿಡಿದು ಕೂತ ವಿಗ್ರಹ. ಜೊತೆ ಜೊತೆಗೆ ಸೇವಕ ಸೇವಕಿಯರ ವಿಗ್ರಹಗಳು. ಅಲ್ಲದೇ ಅವರು ಉಪಯೋಗಿಸುವ ಕೆಲವು ಪರಿಕರಗಳು. ಇವುಗಳ ಗುಂಪನ್ನು ಗಾಮ ದೇವರು ಎಂದು ಕರೆಯುತ್ತಾರೆ. ಗ್ರಾಮದ ರಕ್ಷಕ ದೈವವಾಗಿದ್ದರಿಂದ ಇದಕ್ಕೆ ಈ ಹೆಸರು ಬಂದಿದೆ ಎಂದು ಹೇಳುತ್ತಾರೆ.

ಊರು ಮುಳುಗುವ ಮೊದಲು ‘ಹೊಸಕೊಪ್ಪ’ ಎಂಬಲ್ಲಿ ಕೆಂಪು ಕಲ್ಲಿನ ಪುಟ್ಟ ಗುಡಿಯಿತ್ತು. ಆಗ ಪಟಗುಪ್ಪ, ದುಮ್ಮ, ಹಳೇತೋಟ, ಭೀಮನಕೆರೆ, ಸಂಕೂರು ಮುಂತಾದ ಊರುಗಳಲ್ಲಿದ್ದ ಈಡಿಗರು ಗಾಮದ ಹಬ್ಬ ಮಾಡುತ್ತಿದ್ದರು. ನಂತರದಲ್ಲಿ ಗುಡಿ ಮುಳುಗಿದ ಮೇಲೆ ಸಂಪ್ರದಾಯವೇ ನಿಂತುಹೋಯಿತು. ಹಾಗೆ ನಿಂತ ಸಂಪ್ರದಾಯ ಮತ್ತೆ ಆರಂಭವಾಗಲು ೪೦ ವರ್ಷಗಳು ಬೇಕಾದವು.

ಮುಳುಗಡೆಯಿಂದ ಚದುರಿ ಹೋಗಿದ್ದ ದೀವರು ಹಬ್ಬದ ಆಚರಣೆ ಬಿಟ್ಟಿದ್ದರಿಂದ ಗಾಮದೇವರ ಕೋಪಕ್ಕೆ ಗುರಿಯಾದರು. ಜನರಿಗೆ, ದನಕರುಗಳಿಗೆ, ವ್ಯವಹಾರ ಇತ್ಯಾದಿಗಳಲ್ಲಿ ಸೋಲುಂಟಾಯಿತು. ಈ ಹಿನ್ನೆಲೆಯಲ್ಲಿ ಭಕ್ತರು ಮತ್ತೆ ಹಬ್ಬ ಆಚರಿಸಲು ಮುಂದಾದರು. ಆನಂದಪುರ, ಸಾಗರ, ಚನ್ನಗಿರಿ, ಹೊನ್ನಾಳಿ, ರಿಪ್ಪನ್ ಪೇಟೆಗಳಲ್ಲಿ ಚದುರಿ ಹೋಗಿದ್ದವರೆಲ್ಲ ಸೇರಿ ಹಣವನ್ನು ಸಂಗ್ರಹಿಸಿ, ಹೊಸಕೊಪ್ಪದಲ್ಲಿ ಗಾಮನ ಹೊಸ ಗುಡಿ ಕಟ್ಟಿ, ಗಾಮದ ಹಬ್ಬಕ್ಕೆ ನಾಂದಿ ಹಾಡಿದರು.

ಹಬ್ಬದ ಬೆಳಿಗ್ಗೆ ‘ಕುಕಟಿ’ ವೀರಭದ್ರ ನಾಯ್ಕರ ಮನೆಯ ಅಟ್ಟದ ಮೇಲಿದ್ದ ಗಾಮದ ವಿಗ್ರಹ ಹಾಗೂ ಇನ್ನಿತರ ಪರಿಕರಗಳನ್ನು ಇಳಿಸಿ, ಶುಚಿಗೊಳಿಸುತ್ತಾರೆ. ಹಾಗೆ ಶುಚಿಗೊಳಿಸಿದ ವಿಗ್ರಹಗಳನ್ನು ‘ರಥಬನ’ದಲ್ಲಿ ಕೂರಿಸುತ್ತಾರೆ. ನಾಲ್ಕು ನೂರು ವರ್ಷ ಹಳೆಯದಾದ ರಥಬನದ ಮೇನೆಯಲ್ಲಿ ವಿಗ್ರಹಗಳು ಪ್ರತಿಷ್ಠಾಪನೆ ಮಾಡುವ ವೇಳೆ ದೊಡ್ಡದೊಡ್ಡ ಡೊಳ್ಳುಗಳ ಮೇಳವು ನಡೆಯುತ್ತದೆ. ಕಿವಿಗಡಚುಚ್ಚುವ ಡೊಳ್ಳುಗಳ ಸದ್ದು ಹೆಣ್ಣಿನ ಮನೆಯವರಿಗೆ ಕೇಳಿಸಿ, ಅದಕ್ಕೆ ಅವರು ಸರಿಯಾಗಿ ಶಾಸ್ತ್ರ ನಡೆಸುತ್ತಾರೆ. ಗಾಮನಿಗೆ ದಾಸರು ಪೂಜೆ ಸಲ್ಲಿಸಿದ ನಂತರ ಹೆಣ್ಣುಮಕ್ಕಳು ‘ಹತ್ತು ಬೆರಳಾರತಿ’ ಮಾಡುತ್ತಾರೆ. ಹರಕೆ ಸಲ್ಲಿಸುವ ಹೆಂಗಸರು ತಮ್ಮ ಕೈನ ಹತ್ತು ಬೆರಳಿನ ತುದಿಗೆ ಎಣ್ಣೆಯಲ್ಲಿ ನೆನೆಸಿದ ಹತ್ತಿಯನ್ನು ಸುತ್ತಿಕೊಂಡು ಅದಕ್ಕೆ ಬೆಂಕಿ ತಗುಲಿಸಿ, ದೇವರೆದುರು ಮೂರು ಸುತ್ತು ಬರುತ್ತಾರೆ. ಗಾಮನಿಗೆ ಬಹು ಪ್ರಿಯವಾದ ಹಲಸಿನ ಹಣ್ಣಿನ ಕಡುಬಿನ ನೈವೇದ್ಯ ಅರ್ಪಿಸುತ್ತಾರೆ. ಕಳೆದ ನಲವತ್ತು ವರ್ಷದಿಂದ ಹಬ್ಬ ನಿಂತಿದ್ದರಿಂದ ದೀವರು ಈ ಪದಾರ್ಥವನ್ನೇ ಬಿಟ್ಟಿದ್ದರಂತೆ. ಕಡುಬಿನ ನೈವೇದ್ಯ ಮೊದಲು ಮಾಡಿದ ನಂತರ ಕುರಿ ಕೋಳಿಗಳನ್ನು ಬಲಿ ಕೊಡುತ್ತಾರೆ. ಕುರಿಯನ್ನು ಒಂದೇ ಏಟಿಗೆ ಕಡಿಯಬೇಕೆಂಬ ನಿಯಮವಿದೆ. ತಪ್ಪಿದಲ್ಲಿ ಆತನಿಗೆ ಬಡಿಗೆ ಏಟೂ ಬೀಳುತ್ತದೆ.

ಗಂಡಿನ ದಿಬ್ಬಣ ಹೊಸಕೊಪ್ಪದ ಗುಡಿಯಡೆಗೆ ಹೊರಡುತ್ತದೆ. ಅಲ್ಲಿ ಅಲಂಕಾರ ಶಾಸ್ತ್ರಗಳೆಲ್ಲ ಮುಗಿದು ಗೋಧೂಳಿ ಲಗ್ನದಲ್ಲಿ ಗಾಮ ದೇವರ ಮದುವೆ ನಡೆಯುತ್ತದೆ. ಸಂಜೆ ಎಲ್ಲರಿಗೂ ಗುಡಿಯಲ್ಲಿ ಮಾಂಸದೂಟವಿರುತ್ತದೆ. ಇಷ್ಟರಲ್ಲಿ ಅದ್ದೂರಿಯಿಂದ ಗಾಮದೇವನ ಮದುವೆ ನಡೆದರೂ ಆತನ ದಾಂಪತ್ಯ ಮಾತ್ರ ಒಂದೇ ರಾತ್ರಿ. ರಾತ್ರಿ ಕಳೆದು ಬೆಳಕು ಹರಿಯುತ್ತಿದ್ದಂತೆ ಪಟಗುಪ್ಪದ ಕಡೆಯವರು ಗಂಡು ಗಾಮನನ್ನು ತಂದು, ಕುಕಟಿ ಮನೆತನದವರ ಮನೆಯ ಅಟ್ಟವೇರಿಸುತ್ತಾರೆ. ಅಲ್ಲಿಗೆ ಗಾಮದ ಹಬ್ಬ ಮುಗಿದಂತೆ. ಮುಂದೆ ಗಾಮದ ಹಬ್ಬದ ವೇಳೆ ಈ ದೇವರುಗಳು ಕೆಳಕ್ಕಿಳಿಯುತ್ತಾರೆ. ಇಲ್ಲಿ ಬರುವ ಕುದುರೆ ಏರಿದ ವಿಗ್ರಹ ಇತ್ಯಾದಿಗಳನ್ನು ಗಮನಿಸಿದರೆ ಇದು ಕುಮಾರರಾಮನ ಆರಾಧನೆಯನ್ನು ನೆನಪಿಗೆ ತರುತ್ತದೆ.