ದೇವರಿಗೆ ಆರತಿ ಬೆಳಗುವ ಮದುವೆಯಾದ ಹುಡುಗರು. ಕೊಪ್ಪಳ ಜಿಲ್ಲೆಯ ಯಮಲಗೇರಿಯ ಊರಜ್ಜ ಹನುಮಪ್ಪನ ಜಾತ್ರೆಯಲ್ಲಿ ನಡೆಯುವ ಒಂದು ಸಂಪ್ರದಾಯ. ಪ್ರತಿ ವರ್ಷಕ್ಕೆ ಒಂದು ಬಾರಿ ಜನವರಿ ತಿಂಗಳಲ್ಲಿ ನಡೆಯುವ ಜಾತ್ರೆಯಲ್ಲಿ ಮಾತ್ರ ಈ ಆಚರಣೆಯನ್ನು ಕಾಣಬಹುದು. ಉಳಿದಂತೆ ಎಲ್ಲ ಸಂದರ್ಭಗಳಲ್ಲಿ ಹೆಣ್ಣುಮಕ್ಕಳೇ ಆರತಿ ಬೆಳಗುವ ಕಾಯಕ ಮಾಡುತ್ತಾರೆ. ಜಾತ್ರೆಯಲ್ಲಿ ಹೆಣ್ಣುಮಕ್ಕಳು ದಿಂಡು ನಮಸ್ಕಾರ ಮಾಡುವುದು, ಮಕ್ಕಳ ಜವಳ ತೆಗೆಸುವುದು, ದೇವರಿಗೆ ನೈವೇದ್ಯ ಅರ್ಪಿಸುವುದು ಇತ್ಯಾದಿ ಸೇವಾ ಹರಕೆಗಳನ್ನು ಮಾಡುತ್ತಾರೆ.

ಪೂಜಾರಿಯ ಸಾರಥ್ಯದಲ್ಲಿ ಪಲ್ಲಕ್ಕಿ ಹೋರುವವರು, ಛತ್ತರಿಗೆ ಹಿಡಿದವರು, ಡೊಳ್ಳಿನವರು, ಬ್ಯಾಂಡು ಭಜನೆಯವರು, ದೀವಟಿಗೆ ಹಿಡಿದವರು ಇನ್ನೂ ಮುಂತಾದವರಿರುತ್ತಾರೆ. ಅಲಂಕೃತ ಹನುಮ ದೇವರ ಪಲ್ಲಕ್ಕಿಯ ವಿವಿಧ ಬಗೆಯ ಹೂ, ಹಾರ ಇತ್ಯಾದಿಗಳಿಂದ ಸಿದ್ಧಗೊಂಡು ದೇವಾಲಯದ ಅಂಗಳಲ್ಲಿರುತ್ತದೆ. ಆರತಿ ಎತ್ತಲು ತಲೆಗೆ ಟವೆಲ್ ಸುತ್ತಿ ತುಂಬು ತೋಳು ಅಂಗಿ ಹಾಕಿ, ಲುಂಗಿಯಿಂದ ಕಚ್ಚೆ ಹಾಕಿ, ಹಣೆಗೆ ಕುಂಕುಮದ ತಿಲಕವಿಟ್ಟು, ಕಲಶದಲ್ಲಿ ಎಲೆ ತುಂಬಿದ ಆರತಿ ತಟ್ಟೆ ಹಿಡಿದ ಯುವಕರು ಸಿದ್ಧರಾಗಿ ಬರುತ್ತಾರೆ. ದೇವರ ಪಲ್ಲಕ್ಕಿ ಮೆರವಣಿಗೆಯ ಜೊತೆಗೆ ಆರತಿ ತಟ್ಟೆ ಹಿಡಿದ ಯವಕರಿಬ್ಬರು ಗುಡ್ಡಕ್ಕೆ ಹೋಗುತ್ತಾರೆ. ಅಲ್ಲಿ ಮಣ್ಣಿನ ಪೊದೆಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿ, ಮುಳ್ಳು ಕೀಳುವ ಕಾಯಕಕ್ಕೆ ಚಾಲನೆ ನೀಡುತ್ತಾರೆ. ಮುಳ್ಳು ಹರಕೆಗೆ ಹಾಗೂ ಮುಳ್ಳು ಪಲ್ಲಕ್ಕಿಗೆ ಬೇಕಾದ ಮುಳ್ಳುಗಳನ್ನು ಸಂಗ್ರಹಿಸಲಾಗುತ್ತದೆ. ಭಕ್ತರು ಸಂಗ್ರಹಿಸಿದ ಮುಳ್ಳಿನ ರಾಶಿಯನ್ನು  ಪೂಜಾರಿಯು ಪೂಜಿಸುತ್ತಾನೆ. ಆರತಿಯನ್ನು ಬೆಳಗುತ್ತಾರೆ. ನಂತರ ಸಂಗ್ರಹಿಸಿದ ಮುಳ್ಳನ್ನು ದೇವಾಲಯದ ಮುಂದಿನ ಅಂಗಳದಲ್ಲಿ ರಾಶಿ ಹಾಕುತ್ತಾರೆ.

ಮುಳ್ಳಿನ ಪಲ್ಲಕ್ಕಿ ಹರಕೆ, ಪಾಯಸದ ಹರಕೆ, ಬೆಂಕಿಕೊಂಡ ಹಾಯುವ ಭಕ್ತರಿಗೆ ಆರತಿ ಬೆಳಗುವ ಯುವಕರು, ಹನುಪ್ಪನ ಮೂರ್ತಿಗೂ ಆರತಿ ಬೆಳಗುತ್ತಾರೆ. ಈ ಒಂದು ದಿನ ಹೆಂಗಸರು ಆರತಿ ಬೆಳಗುವಂತಿಲ್ಲ. ಪದ್ಧತಿ ವಿರುದ್ಧ ಹೆಣ್ಣುಮಕ್ಕಳು ಆರತಿ ಹಿಡಿದರೆ ಊರಿಗೆ ಕೇಡಾಗುವುದೆಂದು ನಂಬಿಕೆ ಇದೆ.