ರಾಮನಗರ ತಾಲೂಕು ದೇವರದೊಡ್ಡಿಯ ಕಾಡುಗೊಲ್ಲರ ದೀಪಾವಳಿ ಆರಾಧನೆಯಲ್ಲಿ ನಡೆಯುವ ಆರಾಧನ ನೃತ್ಯ. ಹುಚ್ಚೆಳ್ಳು ಹೂ, ಆವರಿಕೆ ಗಿಡ, ಅಣ್ಣೆ ಸೊಪ್ಪುಗಳನ್ನು ಕಿತ್ತು ತಂದು ತಮ್ಮ ತಮ್ಮ ಮನೆ ಬಾಗಿಲ ಮುಂದೆ ಸಿಕ್ಕಿಸುವುದರ ಮೂಲಕ ಹಬ್ಬ ಆರಂಭವಾಗುತ್ತದೆ. ಇದನ್ನು ‘ಪತ್ರೆ’ ಹಾಕುವುದು ಎಂದು ಕರೆಯುತ್ತಾರೆ. ನರಕ ಚತುರ್ದಶಿ ಎರಡು ದಿನ ಮೊದಲು ಪ್ರಾರಂಭಿಸಿ ಹಬ್ಬದವರೆಗೂ ಮೂರು ದಿನ ಪ್ರತಿ ಸಂಜೆ ಪತ್ರೆ  ಹಾಕಿ, ಬಾಗಿಲಲ್ಲಿ ಹಣತೆ ಹಚ್ಚಿಡುತ್ತಾರೆ.

ದನಕರುಗಳ ಮೈತೊಳೆದು ತಾವು ಮಡಿಯಾಗುತ್ತಾರೆ. ಪತ್ರೆ ಹಾಕಿದ ದಿನದಿಂದ ಹಸುಗಳ ಹಾಲನ್ನು ಹಿಂಡುವುದಿಲ್ಲ. ಹಬ್ಬದ ಸಂಜೆ ಆಯಾಯ ಮನೆಯ ಗಂಡಸರು ತಮ್ಮ ಬಾಯಿಗೆ ಬಟ್ಟೆ ಕಟ್ಟಿಕೊಂಡು ಹಾಲು ಕರೆಯುತ್ತಾರೆ. ಆಗಲೇ ಜುಂಜಪ್ಪನ ದೇವಸ್ಥಾನದ ಮುಂದೆ ಸಗಣಿಯಿಂದ ಸಿದ್ಧಪಡಿಸಿದ ಅರ್ಧ ಅಡಿ ಆಳದ ಹೊಂಡಕ್ಕೆ ಪೂಜಾರಿ ಪೂಜೆ ಸಲ್ಲಿಸಿದ ನಂತರ ಕರೆದು ತಂದ ಹಾಲನ್ನು ಹಾಕುತ್ತಾರೆ. ಸಗಣಿಯ ಜೊತೆಗೆ ಹಾಲು ಕಲೆಸಿ ಅದರಲ್ಲಿ ಮುಳ್ಳು ಇಡುತ್ತಾರೆ.

ಮಧ್ಯರಾತ್ರಿ ಸುಮಾರಿಗೆ ಪೂಜೆ ನಂತರ ‘ವಾನ’ ‘ದಾಳು’, ‘ಛತ್ರಿ’ ಹಾಗೂ ಜುಂಜಪ್ಪನ ಬಸವಗಳೊಂದಿಗೆ ಜುಂಜಪ್ಪನ ಗುಡಿಯ ಮುಂದೆ ಮೆರವಣಿಗೆ ನಡೆಯುತ್ತದೆ. ಮೆರವಣಿಗೆಯಲ್ಲಿ ಎರಡು ಸೋಮಗಳಿರುವುದು ವಿಶೇಷ. ಆ ಆರಾಧನಾ ಕುಣಿತವು ಬೆಳಗಿನ ನಾಲ್ಕು ಗಂಟೆಗೆ ಮುಗಿಯುತ್ತದೆ. ಮೆರವಣಿಗೆ ಯಲ್ಲಿ ದೇವರನ್ನು ಹೊತ್ತವರ ಕಾಲಿಗೆ ಹಾಗೂ ಬಸವನ ಕಾಲಿಗೆ ನೀರು ಹಾಕಿದ ಪೂಜಾರಿ ಯವರ ಮನೆಯವರು ಕಲಾರತಿ ಬೆಳಗಿ ಪೂಜೆ ಮಾಡುತ್ತಾರೆ.

ಪೂಜಾರಿಗಳು ಎರಡು ದೊಡ್ಡ ಜಗನ್ಜ್ಯೋತಿಗಳನ್ನು ಹಿಡಿದು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಬರುತ್ತಾರೆ. ಪ್ರದಕ್ಷಿಣೆ ಆದ ನಂತರ ಸಾಲುದೀಪಗಳ ಅಟ್ಟಣಿಗೆಗೆ ದೊಡ್ಡ ದೀಪಗಳನ್ನು ಸಿಕ್ಕಿಸುತ್ತಾರೆ. ನೂರೊಂದು ಸಾಲು ದೀಪಗಳನ್ನು ಬೆಳಗುತ್ತಾರೆ. ಹರಕೆ ಹೊತ್ತವರು ಜ್ಯೋತಿಗಳ ಬದಲಿಗೆ ಶ್ರೀಗಂಧ, ಹರಳು, ತುಪ್ಪ ಇತ್ಯಾದಿ ಹಾಕುತ್ತಾರೆ. ಹಬ್ಬ ಮುಗಿಯುವವರೆಗೆ ನೂರೊಂದು ಸಾಲು ದೀಪ ಹಚ್ಚಿ ತಮ್ಮ ಭಕ್ತಿಯನ್ನು ತೋರುತ್ತಾರೆ. ಬೆಳಿಗ್ಗೆ ‘ಮಣೇವು’ ನಡೆಯುತ್ತದೆ. ಹರಕೆ ಹೊತ್ತ ಭಕ್ತರು ದೇವರಿಗೆ ಮುಡಿಯನ್ನು ಒಪ್ಪಿಸುತ್ತಾರೆ.

ದೊಡ್ಡ ಗಾತ್ರದ ಹಣತೆಯನ್ನು ಪೂಜಾರಿ ಹಿಡಿದು ಕುಣಿಯುತ್ತಿರುತ್ತಾನೆ. ಉಳಿದ ಗರುಡ ಗಂಭವನ್ನು ಇತರರು ಹಿಡಿದು ಕುಣಿಯುತ್ತಾರೆ. ಇದೊಂದು ಕೃಷಿ ಸಂಸ್ಕೃತಿಯ ಹಿನ್ನೆಲೆಯ ಹಬ್ಬವೆಂದು ಸ್ಪಷ್ಟವಾಗಿ ಹೇಳಬಹುದು. ಹೊಸ ಬೆಳೆಯನ್ನು ಸ್ವಾಗತಿಸುವ, ಆರಾಧಿಸುವ ಆಶಯದಿಂದ ಕೂಡಿದ ಹಬ್ಬವಾಗಿ ಕಂಡುಬರುತ್ತದೆ.