ಹಿರಿಯೂರು ತಾಲೂಕಿನ ಚಿಕ್ಕೀರಣ್ಣನ ಮಾಳಿಗೆ ಎಂಬ ಊರಿನಲ್ಲಿ ನಡೆಯುವ ಅತ್ತೆ-ಸೊಸೆ ಹಾಗೂ ಅತ್ತಿಗೆ-ನಾದಿನಿಯರು ಕದನವಾಡುವ ಒಂದು ವಿಶಿಷ್ಟ ಆಚರಣೆ. ಅಲ್ಲಿಯ ಗ್ರಾಮದೇವತೆ ಅಹೋಬಲ ನರಸಿಂಹಸ್ವಾಮಿ. ಪ್ರತಿ ವರ್ಷ ಕಾರ್ತಿಕ ಅಮಾವಾಸ್ಯೆಯ ನಂತರದ ಹನ್ನೊಂದನೇ ದಿನ ನಡೆಯುವ ನರಸಿಂಹಸ್ವಾಮಿ ಜಾತ್ರೆಯ ಕೊನೆಯ ದಿನ ಹೆಂಗಸರು ಡಿಕ್ಕಿ ಹೊಡೆದುಕೊಂಡು, ಪ್ರೀತಿಯಿಂದ ಇರುವ ಸಂಕಲ್ಪ ಮಾಡಿಕೊಳ್ಳುತ್ತಾರೆ.

ಅತ್ತೆ-ಸೊಸೆ, ನಾದಿನಿ-ಅತ್ತಿಗೆಯರು ಬೀದಿಯಲ್ಲಿ ಇಳಿದು ತಲೆಗೆ ತಲೆ, ಜುಟ್ಟಿಗೆ ಜುಟ್ಟು, ಸೆರಗಿಗೆ ಸೆರಗು ಹಿಡಿದು ಕದನ ಮಾಡುವ ಮೊದಲು ಕೆಲವು ವಿಧಿವಿಧಾನಗಳು ನಡೆಯುತ್ತವೆ. ಸುಲಿದ ಬಾಳೆಹಣ್ಣುಗಳನ್ನು ದೇವಸ್ಥಾನದ ಎದುರು ಸಾಲಾಗಿ ರಾಶಿ ಹಾಕಿರುತ್ತಾರೆ. ಅರೆನಗ್ನರಾದ ಗಂಡಸರು ಬಾಳೆಹಣ್ಣು ತಿನ್ನಲು ಪ್ರಯತ್ನಿಸುತ್ತಾರೆ. ಬೆತ್ತಹಿಡಿದ ಪೂಜಾರಿ ಅವರನ್ನು ದೇವಸ್ಥಾನದ ಸುತ್ತಲೂ ಓಡಿಸುತ್ತಾನೆ. ಬಾಳೆಹಣ್ಣು ತಿನ್ನಲು ಪ್ರಯತ್ನಿಸುತ್ತಿದ್ದ ಭಕ್ತರಿಗೆ ಬೆತ್ತದಿಂದ ಹೊಡೆಯುತ್ತಾನೆ. ಅತ್ತೆ-ಸೊಸೆ, ನಾದಿನಿ-ಅತ್ತಿಗೆಯವರು ಕದನಕ್ಕೆ ಮೊದಲು ಎರಡು ಶೃಂಗಾರಗೊಂಡ ಕುರಿಗಳನ್ನು ಮೂರು ಸಾರಿ ಡಿಕ್ಕಿ ಹೊಡೆಸುತ್ತಾರೆ, ನಂತರ ಅವರ ಕದನ ಆರಂಭವಾಗುತ್ತದೆ.

ಅತ್ತೆ, ಅತ್ತಿಗೆಯರು ಒಂದು ಭಾಗದಲ್ಲಿ ನಿಂತರೆ, ಇನ್ನೊಂದು ಕಡೆ ಅತ್ತಿಗೆ ಹಾಗೂ ನಾದಿನಿಯರು ನಿಂತು ಕದನಕ್ಕೆ ಸಿದ್ಧ ರಾಗುತ್ತಾರೆ. ಊರಿನ ಹಿರಿಯರೊಬ್ಬರು ನೀಡಿದ ಸೂಚನೆಯ ಮೇರೆಗೆ ಕದನ ಆರಂಭವಾಗುತ್ತದೆ. ಸಾವಿರಾರು ತಲೆಗಳು ಡಿಕ್ಕಿ ಹೊಡೆಯುವ ಮೋಜು ಅಲ್ಲಿ ನಡೆಯುತ್ತದೆ. ನಂತರ ಪೂಜಾರಿ ತೀರ್ಥ ಕೊಡುವುದರ ಮೂಲಕ ಕದನಕ್ಕೆ ತೆರೆ ಎಳೆಯುತ್ತಾನೆ.

ದೇವರ ಮೂಲಸ್ಥಾನ ‘ನಿನಿವಾಳ’. ಸುಮಾರು 300 ವರ್ಷಗಳ ಹಿಂದೆ ಒಬ್ಬ ತಾತ, ಮಗ ಇಲ್ಲಿಗೆ ದೇವರನ್ನು ಪೆಟ್ಟಿಗೆಯಲ್ಲಿ ತಂದರು. ಪಕ್ಕದಲ್ಲಿದ್ದ ಅದಿರಾಳು ಗ್ರಾಮದ ಹೊರಗೆ ಗುಡಿಸಲು ಕಟ್ಟಿ ದೇವರನ್ನು ಸ್ಥಾಪನೆ ಮಾಡಿದರು. ಚಿಕ್ಕೀರಣ್ಣನ ಮಾಳಿಗೆಯ ಊರಿನಲ್ಲಿ ಭೀಕರ ಕಾಯಿಲೆ ಇರುವುದರಿಂದ ಅದನ್ನು ನಿವಾರಿಸಲು ಆದಿರಾಳದಿಂದ ಚಿಕ್ಕೀರಣ್ಣನ ಮಾಳಿಗೆಗೆ ದೇವರನ್ನು ತಂದರು. ದೇವರ ಮೂಲಸ್ಥಾನದಲ್ಲಿ ಅತ್ತೆ-ಸೊಸೆ, ನಾದಿನಿ-ಅತ್ತಿಗೆಯರು ಬಟ್ಟೆಯಲ್ಲಿ ‘ಡೀ’ ಆಡುತ್ತಿದ್ದರಿಂದ ಅಲ್ಲಿ ಯಾವುದೇ ರೋಗ-ರುಜಿನಗಳು ಕಾಡುತ್ತಿರಲಿಲ್ಲ. ಆ ಕಾರಣದಿಂದಲೇ ಇಲ್ಲಿಯು ಹಬ್ಬ ನಡೆಯುತ್ತದೆ ಎನ್ನುತ್ತಾರೆ.

ಗ್ರಾಮದ ಮೂಲಪುರುಷ ಚಿಕ್ಕೇರನಾಯ್ಕನಿಂದಾಗಿ ಊರಿಗೆ ಚಿಕ್ಕೀರಣ್ಣನ ಮಾಳಿಗೆ ಎಂದು ಹೆಸರು ಬಂದಿದೆ. ಆ ಮನೆಯಲ್ಲಿರುವ ಅತ್ತೆ-ಸೊಸೆ ನಾದಿನಿ ಹಾಗೂ ಅತ್ತಿಗೆಯರು ಜಗಳವಾಡುತ್ತಿದ್ದರಿಂದ ಆ ಮನೆಯ ಹಾಲು, ಮೊಸರು ಕೆಟ್ಟು ಹೋಗುತ್ತಿತ್ತಂತೆ. ಈ ಜಗಳವನ್ನು ನಿಲ್ಲಿಸಲು ದೇವರು ಮಧ್ಯಪ್ರವೇಶ ಮಾಡಿ, ಜಗಳ ನಿಲ್ಲಿಸಿದ ಕುರುಹಾಗಿ ಈ ಜಾತ್ರೆ ನಡೆಯುತ್ತದೆಂದು ಅವರು ಹೇಳುತ್ತಾರೆ.