ಬೀರಲಿಂಗೇಶ್ವರ ಜಾತ್ರೆಯಲ್ಲಿ ಕುರುಬ ಸಮುದಾಯದ ಗೊರವರು ನಡೆಸುವ ಆಚರಣಾತ್ಮಕ ಕುಣಿತ. ರಾಣೆಬೆನ್ನೂರು ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಜಾತ್ರೆ ಜರಗುತ್ತದೆ. ಜಾತ್ರೆಯಲ್ಲಿ ಸುಮಾರು ಒಂದರಿಂದ ಎರಡು ಲಕ್ಷ ಭಕ್ತರಿರುತ್ತಾರೆ.  ಜಾತ್ಯಾತೀತವಾಗಿ ಭಕ್ತರು ಸೇರುವುದು ಇಲ್ಲಿಯ ವಿಶೇಷ.  ಬೀರಲಿಂಗೇಶ್ವರ, ದಿಳ್ಳೆಪ್ಪಸ್ವಾಮಿ, ಗುಡದಯ್ಯ ಹಾಗೂ ಚೌಡಮ್ಮ. ಕುರುಬ ಸಮುದಾಯದ ಆರಾಧ್ಯ ದೈವಗಳು. ಮೇಡ್ಲೇರಿ ಗ್ರಾಮದಲ್ಲಿ ಈ ಎಲ್ಲಾ ದೈವಗಳ ಗುಡಿಗಳು ಒಂದೇ ಆವರಣದಲ್ಲಿವೆ.

ಒಟ್ಟು ಏಳು ದಿನ ನಡೆಯುವ ಜಾತ್ರೆ ದೇವರ ಹೊಳೆ ಸ್ನಾನದಿಂದ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ದೀಡು ನಮಸ್ಕಾರ ಹಾಕುತ್ತಾರೆ. ಹೊಳೆಯಿಂದ ಬಂದ ಪಲ್ಲಕ್ಕಿ ಮೆರವಣಿಗೆಯು ಬೀರಪ್ಪ ದೇವಾಲಯವನ್ನು ಪ್ರವೇಶಿಸಿ, ದೇವರನ್ನು ಪೂಜಿಸಿದ ನಂತರ ‘ಹರಿಮರಿಸೇವೆ’ ನಡೆಯುತ್ತದೆ. ಭಕ್ತರು ತಮ್ಮ ಕಷ್ಟ ಪರಿಹಾರಾರ್ಥ ಹರಕೆ ಹೊತ್ತು ಹರಿಮರಿ ಸೇವೆಗಾಗಿ ಬಿಟ್ಟ  ಕುರಿಗಳನ್ನು ಅಂದು ದೇವಾಲಯಕ್ಕೆ ಅರ್ಪಿಸುತ್ತಾರೆ. ಭಕ್ತರು ಅರ್ಪಿಸಿದ ಕುರಿಗಳನ್ನು ದೇವಾಲಯದ ಮುಂದಿನ ಅಂಗಳದಲ್ಲಿ ಕೂಡಿಹಾಕುತ್ತಾರೆ. ನಂತರ ಗುರಿಕಾರರು ಅವುಗಳನ್ನು ಅಲ್ಲಿಯೇ ಬಲಿ ಕೊಡುತ್ತಾರೆ. ಬಲಿ ಕೊಡುವ ವಿಧಾನವು ಭಯಂಕರವೂ, ಹಿಂಸಾತ್ಮಕವೂ ಆಗಿ ಮನ ಕರುಗುವಂತಿರುತ್ತದೆ. ಕುರಿಯ ತಲೆಯನ್ನು ಕತ್ತರಿಸದೇ ಹೊಟ್ಟೆಯನ್ನು ಕತ್ತರಿಸುವುದು ಇಲ್ಲಿನ ಬಲಿ ವಿಧಾನ. ಈ ಬಗೆಯ ಬಲಿಯು ಬೀರಪ್ಪ ಹಾಗೂ ದಿಳ್ಳೆಪ್ಪ ದೇವರಿಗೆ ಮಾತ್ರ. ಬಲಿಯಾದ ಕುರಿಗಳನ್ನು ಕೋಲ್ಕಾರರು ತೆಗೆದುಕೊಳ್ಳುತ್ತಾರೆ.

ಬಲಿ ಮುಗಿದ ನಂತರ ಗೊರವರ ಆಚರಣಾತ್ಮಕ ನೃತ್ಯ ಆರಂಭವಾಗುತ್ತದೆ. ನೃತ್ಯದಲ್ಲಿ ಕುರುಬ ಸಮುದಾಯದ ಗೊರವರು, ಈರಗಾರರು, ದಳವಾಯಿಗಳು, ಪೂಜಾರಿಗಳು ಅಲ್ಲದೆ ಅನ್ಯ ಜನವರ್ಗದ ಗೊರವರು ಇರುತ್ತಾರೆ. ನೃತ್ಯಗಾರರೆಲ್ಲ ಕೈಯಲೊಂದು ಬೆತ್ತವನ್ನು ಹಿಡಿದಿರುತ್ತಾರೆ. ಗೊರವ ನೃತ್ಯಗಾರರ ಗುಂಪನ್ನು ಚೌಡಮ್ಮ ಡೊಳ್ಳಿನವರು ಸುತ್ತುವರಿದು ಡೊಳ್ಳನ್ನು ಬಾರಿಸುತ್ತಿರುತ್ತಾರೆ. ಡೊಳ್ಳಿನ ನಾದಕ್ಕೆ ತಕ್ಕ ಹಾಗೆ ನೃತ್ಯಗಾರರು ಹೆಜ್ಜೆ ಹಾಕುತ್ತಾರೆ. ಈ ನೃತ್ಯವನ್ನು ಗುಡದಯ್ಯನ ಕುಣಿತ ಎಂದು ಕರೆಯುವುದು ವಾಡಿಕೆ.

ಗುಡದಯ್ಯನ ಗದ್ದುಗೆಯ ಮೇಲೆ ಭಕ್ತರು ಸಂಗ್ರಹಿಸಿ ತಂದ ಹಾಲಿನ ದೊಡ್ಡ ಕುಂಭಗಳನ್ನು ಮಾತ್ರ ಇರಿಸಿ, ಅಲಂಕರಿಸಿ, ಪೂಜಿಸುತ್ತಾರೆ. ಇದನ್ನು ಹಾಲು ಸೇವೆ ಎಂದು ಕರೆಯುತ್ತಾರೆ. ಭಕ್ತರು ಜಾತ್ರೆಗೆ ಬರುವಾಗ ಕುಂಭಗಳಲ್ಲಿ ಹಾಲನ್ನು ತುಂಬಿಕೊಂಡು, ಶೃಂಗರಿಸಿದ ಎತ್ತಿನ ಬಂಡಿಗಳಲ್ಲಿ ಬರುತ್ತಾರೆ. ಇದನ್ನು ‘ಮೀಸಲು ಹಾಲು’ ಎಂದು ಕರೆಯುತ್ತಾರೆ. ಹೀಗೆ ಅಲಂಕೃತ ಬಂಡಿಗಳಲ್ಲಿ ಬಂದ ಹಾಲಿನ ಕುಂಭಗಳನ್ನು ಗುಡದಯ್ಯನ ಗದ್ದುಗೆಯ ಪಕ್ಕದಲ್ಲಿ ಇಡುತ್ತಾರೆ. ಹಾಲಿನ ಕುಂಭಗಳ ಪೂಜೆ ಮುಗಿಯುತ್ತಿದ್ದಂತೆಯೇ ನೃತ್ಯಗಾರರು ಗದ್ದುಗೆಯ ಬಳಿ ಬರುತ್ತಾರೆ. ಪೂಜಾರಿಗಳು ನೃತ್ಯಗಾರರಿಗೆ ಕುಡಿಯಲು ಹಾಲನ್ನು  ನೀಡುತ್ತಾರೆ. ಗೊರವರು ಡೋಣಿಗಳಲ್ಲಿ ತುಂಬಿಸಿಕೊಂಡು ಕುಡಿಯುತ್ತಾರೆ. ಅಲ್ಲದೆ ಜಾತ್ರೆಗೆ ಬಂದ ಭಕ್ತರೆಲ್ಲ ಹಾಲನ್ನು ಸ್ವೀಕರಿಸುತ್ತಾರೆ. ಅಲ್ಲದೆ ಹಾಲನ್ನು ತಮ್ಮತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಹಾಲನ್ನು ಸಂಬಂಧಿಸಿದವರಿಗೆ ಗುಡದಯ್ಯನ ಪ್ರಸಾದವೆಂದು ಕಳುಹಿಸಿಕೊಡುತ್ತಾರೆ. ಹಾಲನ್ನು ಕುಡಿಯುವುದರಿಂದ ರೋಗರುಜಿನಗಳು ವಾಸಿಯಾಗುತ್ತವೆಂದು ನಂಬುತ್ತಾರೆ. ನೃತ್ಯವು ಕುರಿಗಾರರ ರಕ್ಷಣಾ ತಂತ್ರದ ಕಡೆಗೆ ಬೆಳಕು ಚೆಲ್ಲಿದೆ. ಒಟ್ಟು ಜಾತ್ರೆಯು, ಕುರಿ, ಕುರಿಗಾರ ಹಾಗೂ ದೈವವನ್ನು ಸಂಕೇತಿಸಿದೆ. ಪ್ರತಿ ವರ್ಷದ ಜಾತ್ರೆಯಲ್ಲಿ ಪ್ರದರ್ಶಗೊಂಡು, ಕುರಿ ಸಾಕಾಣಿಕೆ ಹಾಗೂ ರಕ್ಷಣೆಯ ಬಗೆಗೆ ಮೌಖಿಕವಾಗಿ ಎಚ್ಚರಿಸುತ್ತದೆ.