ಕೊರಗರಲ್ಲಿ ಈ ಆಚರಣೆ ಕಂಡುಬರುತ್ತದೆ. ಕೊರಗ ಹುಡುಗನೊಬ್ಬ ಸೊಂಟಕ್ಕೆ ನೆಕ್ಕಿ ಎಂಬ ಸಸ್ಯದ ಸೊಪ್ಪನ್ನು ಅಲಂಕಾರಿಕವಾಗಿ ಕಟ್ಟಿಕೊಂಡು, ಇಡೀ ಮೈಗೆ ಕೆಂಪು ಬಣ್ಣದ ಬಟ್ಟೆ ತೊಟ್ಟುಕೊಂಡಿರುತ್ತಾನೆ. ಮೇಳದಲ್ಲಿ ಡೋಲು, ಕೊಳಲು, ತಾಳ ಇತ್ಯಾದಿ ಸಂಗೀತ ಪರಿಕರಗಳಿರುತ್ತವೆ. ಮೇಳದವರು ಉಂಟುಮಾಡುವ ಸಂಗೀತದ ಗತ್ತಿಗೆ ಹೆಜ್ಜೆ ಹಾಕುತ್ತಾ ಕುಣಿಯುತ್ತಾನೆ. ಈ ಕುಣಿತದಲ್ಲಿ ಹಾಡುಗಳಿ ರುವುದಿಲ್ಲ. ವೇಷಧಾರಿ ಮನೆಯಿಂದ ಮನೆಗೆ ಪ್ರದರ್ಶನ ನೀಡುತ್ತಾ ಮನೆಯವರಿಂದ ಒಣಮೀನು, ಒಣಮೆಣಸು, ಮಸಿ ಕೆಂಡ ಹಾಗೂ ಹಣವನ್ನು ಪಡೆಯುತ್ತಾರೆ. ಮನೆಯ ಯಜಮಾನಿ ವೇಷಧಾರಿಗೆ ಕುಣಿತದ ವೇಳೆ ಬೂದಿ ಮಿಶ್ರಿತ ನೀರನ್ನೂ ಎರಚುತ್ತಾಳೆ. ಚುಣ್ಣ ವೇಷಧಾರಿ ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳನ್ನು ಸ್ಪರ್ಶಿಸಿದರೆ ಆರೋಗ್ಯ ಬರುತ್ತದೆಂದು ನಂಬುತ್ತಾರೆ. ಚುಣ್ಣ ವೇಷಧಾರಿ ಪ್ರತಿ ಮನೆಯ ಅಂಗಳದಲ್ಲಿ ನರ್ತಿಸಿ, ಆ ಮನೆಯ ಅನಿಷ್ಟವನ್ನು ಕಳೆಯುತ್ತಾನೆಂದು ನಂಬಿಕೆ ಇದೆ. ಇದೊಂದು ಆಚರಣಾತ್ಮಕ ಕುಣಿತವಾಗಿ ಇಂದಿಗೂ ದಕ್ಷಿಣ ಕನ್ನಡ ಜಿಲ್ಲೆ ಪ್ರದೇಶದಲ್ಲಿ ಚಾಲ್ತಿಯಲ್ಲಿದೆ. ಜನರು ಚುಣ್ಣನನ್ನು ಸ್ವಾಗತಿಸಿ, ಗೌರವಿಸುತ್ತಾರೆ.