ಚಿತ್ರದುರ್ಗದ ಯರಬಳ್ಳಿಯ ಗ್ರಾಮ ದೇವತೆ ಚಿತ್ರಲಿಂಗ. ವರ್ಷಕ್ಕೊಂದು ಬಾರಿ ಪೂಜೆಗೊಳ್ಳುವ ಈ ದೈವವನ್ನು ವರ್ಷವಿಡೀ ಬಂಧನದಲ್ಲಿಡಲಾಗಿರುತ್ತದೆ. ವಿಚಿತ್ರವಾದರೂ ಸತ್ಯವಾಗಿದೆ. ದನಕರುಗಳನ್ನು ಸಾಕಿಕೊಂಡು ಬದುಕು ಸಾಗಿಸುತ್ತಿರುವ ಕಾಡುಗೊಲ್ಲ ಜನಾಂಗದ ದೇವತೆ ಚಿತ್ರಲಿಂಗ, ನಾಗರಿಕ ಬದುಕನ್ನು ವಿರೋಧಿಸುತ್ತಾನೆಂದು ನಂಬಿಕೆ. ಇಲ್ಲಿ ಜನನವಾದರೂ ಸೂತಕ, ಸತ್ತರೂ ಸೂತಕ. ಗರ್ಭಿಣಿ 9ನೇ ತಿಂಗಳಿಗೆ ಕಾಲಿರಿಸಿದ ಕೂಡಲೇ ಗ್ರಾಮದಿಂದ ಹೊರಗೆ ಗುಡ್ಲು ಕಟ್ಟಿ ಅಲ್ಲಿಗೆ ಕಳುಹಿಸುವ ಸಂಪ್ರದಾಯವಿದೆ. ಗುಡ್ಲು ಸೇರುವ ಹೆಣ್ಣು ಪ್ರಸವದ ಎಲ್ಲ ಪ್ರಕ್ರಿಯೆಗಳನ್ನು ತಾನೇ ಮಾಡಿಕೊಂಡು ಹೊರಬರಬೇಕು. ಈ ಪ್ರಕ್ರಿಯೆಯಲ್ಲಿ ಹೆಣ್ಣು ಅಥವಾ ಮಗು ಸತ್ತರೆ ಅದು ದೇವರ ಶಾಪ, ಉಳಿದರೆ ದೇವರ ವರ ಎಂದು ನಂಬಲಾಗುತ್ತದೆ. ಪ್ರಸವಕ್ಕೆ ಆಸ್ಪತ್ರೆ ಸೇರುವುದೇ ಅಪಶಕುನ ಎಂದು ಭಾವಿಸುತ್ತಾರೆ. ಅವರ ಸಂಪ್ರದಾಯವು ವಿದ್ಯುತ್ ಸಂಪರ್ಕ, ಹುರುಳಿ ಹಾಗೂ ನವಣೆಯನ್ನು ಬೆಳೆಯುವುದು, ತಿನ್ನುವುದನ್ನು ನಿಷೇಧಿಸಿದೆ.

ಚಿತ್ರಲಿಂಗ ಸ್ವಾಮಿ ಗುಡಿಸಲಲ್ಲಿ ನಿರ್ಮಿಸಿದ ದೇವಸ್ಥಾನದಲ್ಲಿದ್ದಾನೆ. ವರ್ಷಕ್ಕೆ ಒಂದು ಬಾರಿ ಕುಲದವರೆಲ್ಲ ಸೇರಿ ಜಾತ್ರೆ ನಡೆಸುತ್ತಾರೆ. ಈ ದೇವಸ್ಥಾನದ ಸುತ್ತಲೂ ಮುಳ್ಳು ಬೇಲಿ ಹಾಕಿ ಮುಚ್ಚಿಟ್ಟು, ಶಿವರಾತ್ರಿಯಲ್ಲಿ ಮಾತ್ರ ಬಾಗಿಲು ತೆಗೆದು ಪೂಜೆ ಪುನಸ್ಕಾರಗಳನ್ನು ನಡೆಸುತ್ತಾರೆ. ಈಗಲೂ ಇದು ರೂಢಿಯಲ್ಲಿದೆ. ಜಾತ್ರೆಯ ಸಂದರ್ಭದಲ್ಲಿ ಇಡೀ ಜನಾಂಗದ ಜನ ಒಟ್ಟಿಗೆ ಸೇರಿ ತಮ್ಮ ಬದುಕಿನ ದುಃಖ ದುಮ್ಮಾನ, ನೋವು, ನಲಿವುಗಳ ಬಗ್ಗೆ ಚರ್ಚಿಸುತ್ತಾರೆ. ಇದು ಕಾಡುಗೊಲ್ಲರಿರುವ ಎಲ್ಲ ಕಡೆಗಳಲ್ಲಿ ಸಾಮಾನ್ಯ; ಗಂಡ ಸತ್ತ ಹೆಣ್ಣು, ಕುಲದೈವ ಕೃಷ್ಣನೇ ತನ್ನ ಗಂಡನೆಂದು ಭಾವಿಸಿ, ಕೈಗೆ ಹಿತ್ತಾಳೆಯ ಕೃಷ್ಣ ಕಡಗ ಕೊಡುವ ಪದ್ಧತಿಯಿದೆ. ಒಮ್ಮೆ ಕಡಗ ತೊಟ್ಟ ಹೆಣ್ಣು ಜೀವನ ಪರ್ಯಂತ ಮುತ್ತೈದೆಯಾಗಿ ಬಾಳುತ್ತಾಳೆ.