ಪಶ್ಚಿಮ ಘಟ್ಟದ ಅರಣ್ಯ ಶ್ರೇಣಿಗಳಲ್ಲಿ ಉತ್ತರ ಕನ್ನಡದ ಶಿರಸಿ, ಕುಮಟಾ ಮಾರ್ಗ ಮಧ್ಯದಲ್ಲಿ ಬರುವ ‘ದೇವಿಮನೆ ಘಟ್ಟ’ ರುದ್ರರಮಣಿಯವಾಗಿದೆ. ಹಾಗೇ ಪ್ರಯಾಣಿಸುವ ವಾಹನಗಳಿಗೆ ಒಂದು ಸಾಹಸದ ಸವಾಲು. ಇಲ್ಲಿನ ದಟ್ಟಡವಿ, ಓರೆ ಕೋರೆ ತಿರುವುಗಳು, ಕಚ್ಚಾ ರಸ್ತೆ; ಈ ರಸ್ತೆಯಲ್ಲಿ ಪ್ರಯಾಣಿಸುವವರಿಗೆಲ್ಲಾ ದೇವರನ್ನು ಒಮ್ಮೆ ನೆನೆಯುವ ಸಂದರ್ಭ ಬರುತ್ತದೆ. ನಾಡಿನ ಎಲ್ಲಾ ಘಟ್ಟ ಪ್ರದೇಶಗಳಲ್ಲಿ ಇದು ಸಹಜ. ಆದರೆ, ದೇವಿಮನೆ ಘಟ್ಟದಲ್ಲೊಂದು ವಿಶೇಷವಿದೆ.

ದೇವಿಮನೆ ಘಟ್ಟದ ಮಾರ್ಗದಲ್ಲಿ ಎಲ್ಲಾ ಕೋಮಿನ ದೇಗುಲಗಳಿವೆ. ಈ ಮಾರ್ಗದಲ್ಲಿ ನಿತ್ಯ ಕೆಂಪು ಕಲ್ಲನ್ನು ಹೇರಿಕೊಂಡು ಓಡಾಡುವ ವಾಹನಗಳು ಹೆಚ್ಚು. ಹಾಗೆ ಹೇರಿಕೊಂಡು ಬರುವ ಲಾರಿ ಮತ್ತು ಇತರ ಕಲ್ಲು ತುಂಬಿದ ವಾಹನಗಳ ಚಾಲಕರು ಮಾರ್ಗದಲ್ಲಿ ಸಿಗುವ ದೇವರುಗಳಿಗೆ ಒಂದೋ, ಎರಡೋ ಕಲ್ಲನ್ನು ಕಾಣಿಕೆಯಾಗಿ ನೀಡಿ ಘಾಟಿ ಹತ್ತುತ್ತಾರೆ.  ಕಲ್ಲು ಕಾಣಿಕೆಯಾಗುತ್ತಿರುವುದಕ್ಕೆ ಅಲ್ಲಿನ ಜನರು ನಡೆದ ಘಟನೆಯೊಂದನ್ನು ನೆನಪಿಸುತ್ತಾರೆ. ಒಮ್ಮೆ ಕುಮಟಾದಿಂದ ಘಟ್ಟದ ಮೇಲಿನ ಶಿರಸಿಗೆ ಹೊರಟ ಕಲ್ಲು ತುಂಬಿದ ಲಾರಿಯೊಂದು ದೇವಿಮನೆ ಘಟ್ಟದಲ್ಲಿ ಅಪಘಾತಕ್ಕೀಡಾಗಿ ಪುಡಿ ಪುಡಿಯಾಯಿತೆಂದು ಅಂದಿನಿಂದ ಡ್ರೈವರ್‌ಗಳು ತಮ್ಮ ವಾಹನ ಸುರಕ್ಷಿತವಾಗಿ ಘಟ್ಟ ಹತ್ತಲಿ ಎಂದು ಒಂದೊಂದು ಕಲ್ಲನ್ನು ಕಾಣಿಕೆಯಾಗಿ ಅರ್ಪಿಸಿ ದೇವರಲ್ಲಿ ಪ್ರಾರ್ಥಿಸಿ ಸುರಕ್ಷಿತವಾಗಿ ಪ್ರಯಾಣಿಸುತ್ತಾರೆ.

ಅಂದಿನಿಂದ ರೂಢಿಯಾಗಿ ಕಲ್ಲು ಕಾಣಿಕೆ ನಿರಂತರವಾಗಿ ನಡೆಯುತ್ತಲೇ ಇದೆ. ಹೀಗೆ ಹತ್ತಾರು ವರ್ಷಗಳಿಂದ ಸಂಗ್ರಹವಾದ ಕಾಣಿಕೆ ಕಲ್ಲುಗಳಿಂದ  ಎರಡೆರಡು ದೇಗುಲ ಕಟ್ಟಬಹುದಾದಷ್ಟು ಅಪಾರ ಸಂಖ್ಯೆ ಕೆಂಪು ಕಲ್ಲು ಸಂಗ್ರಹವಾಗಿವೆ. ಕಲ್ಲು ಕಾಣಿಕೆಯಾಗಿ ನೀಡಬೇಕೆಂಬ ನಿಯಮವಿಲ್ಲ. ದೇವರ ಅಥವಾ ದೇವಸ್ಥಾನದ ಆಡಳಿತ ಸಮಿತಿಯವರ ಒತ್ತಾಯವಿಲ್ಲ. ಆದರೂ ಪ್ರತೀ ಕಲ್ಲು ಟ್ರಿಪ್‌ನಲ್ಲೂ ಕಾಣಿಕೆಯಾಗಿ ಒಂದೆರಡು ಕಲ್ಲನ್ನು ಕಡ್ಡಾಯವಾಗಿ ಇಳಿಸಿ ಹೋಗುತ್ತಾರೆ. ಇದೊಂದು ವಿಶಿಷ್ಟ ಬಗೆಯ ಹರಕೆಯಾಗಿ ಮೈದಳೆದಿದೆ.