ಉತ್ತರ ಕರ್ನಾಟಕದ ಭಾಗಗಳಲ್ಲಿ ಎಳ್ಳು ಅಮವಾಸ್ಯೆಯಂದು ನಡೆಯುವ ಕೃಷಿ ಆಚರಣೆ. ವರ್ಷಕ್ಕೊಂದು ಬಾರಿ ಕೃಷಿಕರು ತಮ್ಮ ತಮ್ಮ ಹೊಲಗಳಿಗೆ ಚರಗದ ಮೂಲಕ ನೈವೇದ್ಯ ಅರ್ಪಿಸುತ್ತಾರೆ. ಮಲೆನಾಡಿನ ಭಾಗಗಳಲ್ಲಿ ಭೂಮಿ ಹುಣ್ಣಿಮೆಯಿಂದು ಭೂಮಿಗೆ ಎಡೆ ಅರ್ಪಿಸಿ, ರೈತರು ತಮ್ಮ ಹೊಲಗಳಿಗೆ ಅನ್ನ ಬೀರುವ ಪದ್ಧತಿ ಇದೆ. ಅಲ್ಲದೆ ‘ಕಟ್ಟಿಜ್ಜಿ’ಯಲ್ಲಿ ರಕ್ತದ ಅನ್ನವನ್ನು ಗದ್ದೆಗಳಿಗೆ ಹಾಕುವ ಪದ್ಧತಿಯೂ ಇದೆ. ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಸಂಕ್ರಾಂತಿಯಂದು ಚರಗ ಚಲ್ಲುವ ಪದ್ಧತಿ ರೂಢಿಯಲ್ಲಿದೆ.

ಎಳ್ಳು ಅಮವಾಸ್ಯೆಯ ಹಬ್ಬದ ನಸುಕಿನಲ್ಲಿ ಎದ್ದ ಯುವಕರು ಬಂಡಿ ತೊಳೆದು, ಚಕ್ರಕ್ಕೆ ಎಣ್ಣೆ ಹಾಕಿ, ಕಮಾನು ಕಟ್ಟಿ, ವಿವಿಧ ಬಗೆಯ ಹೂಗಳಿಂದ ಅಲಂಕರಿಸುತ್ತಾರೆ. ಎತ್ತುಗಳ ಮೈ ತೊಳೆದು, ಬಣ್ಣ ಹಚ್ಚಿ, ಕೊಂಬುಗಳಿಗೆ ಎಣ್ಣೆ ಹಚ್ಚಿ, ಕೋಡು ಹಣಸುಹಾಕಿ, ಹಣೆಪಟ್ಟಿ ಕಟ್ಟುತ್ತಾರೆ. ಕೊರಳಿಗೆ ಕಿರುಗೆಜ್ಜೆ, ಗಂಟೆಗಳ ಸರಕಟ್ಟಿ, ಮೈಮೇಲೆ ಚಿತ್ತಾರದ ಜೂಲ ಹೊದಿಸುತ್ತಾರೆ. ಹಬ್ಬಕ್ಕಾಗಿ ರಾತ್ರಿಯಿಡೀ ನಿದ್ರೆ ಮಾಡದೇ ಹೆಂಗಸರು ಅಡುಗೆ ತಯಾರಿಸುತ್ತಾರೆ. ಅಂದು ಅವರು, ಎಳ್ಳು ಹೋಳಿಗೆ, ಕಡಕ್ ಸಜ್ಜಿರೊಟ್ಟಿ, ಕರಿಕಡಲು, ತರಾವರಿ ಮಸಾಲೆ, ಉಸುಳಿ, ಖಾರಸಾರು, ಎಣ್ಣೆಗಾಯಿ, ಬದನೆಕಾಯಿ ಪಲ್ಯೆ, ಕೆನೆ ಮೊಸರು ಹಾಗೂ ಚರಗದ ನೈವೇದ್ಯಕ್ಕಾಗಿ ಜೋಳ, ಅವರೆ, ಅಕ್ಕಿ ಕಿಚಡಿ ತಯಾರಿಸಿಕೊಳ್ಳುತ್ತಾರೆ.

ಬಿದಿರು ಬುಟ್ಟಿಯಲ್ಲಿ ಅಡುಗೆ ಹಾಗೂ ನೈವೇದ್ಯಗಳನ್ನು ತುಂಬಿಕೊಂಡು, ಹೊಸ ಹೊಸ ಉಡುಗೆಗಳನ್ನು ತೊಟ್ಟು ಹೆಣ್ಣುಮಕ್ಕಳು ಬುಟ್ಟಿಗಳನ್ನು ಹೊತ್ತು ಬಂಡಿಯ ಬಳಿಗೆ ಬರುತ್ತಾರೆ. ಆಗಲೇ ಸಿದ್ಧವಾದ ಬಂಡಿಗಳ ಮೇಲೆ ಬುಟ್ಟಿಗಳನ್ನು ಹಿಡಿದು ಕೂಡುತ್ತಾರೆ. ಪ್ರತಿ ಮನೆಗೆ  ಒಂದರಂತೆ ಬಂಡಿಗಳು ಸಾಲಾಗಿ ಹೊಲದ ಕಡೆಗೆ ಹೋಗುತ್ತವೆ. ಅಂದು ಬಂಡಿಗಳ ಸಾಲು ನೋಡುವುದೇ ಒಂದು ಸೊಗಸು.

ಕುಟುಂಬದ ಸದಸ್ಯರನ್ನೊಳಗೊಂಡ ಬಂಡಿಗಳು ಹೊಲವನ್ನು ಸೇರುತ್ತವೆ. ಹೊಲದಲ್ಲಿರುವ ಬನ್ನಿಗಿಡದ ಕೆಳಗೆ ಭರಮ ದೇವರೆಂದು ಕರೆಯುವ ಕೃಷಿ ದೇವತೆಯನ್ನು ಐದು ಗುಂಡುಕಲ್ಲುಗಳನ್ನಿಡುವುದರ ಮೂಲಕ ಸಾಂಕೇತಿಕವಾಗಿ ಪ್ರತಿಷ್ಠಾಪಿಸುತ್ತಾರೆ. ದೇವರ ಕಲ್ಲುಗಳನ್ನು ತೊಳೆದು ಹೂ ಏರಿಸಿ, ತಿಲಕವಿಟ್ಟು ಅಲಂಕರಿಸುತ್ತಾರೆ. ನೈವೇದ್ಯ ಮಾಡಿದ ನಂತರ ಸ್ವಲ್ಪ ನೈವೇದ್ಯವನ್ನು ಹೊಲದ ನಾಲ್ಕು ದಿಕ್ಕಿಗೂ ಚಲ್ಲಿ ‘ಉಲ್ಲುಲ್ಲಗೋ ….ಚಳಂಬ್ರಿಗೋ’ ಎಂದು ಹೇಳುತ್ತಾರೆ. ನಂತರ ‘ಹುಲಸಾಗಿ ಬೆಳೆ ಬರಲಿ’ ಎಂದು ಭೂಮಿ ತಾಯಿಗೆ ಮಡಿಲು ತುಂಬಿ ಎಲ್ಲರೂ ಕುಳಿತು ನೈವೇದ್ಯದೊಂದಿಗೆ ಅಂದಿನ ಅಡುಗೆಯನ್ನು ಸವಿಯುತ್ತಾರೆ. ಸಂಜೆಯವರೆಗೂ ಹೊಲದಲ್ಲಿಯೇ ಇದ್ದು, ನಂತರ ಚಕ್ಕಡಿ ಏರಿ ಮನೆಗೆ ಬರುತ್ತಾರೆ.