ಅನಂತನ ಹುಣ್ಣಿಮೆಯಲ್ಲಿ ಉತ್ತರ ಕರ್ನಾಟಕದ ಕಡೆ ಈ ಆಚರಣೆ ನಡೆಯುತ್ತದೆ. ಇದನ್ನು ಜನ ಜ್ಯೋಕ್ಯಾನ ಹುಣ್ಣಿಮೆ ಎಂತಲೂ ಕರೆಯುತ್ತಾರೆ. ಭಾದ್ರಪದ ಮಾಸದಲ್ಲಿ ಶುಕ್ಲಪಕ್ಷದ ಸಂದರ್ಭದಲ್ಲಿ ಗಂಗಾಮತದ ಹೆಣ್ಣುಮಕ್ಕಳು ಗಣಪತಿ ಕಳುಹಿಸಿದ ನಂತರ ಬೇವಿನ ಸೊಪ್ಪಿನಿಂದ ತುಂಬಿದ ಬುಟ್ಟಿಯಲ್ಲಿ ಒಂದು ಮೂರ್ತಿಯನ್ನಿಟ್ಟುಕೊಂಡು ಮನೆ ಮನೆಗೂ ಹೋಗಿ ಕಾಳು ಕಡ್ಡಿಗಳನ್ನು ಪಡೆದುಕೊಳ್ಳುವ ವಿಶೇಷ ಆಚರಣೆ. ಅಗಲಮುಖ, ತಕ್ಕಂತೆ ಕಣ್ಣು, ತಲೆಗೆ ಕಿರೀಟದಂತೆ ಭಾಸವಾಗುವ ತಲೆಸುತ್ತು, ಚೂಪಾದ ಹುರಿಮೀಸೆ, ತೆರೆದ ಬಾಯಿ, ಹಣೆಗೆ ವಿಭೂತಿ ಕುಂಕುಮದ ಪಟ್ಟಿಗಳು, ಗಿಡ್ಡದಾದ ಕಾಲುಗಳಿರುವ ಕೈಯಲ್ಲಿ ಸಣ್ಣ ಕತ್ತಿ ಹಿಡಿದ ಮಣ್ಣಿನ ಈ ಬೊಂಬೆಯನ್ನು ಪೂರ್ಣ ಬೇವಿನಸೊಪ್ಪು ತುಂಬಿದ ಪುಟ್ಟಿಯಲ್ಲಿಟ್ಟುಕೊಂಡು ಗಂಗೆ ಮಕ್ಕಳು ಇಲ್ಲವೇ ತಳವಾರರು ಅವನನ್ನು ವರ್ಣಿಸುವ ಹಾಡುಗಳನ್ನು ಹಾಡುತ್ತಾರೆ.

ಆರಂಭದಲ್ಲಿ ಜೋಕುಮಾರನನ್ನು ಹೊತ್ತ ಮಹಿಳೆಯರು ಊರಿನ ಗೌಡ ಅಥವಾ ಶಾನುಭೋಗರ ಮನೆಗೆ ಭೇಟಿ ನೀಡಿ ಕಾಳು ಕಡ್ಡಿಗಳನ್ನು ಪಡೆದ ನಂತರವೇ ಊರು ಸುತ್ತಲು ಆರಂಭಿಸುತ್ತಾರೆ. ಇದು ಏಳು ದಿನಗಳ ಕಾಲ ನಡೆಯುತ್ತದೆ.

ಜೋಕುಮಾರನನ್ನು ಗ್ರಾಮೀಣ ದೇವತೆ, ಫಲದೇವತೆ, ಮಳೆ ದೇವತೆ, ಮಕ್ಕಳನ್ನು ಕೊಡುವ ದೇವತೆ ಹೀಗೆ ಹಲವು ವಿಧಗಳಿಂದ ನೋಡಿ ಭಕ್ತಿ ಗೌರವಗಳಿಂದ ಪೂಜಿಸುತ್ತಾರೆ. ಭಾದ್ರಪದದಲ್ಲಿ ಭೂಮಿಗೆ ಬಂದ ಗಣೇಶನು ಮಳೆ ತರದೇ ಕೈಲಾಸಕ್ಕೆ ಹೋದಾಗ ಈತನು ರೈತರ ಬವಣೆ ಕಂಡು ಮಳೆ ತರುತ್ತಾನೆಂದು ನಂಬುತ್ತಾರೆ. ಈ ಹಿನ್ನೆಲೆಯಲ್ಲಿ ಈತನು ಮಳೆ ದೇವತೆ. ಈ ದೇವತೆಯನ್ನು ಹೊತ್ತವರು ಪ್ರಸಾದ ರೂಪದಲ್ಲಿ ಹುಳಿ, ಅಂಬಲಿ, ನುಚ್ಚುಗಳೊಂದಿಗೆ ಆತನ ಸುತ್ತಲು ಹೊದಿಸಿದ ಬೇವಿನ ಸೊಪ್ಪನ್ನೇ ಪ್ರಸಾದದ ರೂಪದಲ್ಲಿ ಪ್ರತಿಯಾಗಿ ನೀಡುತ್ತಾರೆ. ಜೋಕುಮಾರನು ಮನೆ ಮನೆಗೆ ತೆರಳಿದಾಗ ಆ ಮನೆಯವರು ಹೈನುಗಾರರಾದರೆ ಅವನ ಬಾಯಿಗೆ ಬೆಣ್ಣೆಯನ್ನು ಸವರುತ್ತಾರೆ. ಮತ್ತೆ ಕೆಲವು ಮನೆಯವರು ತಮ್ಮ ಮನೆಯಲ್ಲಿರುವ ಸೊಳ್ಳೆ ಹಾಗೂ ತಗಣಿಗಳನ್ನು ತಂದು ಜೋಕುಮಾರನ ಬುಟ್ಟಿಗೆ ಹಾಕುತ್ತಾರೆ. ಕ್ಷುದ್ರ ದೇವತೆಯಾದ ಜೋಕುಮಾರನನ್ನು ಸಂತೃಪ್ತಿಪಡಿಸದಿದ್ದರೆ ತೊಂದರೆ ಕೊಡುತ್ತಾನೆ ಎಂದು ನಂಬುತ್ತಾರೆ. ಗಣಪತಿ ರಾಜ ಐಶ್ವರ್ಯದ ಪ್ರತೀಕವೆಂತಲೂ, ಜೋಕುಮಾರನು ಬಡವರ ಪ್ರತಿನಿಧಿಯೆಂತಲೂ, ಬಡವರಿಗಾಗಿ ಮಳೆ ತರಿಸುತ್ತಾನೆಂಬ ನಂಬಿಕೆಯಿದೆ.

ಜೋಕುಮಾರ ಮೂರ್ತಿಯನ್ನು ಕುಂಬಾರರು ತಯಾರಿಸುತ್ತಾರೆ. ಅಂಬಿಗರು, ಕಬ್ಬಲಿಗರು, ತಳವಾರರು ಈ ಮೂರ್ತಿಗಳನ್ನು ಕುಂಬಾರರಿಂದ ಕೊಂಡು ಪುಟ್ಟಿಯಲ್ಲಿಟ್ಟು ಅದಕ್ಕೆ ಬೇವಿನ ಸೊಪ್ಪಿನ ಶೃಂಗಾರ ಮಾಡುತ್ತಾರೆ. ಹೀಗೆ ಶೃಂಗಾರಗೊಂಡ ಬುಟ್ಟಿಗಳನ್ನು ತಲೆಯ ಮೇಲೆ ಹೊತ್ತು ಊರೂರು  ಸುತ್ತುತ್ತಾರೆ. ಜೋಳ ಇತ್ಯಾದಿ ಧಾನ್ಯ ನೀಡಿದವರಿಗೆ ಪ್ರತಿಯಾಗಿ ಬೇವಿನ ತಪ್ಪಲು, ಹುಳಿ ಸೊಪ್ಪನ್ನು ನೀಡುತ್ತಾ ಏಳು ದಿನಗಳ ಕಾಲ ಸಂಚರಿಸುತ್ತಾರೆ. ಏಳನೇ ದಿನ ರಾತ್ರಿ ಹೊಲೆಮಾದಿಗರ ಕೇರಿಯ ಆಯ್ದ ಸ್ಥಳದಲ್ಲಿಟ್ಟು ಅದರ ಸುತ್ತಲೂ ಮುಳ್ಳಿನ ಕಂಟಿಗಳನ್ನು ಇಟ್ಟು ಹೆಣ್ಣುಮಕ್ಕಳು ಅದರ ಸುತ್ತಲೂ ಹಾಡುತ್ತ ಸುತ್ತುತ್ತಾರೆ. ಹೀಗೆ ಸುತ್ತುವ ಸಂದರ್ಭದಲ್ಲಿ ಹೆಣ್ಣುಮಕ್ಕಳ ಸೆರಗಿಗೆ ಮುಳ್ಳುಗಳು ಚುಚ್ಚಿದಾಗ, ಗಂಡಸರು ತಮ್ಮ ಹೆಂಗಸರ ಸೆರಗನ್ನು ಜೋಕುಮಾರ ಎಳೆದನೆಂದು ಭಾವಿಸಿ ಒನಕೆಯಿಂದ ಬಡಿಯುತ್ತಾರೆ. ಜೋಕುಮಾರ ಮೂರ್ತಿಯ ರುಂಡ ಅಂಗಾತಬಿದ್ದರೆ ಸುಖ ಕಾಲವೆಂತಲೂ ಬೋರಲಾಗಿ ಬಿದ್ದರೆ ದುಃಖದ ಕಾಲವೆಂತಲೂ ನಂಬುತ್ತಾರೆ. ಈ ರುಂಡ ಮುಂಡಗಳನ್ನು ಆಯ್ದು ಅಗಸರ ಕಾಯಕದ ಸ್ಥಳವಾದ ಹೊಳೆಯ ಕಲ್ಲಿನಡಿ ಹಾಕಿ ಬರುತ್ತಾರೆ. ಅಲ್ಲಿ ಜೋಕುಮಾರ ನರಳಿ ನರಳಿ ಸಾಯುತ್ತಾನೆಂದು ಅವರು ಭಾವಿಸುತ್ತಾರೆ. ಅಗಸರು ತಮಗೆ ತೊಂದರೆಯಾಗದಿರಲೆಂದು ಮೂರು ದಿನ ತಮ್ಮ ಕಾಯಕಕ್ಕೆ ರಜೆ ಮಾಡಿ ನಾಲ್ಕನೇ ದಿ ಜೋಕುಮಾರನ ದಿನ ಕರ್ಮಗಳನ್ನು ಮಾಡಿ ತಮ್ಮ ದೈನಂದಿನ ಕಾಯಕವನ್ನು ಆರಂಭಿಸುತ್ತಾರೆ. ಮೌಖಿಕ ಸಾಹಿತ್ಯದ ಪ್ರಕಾರ ಜೋಕುಮಾರನ ತಾಯಿ ‘ದಿಟ್ಣಾದೇವಿ,’ ‘ಎಳೆಗೌರಿ’ ‘ಮಾರಿ’ ಎಂಬುದಾಗಿದೆ. ಜೋಕುಮಾರ ಒಬ್ಬ ಕಾಯಕ ದೈವವಾಗಿ ಪ್ರತಿಬಿಂಬಿತವಾಗಿದೆ.