ಹಾಸನ ಜಿಲ್ಲೆಯ ಸುತ್ತಮುತ್ತ ಊರನ್ನು ಕಾಡುವ ಅನಿಷ್ಟ, ರೋಗ ರುಜಿನಗಳ ಮೂರ್ತಿಗಳನ್ನು ಮಾಡಿ ಊರಿನ ಗಡಿ ದಾಟಿಸುತ್ತಾರೆ. ಗಡಿ ಮಾರಿಯ ಗೊಂಬೆಗಳನ್ನು ಚಿತ್ರ-ವಿಚಿತ್ರವಾಗಿ, ಕೆಲವೊಮ್ಮೆ ಭಯಾನಕವಾಗಿ ಅಲಂಕರಿಸಿರುತ್ತಾರೆ. ಊರಿನ ಜನ ಅಲಂಕೃತಗೊಂಡ ರೋಗ ಸಂಕೇತಿಸುವ ಗೊಂಬೆಗಳನ್ನು ಪೂಜಿಸಿ, ಮಾಂಸಾಹಾರ ಹಾಗೂ ಸಸ್ಯಾಹಾರದ ಎಡೆಯನ್ನು ಸಲ್ಲಿಸಿ, ಗಡಿಮುಟ್ಟಿಸಿ, ‘ಗಡಿಮಾರಿ ತೊಲಗು ಮಾರಿ’ ಎಂದು ಹೇಳಿ ಗಡಿಪಾರು ಮಾಡುತ್ತಾರೆ. ಮುಂದಿನ ಊರಿನವರು ಆ ಗೊಂಬೆಗೆ ಪೂಜೆ ಇತ್ಯಾದಿಗಳಿಂದ ಉಪಚರಿಸಿ ಆ ಊರಿನ ಗಡಿದಾಟಿಸುತ್ತಾರೆ. ಹೀಗೆ ನಿರಂತರವಾಗಿ ನಡೆದು ಗೊಂಬೆಗಳು ಕಾಡಿನಂಚಿನ ಮರದ ತೋಪನ್ನೋ, ಹೊಳೆಯನ್ನೋ, ಕೆರೆಯನ್ನೋ ಸೇರುತ್ತವೆ.

ಇಲ್ಲಿಯ ವಿಶೇಷವೆಂದರೆ ಪ್ರತಿಯೊಂದು ಗ್ರಾಮಗಳು ರೋಗಗಳನ್ನು ಸಂಕೇತಿಸುವ ಒಂದೊಂದು ಮೂರ್ತಿ ಮಾಡಿ, ಅವುಗಳಿಗೆ ಚಕ್ರ ಜೋಡಿಸಿ ಎಳೆದುಕೊಂಡು ಹೋಗಲು ಅನುಕೂಲವಾಗುವಂತೆ ಮಾಡಿಸುತ್ತಾರೆ. ಹತ್ತು ಹಲವು ಗ್ರಾಮಗಳು ಈ ಆಚರಣೆ ಮಾಡುವುದರಿಂದ ಗೊಂಬೆಗಳ ಜಾತ್ರೆಯೇ ಆಗಿಬಿಡುತ್ತದೆ. ಈ ಬಗೆಯ ಅನಿಷ್ಟ ನಿವಾರಣಾ ಆಚರಣೆಗಳು ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಬೇರೆ ಬೇರೆ ರೀತಿಯಲ್ಲಿ ಆಚರಣೆಗೊಳ್ಳುತ್ತವೆ. ಉತ್ತರ ಕರ್ನಾಟಕದ ಅಜ್ಜಿ ಆಚರಣೆ, ಮಲೆನಾಡಿನ ಗಡಿಮಾರಿ ಪದ್ಧತಿ, ಬೆಳೆಯ ಅನಿಷ್ಟವನ್ನು ಕಳೆಯುವ ಕಟ್ಟಜ್ಜಿ ಆಚರಣೆ ಇತ್ಯಾದಿಗಳನ್ನು ಹೆಸರಿಸಬಹುದಾಗಿದೆ.