ಉತ್ತರ ಕರ್ನಾಟಕದ ಭಕ್ತರು ಹರಕೆಯ ರೂಪದಲ್ಲಿ ತೊಟ್ಟಿಲನ್ನು ಸಂಬಂಧಿಸಿದ ದೈವಕ್ಕೆ ಅರ್ಪಿಸುವ ಆಚರಣೆ. ಸಂತಾನಹೀನ ವ್ಯಕ್ತಿಗಳು ಮಕ್ಕಳು ಬೇಕೆಂದು ದೈವದಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಹರಕೆ ಕಟ್ಟಿಕೊಂಡವರಿಗೆ ದೇವಿಯ ವರಪ್ರಸಾದದಿಂದ ಮಕ್ಕಳು ಜನಿಸಿದಾಗ ಸಂಬಂಧಿಸಿದ ದೇವಾಲಯಕ್ಕೆ ತೊಟ್ಟಿಲೊಂದನ್ನು ವಿಧಿವಿಧಾನಗಳೊಂದಿಗೆ ಅರ್ಪಿಸುತ್ತಾರೆ. ಚೆಂಡಿನಿಂದ ತಯಾರಿಸಿದ ತೊಟ್ಟಿಲಲ್ಲಿ ಹರಕೆಯಿಂದ ಜನಿಸಿದ ಮಗುವನ್ನು ಮಲಗಿಸಿ, ಬಾವಿಯಲ್ಲಿ ಬಿಡುತ್ತಾರೆ. ನಂತರ ಮಗುವನ್ನು ಮೂರು ಬಾರಿ ಮುಳುಗಿಸಿ ಎತ್ತಿಕೊಳ್ಳುತ್ತಾರೆ. ಮತ್ತೆ ದೇವಾಲಯದಲ್ಲಿ ಪೂಜಿಸಿ, ತಾವು ಹರಕೆಗಾಗಿ ತಂದ ತೊಟ್ಟಿಲನ್ನು ಅರ್ಪಿ ಸುತ್ತಾರೆ. ತೊಟ್ಟಿಲನ್ನು ಬೆಳ್ಳಿ, ಬಂಗಾರದಿಂದ ಮಾಡಿರುತ್ತಾರೆ.

ಹುಟ್ಟಿದ ಮಕ್ಕಳು ಬದುಕಿ ಉಳಿಯದಿದ್ದಾಗಲೂ ತೊಟ್ಟಿಲು ಹರಕೆ ಹೊರುತ್ತಾರೆ. ಅಲ್ಲದೆ ತಾವು ಇಷ್ಟಪಟ್ಟವರೊಂದಿಗೆ ಮದುವೆ ಆಗಬೇಕೆಂದು ದೇವಾಲಯದ ಪಕ್ಕದಲ್ಲಿರುವ ಗಿಡಕ್ಕೆ ಬಟ್ಟೆಯಿಂದ ತೊಟ್ಟಿಲು ಮಾಡಿ ಕಟ್ಟುವ ಪದ್ಧತಿಯೂ ಇದೆ. ತಮ್ಮ ಕೋರಿಕೆ ನೆರವೇರಿದ ಬಳಿಕ ಸಂಬಂಧಿಸಿದ ದೇವಾಲಯಕ್ಕೆ ಬೆಳ್ಳಿಯದೋ, ಬಂಗಾರದೋ ತೊಟ್ಟಿಲನ್ನು ವಿಧಿವತ್ತಾಗಿ ಅರ್ಪಿಸಿ, ಹರಕೆ ಸಲ್ಲಿಸಿ ಬರುತ್ತಾರೆ.