ಒಕ್ಕಲು ಮಕ್ಕಳು ಮಳೆಗಾಗಿ ಎದುರು ನೋಡುವ ಸಂದರ್ಭದಲ್ಲಿ ನಡೆಯುವ ಒಂದು ಮಳೆಯ ಆಚರಣೆ. ರೈತರು ತಮ್ಮ ಸಮಾಧಾನಕ್ಕಾಗಿ ಮಳೆಯ ಬರುವಿಕೆಗಾಗಿ ದೇವರಿಗೆ ಉಡಿ ತುಂಬುವುದು, ಭಿಕ್ಷೆ ಬೇಡುವುದು, ಗುರುಜಿ ತಿರುಗುವುದು, ಮಳೆ ಪದ ಹೇಳುವುದು ಇತ್ಯಾದಿ ಮಳೆ ತರಿಸುವ ಆಚರಣೆಗಳಲ್ಲಿ ‘ಗಂಗೆ ಭಾಷೆ’ಯು ಒಂದು.

ಊರಿನ ಹೆಣ್ಣು ಮಕ್ಕಳೆಲ್ಲ ಹಿರಿಯರ ಸಲಹೆ ಮೇರೆಗೆ ಮಳೆಗಾಗಿ ಗಂಗೆ ನುಡಿ ಕೇಳಲು ಮುಂದಾಗುತ್ತಾರೆ. ಗುಡಿ ಅಥವಾ ಬಯಲಿನಲ್ಲಿ ನೆಲಸಾರಿಸಿ, ರಂಗೋಲಿ ಹಾಕಿ, ತಳಿರುತೋರಣಗಳಿಂದ ಶೃಂಗರಿಸುತ್ತಾರೆ. ಐದು ಜನ ಹಸಿರು ಸೀರೆ ಉಟ್ಟ ಹೆಣ್ಣು ಮಕ್ಕಳು ಊರ ಮುಂದಿನ ಬಾವಿಗೆ ಹೋಗುತ್ತಾರೆ. ಗಂಗೆ ಪೂಜಿಸಿ ಕೊಡ ತುಂಬಿಕೊಂಡು ಬರುತ್ತಾರೆ. ಆ ಸಂದರ್ಭದಲ್ಲಿ ಜನಪದ ಗೀತೆಯೊಂದು ಹೀಗಿದೆ – “ಕಪಟ ಮಳೆಯೇ ಕಾರ ಮಳೆಯೇ, ದೇವರ ಗುಡಿಗೆ ನೀರಲ್ಲ, ಸುಣ್ಣ ಕೊಡ್ತಿನಿ ಸುರಿಯಲೇ ಮಳೆಯೇ, ಬಣ್ಣ ಕೊಡ್ತಿನಿ ಬಾರಲೇ ಮಳೆಯೇ, ಹಿಟ್ಟು ಕೊಡ್ತಿನಿ ಕುಟ್ಟಿತೇ ಮಳೆಯೇ, ಹಂಚು ಕೊಡ್ತಿನಿ ಮಿಂಚಲೇ ಮಳೆಯೇ, ಬಾರೋ ಬಾರೋ ಮಳೆರಾಯ, ಬಾಳೆ ತೋಟಕ್ಕೆ ನೀರಿಲ್ಲ”. ನೀರಿನಿಂದ ತುಂಬಿದ ಕೊಡವನ್ನು ಖಣ, ಲಿಂಗ, ಬಳೆ, ತಾಳಿ, ಹಾರಗಳಿಂದ ಅಲಂಕೃತಗೊಳಿಸಿ, ಕಂಠದ ಮೇಲೆ ತೆಂಗಿನಕಾಯಿ ಇಟ್ಟು, ಹಣ್ಣುಹಂಪಲುಗಳ ನೈವೇದ್ಯ ಮಾಡಿ ಮಳೆ ಭಾಷೆ ಕೇಳಲು ಸಿದ್ಧತೆ ನಡೆಸುತ್ತಾರೆ. ಶೃಂಗರಿಸಿದ ಕೊಡವನ್ನು ಐದು ಜನ ಹೆಣ್ಣು ಮಕ್ಕಳು ಬಾಗಿ ತಮ್ಮ ಬೆರಳುಗಳಿಂದ ಮೃದುವಾಗಿ ಹಿಡಿಯುತ್ತಾರೆ. ಕೊಡ ತಿರುಗಿದ ದಿಕ್ಕಿನತ್ತ ತಾವು ತಿರುಗುತ್ತಾರೆ. ಮಳೆ ಬರುವ ಪಾದವನ್ನು ಕಂಡುಕೊಳ್ಳುತ್ತಾರೆ. ಕೊಡ ಯಾವ ದಿಕ್ಕಿಗೂ ತಿರುಗದೇ ಇದ್ದರೆ, ಇನ್ನೊಮ್ಮೆ ಕೇಳುತ್ತಾರೆ. ಯಾವ ಪಾದದಲ್ಲಿ ಕೊಡ ನಿಲ್ಲುವುದೋ ಆ ಪಾದದಲ್ಲಿ ಮಳೆ ಬರುವುದಿಲ್ಲವೆಂದು ತಿಳಿಯುತ್ತಾರೆ. ತಿರುಗಿದಾಗ ಎಲ್ಲರೂ ಹರ್ಷೋದ್ಗಾರ ಮಾಡಿ ‘ಗಂಗಿ ಭಾಷಾ ಕೊಟ್ಳು’ ಎಂದು ಸಂತೋಷಪಡುತ್ತಾರೆ.

ವೈಜ್ಞಾನಿಕವಾಗಿ ಈ ಆಚರಣೆಯನ್ನು ನೋಡುವುದರ ಬದಲು ಆಚರಣೆಯಲ್ಲಿ ಹುದುಗಿರುವ ಸಮೂಹ ಪ್ರಜ್ಞೆ, ಸಹಬಾಳ್ವೆ, ಚರ್ಚೆ, ಸಂತೋಷ, ವಿಶ್ರಾಂತಿ, ಆರೋಗ್ಯ ಇತ್ಯಾದಿ ಅನುಕೂಲಗಳ ಹಿನ್ನೆಲೆಯಲ್ಲಿ ಚಿಂತಿಸಬೇಕು. ಗಂಗೆಯನ್ನು ಕಳುಹಿಸಿದ ಹೆಣ್ಣುಮಕ್ಕಳು ಮನೆಮನೆಗೂ ಕಾಯಿತುರಿ ಪ್ರಸಾದವನ್ನು ಹಂಚಿ ಹಿರಿಯರಿಂದ ಆಶೀರ್ವಾದ ಪಡೆಯುವ ನೋಟ ಮನಸ್ಸಿಗೆ ಮುದ ನೀಡುವುದಲ್ಲದೇ, ಇಡೀ ಗ್ರಾಮವನ್ನೇ ಹಬ್ಬದ ವಾತಾವರಣದಲ್ಲಿ ತೇಲುವಂತೆ ಮಾಡುತ್ತದೆ.