ಚಿಕ್ಕಲ್ಲೂರು ಜಾತ್ರೆಯ ಆರಂಭದಲ್ಲಿ ಉರಿಸುವ ದೊಂದಿ ಜ್ಯೋತಿ. ಪ್ರತಿ ವರ್ಷ ಜನವರಿಯಲ್ಲಿ ಬರುವ ಹುಣ್ಣಿಮೆಯಂದು ಮಂಟೇಸ್ವಾಮಿ ಹಾಗೂ ನೀಲಗಾರ ಪರಂಪರೆಯ ಜಾತ್ರೆ ಜರುಗುತ್ತದೆ. ಚಿಕ್ಕಲೂರು ಸುತ್ತಮುತ್ತಲ ಏಳು ಗ್ರಾಮಗಳ ದಲಿತ ಹಾಗೂ ಹಿಂದುಳಿದ ಜನವರ್ಗಗಳು ಒಂದಾಗಿ ಚಂದ್ರಮಂಡಲ ದೊಂದಿಯನ್ನು ತಯಾರಿಸುತ್ತಾರೆ. ದೊಂದಿಗೆ ಬೇಕಾದ ಪರಿಕರಗಳನ್ನು ಅವರೆಲ್ಲ ಸೇರಿ ಕಾಡಿನಿಂದ ತರುತ್ತಾರೆ. ಹಸಿಬಿದಿರು, ಬೊಂಬು, ಅಚ್ಚಿ, ನಾರುಗಳಿಂದ 25 ರಿಂದ 30 ಅಡಿ ಉದ್ದದ ಕಿರೀಟ ಮಾದರಿಯ ಆಕೃತಿಯೊಂದನ್ನು ತಯಾರಿ ಸುತ್ತಾರೆ. ಈ ಆಕೃತಿಗೆ ಎಣ್ಣೆಯಲ್ಲಿ ನೆನೆಸಿದ ಪಂಜುಗಳನ್ನು ಚುಚ್ಚಿ, ಹೂವು, ಹೊಂಬಾಳೆ ಕಟ್ಟಿ ಅಲಂಕರಿಸುತ್ತಾರೆ.

ಸಿದ್ಧಗೊಂಡ ಚಂದ್ರಮಂಡಲವನ್ನು ಸಿದ್ಧಪ್ಪಾಜಿ ಗದ್ದುಗೆ ಮುಂದೆ ನಿಲ್ಲಿಸುತ್ತಾರೆ. ಹುಣ್ಣಿಮೆ ರಾತ್ರಿ ಸಾವಿರಾರು ಭಕ್ತರ ಮುಂದೆ ಬೊಪ್ಪೇಗೌಡನ ಪುರದ ‘ಸ್ವಾಮಿ’ಗಳು ಗದ್ದುಗೆ ಹಾಗೂ ಚಂದ್ರಮಂಡಲವನ್ನು ಪೂಜಿಸಿ ಅದಕ್ಕೆ ಉರಿ ಹಚ್ಚುತ್ತಾರೆ. ಚಂದ್ರಮಂಡಲ ಹೊತ್ತಿ ದಗದಗಿಸುತ್ತದೆ. ಇದು ಆ ಜಾತ್ರೆಯ ಉದ್ಘಾಟನೆಯ ಸಂಕೇತವಾಗಿ ಕಂಡುಬರುತ್ತದೆ.

ಹರಕೆ ಹೊತ್ತ ಭಕ್ತರು ತಾವು ಬೆಳೆದ ಫಸಲಿನ ಮೊದಲ ತೆನೆಗಳ ಕಾಳುಗಳನ್ನು, ಮುಂದಲ ಬೆಣ್ಣೆ, ತುಪ್ಪ, ಹಣ್ಣು, ಜವನ, ಹರಕೆಯ ಚಿಲ್ಲರೆ ಕಾಸನ್ನು ಎರಚಿ ‘ಉಘೇ’ ಹಾಕುತ್ತಾರೆ. ಚಂದ್ರಮಂಡಲದ ಬೆಂಕಿಯ ಉರಿ ಎಷ್ಟು ಪ್ರಮಾಣದಲ್ಲಿ ಪ್ರಜ್ವಲಿಸುತ್ತದೆ ಹಾಗೂ ಯಾವ ದಿಕ್ಕಿಗೆ ವಾಲುತ್ತದೆ ಎಂಬುವುದರ ಮೇಲೆ ಮುಂದಿನ ಮಳೆ, ಬೆಳೆ ಹಾಗೂ ಹೈನುಗಾರಿಕೆ ಇತ್ಯಾದಿಗಳ ಸಮೃದ್ದಿಯನ್ನು ತಿಳಿದುಕೊಳ್ಳುತ್ತಾರೆ. ಚಂದ್ರಮಂಡಲದ ನಂತರ ದೊಡ್ಡವರ ಸೇವೆ, ಮುಡಿ ಸೇವೆ, ಸಿದ್ಧರ ಸೇವೆ, ಮುತ್ತತ್ತಿರಾಯನ ಸೇವೆಗಳು ನಡೆಯುತ್ತವೆ. ಹರಕೆ ಹೊತ್ತ ಒಕ್ಕಲಿನವರು ಮುಡಿಸೇವೆ ಅರ್ಪಿಸುತ್ತಾರೆ. ನೀಲಗಾರರ ದೀಕ್ಷೆ ಪಡೆಯುವ ಸಂಪ್ರದಾಯವು ನಡೆಯುತ್ತದೆ. ಈ ಜಾತ್ರೆಗೆ ಜಾತಿ, ಮತ, ಕುಲ, ಧರ್ಮಗಳ ಭೇದವಿಲ್ಲದೇ ಜನ ಸೇರುವುದು ಇಲ್ಲಿಯ ವಿಶೇಷವಾಗಿದೆ.