ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಿ ಗ್ರಾಮದ ಆರಾಧ್ಯ ದೈವ ಹನುಮಂತ. ಪ್ರತಿವರ್ಷ ಭಾರತ ಹುಣ್ಣಿಮೆಯ ನಂತರ ವೈಭವಪೂರ್ಣವಾದ ಜಾತ್ರೆ ಜರುಗುತ್ತದೆ. ಅಲ್ಲದೆ ಹನುಮಂತ ದೇವರ ರಥೋತ್ಸವ ಕೂಡ ನಡೆಯು ತ್ತದೆ. ರಥೋತ್ಸವದ ಪೂರ್ವದಲ್ಲಿ ಊರಿನ ಗೊಲ್ಲರು ಹಾಲೋಕಳಿ ಆಡಿ ಸೇವೆ ಸಲ್ಲಿಸುತ್ತಾರೆ.

ಊರ ತೋಟಿಗಳು ತಯಾರಿಸಿದ ಹರಕೆ ಚಪ್ಪಲಿಗಳನ್ನು ಮೆರವಣಿಗೆಯ ಮೂಲಕ ತಂದು ಹನುಮಂತ ಗುಡಿಯ ಎದುರಿನ ಕಟ್ಟೆಯ ಮೇಲೆ ಇಡುತ್ತಾರೆ. ದೈವಾಂಶವುಳ್ಳ ಚಪ್ಪಲಿಗಳಿಂದ ಹೊಡೆಸಿಕೊಳ್ಳಲು ಜಾತ್ರೆಯಲ್ಲಿ ಬಂದ ಭಕ್ತರು ಸಾಲುಗಟ್ಟಿ ನಿಲ್ಲುತ್ತಾರೆ. ಮತ್ತೆ ಕೆಲವರು ಚಪ್ಪಲಿಗಳನ್ನು ತಲೆಯ ಮೇಲೆ ಹೊತ್ತು ತಮ್ಮ ಹರಕೆ ತೀರಿಸುತ್ತಾರೆ. ಚಪ್ಪಲಿಗಳನ್ನು ಹೊರುವುದರಿಂದ ಹಾಗೂ ಹೊಡೆಸಿಕೊಳ್ಳುವುದರಿಂದ ಮೈಕೈ ನೋವು ನಾಶವಾಗುವುದಲ್ಲದೆ, ಮೈಯಲ್ಲಿ ಸೇರಿದ ದುಷ್ಟಶಕ್ತಿಗಳು ದೂರವಾಗುತ್ತವೆಂದು ನಂಬುತ್ತಾರೆ. ಹನುಮಂತ ಹಾಗೂ ಪರಶುರಾಮ ದೇವಾಲಯಗಳಲ್ಲಿ ಚಪ್ಪಲಿ ಸೇವೆ ನಡೆಯುವುದನ್ನು ಕಾಣಬಹುದು. ಚಪ್ಪಲಿಗಳು ಕಲಾತ್ಮಕವಾಗಿ ರೂಪಗೊಂಡಿರುತ್ತವೆ. ಮೈಲಾರಲಿಂಗನ ಚಪ್ಪಲಿಗಳನ್ನು ಭಕ್ತರು ಪೂಜಿಸುವುದನ್ನು ಬಳ್ಳಾರಿ ಜಿಲ್ಲೆಯಾದ್ಯಂತ  ಕಾಣಬಹುದು.