ಉತ್ತರ ಕರ್ನಾಟಕದಲ್ಲಿ ದೊಡ್ಡ ಗೌರಿ ಆಚರಣೆಯಲ್ಲಿ ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವುದು ಹಬ್ಬದ ವಿಶೇಷ. ಗೌರಿ ಹುಣ್ಣಿಮೆಯ ರಾತ್ರಿಯಂದು ಊರಿನ ಓಣಿಯಲ್ಲಿ ಗೌರಿಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಹೊಸ ಸೀರೆ, ಉಡುಪು ಧರಿಸಿದ ಹೆಣ್ಣುಮಕ್ಕಳು ಗೌರಮ್ಮನ ಮೂರ್ತಿಗೆ ಸಕ್ಕರೆ ಆರತಿ ಬೆಳಗುತ್ತಾರೆ. ಸಾಮಾನ್ಯವಾಗಿ ಎಲ್ಲಾ ವಯೋಮಾನದ ಹೆಣ್ಣುಮಕ್ಕಳು ಇರುತ್ತಾರೆ. ಸಕ್ಕರೆ ಬೊಂಬೆಗಳು ಇರುವ ತಟ್ಟೆಯಲ್ಲಿ ದೀಪ ಹಚ್ಚಿ ಮೊದಲು ಗೌರಮ್ಮ ಮೂರ್ತಿಗೆ ಬೆಳಗಿ ನಂತರ ತಮ್ಮ ಮನೆಯವರಿಗೆ, ನೆರೆ ಹೊರೆಯವರಿಗೂ, ಸಂಬಂಧಿಕರಿಗೂ ಬೆಳಗುತ್ತಾರೆ. ಆರತಿ ಬೆಳಗಿದ ಹೆಣ್ಣು ಮಕ್ಕಳಿಗೆ, ಆರತಿ ಬೆಳಗಿಸಿಕೊಂಡವರು ಹಣ ನೀಡುವ ಸಂಪ್ರದಾಯವಿದೆ.

ಸಕ್ಕರೆ ಬೊಂಬೆಗಳನ್ನು ಕೆಲವರು ಮನೆಯಲ್ಲಿಯೇ ತಯಾರು ಮಾಡಿಕೊಂಡರೆ ಇನ್ನೂ ಕೆಲವರು ಸಕ್ಕರೆ ಬೊಂಬೆ ತಯಾರಿಕರಿಂದ ಕೊಂಡುಕೊಳ್ಳುತ್ತಾರೆ. ಸಕ್ಕರೆ ಗೊಂಬೆ ತಯಾರಿಸಲು ಬೀಟೆ, ತೇಗದ ಅಚ್ಚುಗಳು ಬೇಕಾಗುತ್ತವೆ. ವಂಶಪಾರಂಪರಿಕವಾಗಿ ಗೌರಿ ಹುಣ್ಣಿಮೆಗೆ ಸಕ್ಕರೆ ಬೊಂಬೆ ತಯಾರುಮಾಡುವ ಹತ್ತಾರು ಕುಟುಂಬಗಳಿವೆ. ಒಂದೊಂದು ಗೊಂಬೆಯು ಒಂದೊಂದು ಕತೆಯನ್ನು ಸಂಕೇತಿಸುತ್ತವೆ.  ಪಾರ್ವತಿ, ಒಂಟೆ, ಆನೆ, ರಥ, ಅರ್ಜುನನ ಬಿಲ್ಲು, ಮಂಟಪ, ಆಂಜನೇಯ, ಬಸವಣ್ಣ, ಹರಿಣಗಳು ಅಲ್ಲದೆ ವಿವಿಧ ರೀತಿಯ ಪಶುಪಕ್ಷಿಗಳು ವಿವಿಧ ಬಣ್ಣಗಳಲ್ಲಿ ಸೃಷ್ಟಿಯಾಗಿರುತ್ತವೆ.

ಕನ್ಯೆಯನ್ನು ಕಾಯಂ ಮಾಡಿಕೊಂಡವರು ಹೆಣ್ಣಿನ ಮನೆಗೆ ಗೌರಿ ಹುಣ್ಣಿಮೆಯಂದು ದಂಡಿ ಕೋಲುಂಬುರದ ಜೊತೆಗೆ ಸಕ್ಕರೆ ಆರತಿಗಳನ್ನು ತೆಗೆದುಕೊಂಡು ಹೋಗುವ ಸಂಪ್ರದಾಯವಿದೆ.