ಬಿಜಾಪುರ, ಬಾಗಲಕೋಟೆ ಕಡೆಯ ಕೆಲವು ಗ್ರಾಮಸ್ಥರು ಮಳೆಗಾಲದ ಆರಂಭದಲ್ಲಿ ನಡೆಸುವ ಆಚರಣೆ. ಅಲ್ಲಿನ ಶ್ರೀದೈವ ಸೀಮೆ ಲಕ್ಕವ್ವ. ಅವಳು ಓಕಳಿಯಲ್ಲಿ ಸಂತೃಪ್ತಿ ಪಡೆದು ಕಾಪಾಡಲಿ ಎನ್ನುವುದೇ ಓಕಳಿ ಆಚರಣೆಯ ಉದ್ದೇಶ. ಅಲ್ಲದೆ ಕಾಲರಾ ಇನ್ನಿತರ ಸೋಂಕು ರೋಗಗಳು ಬಾರದಿರಲಿ ಎನ್ನುವ ಉದ್ದೇಶವೂ ಇದೆ.

ಬೇಸಿಗೆ ಧಗೆ ಕಡಿಮೆಯಾಗುತ್ತಿರುವ ಹಾಗೂ ಮುಂಗಾರು ಮಳೆ ಆರಂಭವಾಗುವ ವೇಳೆ ಊರಿನ ಜನರು ಒಂದಾಗಿ ಓಕಳಿಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಾರೆ. ನಾಲ್ಕು ರಸ್ತೆಗಳು ಸೇರುವ ವೃತ್ತದಲ್ಲಿ ‘ಓಕಳಿ ಹೊಂಡ’ ನಿರ್ಮಾಣ ಮಾಡುತ್ತಾರೆ. ಆ ಹೊಂಡದ ಸುತ್ತ ತಳಿರು‑ತೋರಣ, ಕಬ್ಬಿನ ಜಲ್ಲೆ ಇತ್ಯಾದಿ ಅಲಂಕಾರಿಕ ವಸ್ತುಗಳಿಂದ ಶೃಂಗರಿಸುತ್ತಾರೆ. ನಂತರ ಊರಿನ ದೈವ ಲಕ್ಕವ್ವನಿಗೆ ಪೂಜೆ ಸಲ್ಲಿಸಿ, ತಲಾ ಒಂದೊಂದು ‘ಕಲ್ಲೇದ ಕೊಡ’ ಹೊತ್ತು ಹೊಳೆ, ಹಳ್ಳ ಅಥವಾ ಬಾವಿಯಿಂದ ನೀರನ್ನು ತುಂಬಿಸಿಕೊಂಡು ಗಾಡಿಯಿಂದ ಸಾಗಿಸಿ ಓಕಳಿ ಹೊಂಡವನ್ನು ತುಂಬಿಸುತ್ತಾರೆ. ಈಚೆಗೆ ನೀರನ್ನು ಸಾಗಿಸಲು ಟ್ರ್ಯಾಕ್ಟರ್ ಬಳಸುತ್ತಾರೆ. ಸಂಜೆಯ ಹೊತ್ತಿಗೆ ಹೊಂಡದ ನೀರಿಗೆ ಬಣ್ಣ ಹಾಕಿ ಅದನ್ನು ‘ರಂಗೀನ’ಗೊಳಿಸುತ್ತಾರೆ.

ಹೊಂಡಕ್ಕೆ ನೀರು ತುಂಬಿಸುವುದಕ್ಕಿಂತ ಮೊದಲು ದೇವಿಗೆ ‘ವಾರ’ ಆಚರಿಸುತ್ತಾರೆ. ಒಂದು ತಿಂಗಳಿನ ನಾಲ್ಕು ಶುಕ್ರವಾರಗಳಲ್ಲಿ ಪರ ಊರಿಗೆ ಹೋಗುವುದಾಗಲಿ, ಅಂದು ರೊಟ್ಟಿ ಸುಡುವುದಾಗಲಿ ನಿಷಿದ್ಧ. ದೇವಿಗೆ ಉಡಿತುಂಬಿ ಭಕ್ತಿ ಗೌರವಗಳಿಂದ ಪೂಜಿಸುತ್ತಾರೆ. ಅಂದಿನಿಂದ ಐದುದಿನ ಓಕಳಿಯಾಟ ನಡೆಯುತ್ತದೆ. ಐದನೆ ದಿನ ಸಂಜೆ ಸಾಹಸಿಗಳು 60‑70 ಅಡಿ ಉದ್ದದ ಹಾಲುಗಂಬ ಏರುತ್ತಾರೆ. ಯಶಸ್ವಿಯಾದ ಸಾಹಸಿ ಭಕ್ತನನ್ನು ಬೆಳ್ಳಿಯ ಕಡಗದ ಇನಾಮು ನೀಡಿ ಗೌರವಿಸಲಾಗುತ್ತದೆ. ಸಾಹಸಿಯನ್ನು ಅಂದು ಊರಿನಲ್ಲಿ ಮೆರವಣಿಗೆ ಮಾಡುತ್ತಾರೆ.

ಓಕಳಿಯಾಟವು ರೋಚಕವಾಗಿರುತ್ತದೆ. ತೊಗಚಿಯ ಛಡಿ ಹಿಡಿದವರ ಮೇಲೆ ಓಕಳಿ ನೀರನ್ನು ಎರಚಲಾಗುತ್ತದೆ. ಹೀಗೆ ನೀರು ಎರಚಲು ಬಂದವರನ್ನು ಅಟ್ಟಿಸಿ, ಛಡಿಯಿಂದ ಹೊಡೆಯಲು ಪ್ರಯತ್ನಿಸುತ್ತಾರೆ. ಹಲವು ವೇಳೆ ಛಡಿಯ ಏಟು ಓಕಳಿ ಎರಚುವವರಿಗೆ ತಗಲುವ ಸಂಭವವಿದೆ. ಈ ವೇಳೆಯಲ್ಲಿ ಸುತ್ತ ನಡೆದ ಭಕ್ತ ವೃಂದ ಹೇ ಹೇ ಕಾರ ಮಾಡುತ್ತದೆ. ಮಳೆಯನ್ನು ಅವಲಂಬಿಸಿರುವ ಈ ಆಚರಣಾ ಸಂಬಂಧೀ ಜನಪದ ಆಟ ಇತ್ತೀಚೆಗೆ ಮರೆಯಾಗುತ್ತಿದೆ.