ಮಲೆನಾಡಿನ ಒಕ್ಕಲಿಗರು ದೀಪಾವಳಿಯಲ್ಲಿ ತುಳಸಿಗೆ ದೀಪ ಬೆಳಗಿ ಪೂಜಿಸುವ ಪದ್ಧತಿ. ದೀಪಾವಳಿ ಬೆಳಕಿನಹಬ್ಬ. ಅದು ಕೃಷಿಕರ ಬಹುಮಹತ್ವದ ಹಬ್ಬವೂ ಆಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ತೋಟ, ಗದ್ದೆ, ಹೊಲ, ಬ್ಯಾಣ, ಗೊಬ್ಬರ ಗುಂಡಿ, ಕಣ, ಬಾವಿ, ಕೊಟ್ಟಿಗೆ, ಭೂತದಬನ, ಗ್ರಾಮದೇವರ ಗುಡಿ ಇತ್ಯಾದಿಗಳಲ್ಲಿ “ದೀಪ ಬೆಳಗಿ, ದೀಪ್ ದೀಪ್ ದೀಪೋಳ್ಗೆ  ದೇವರ ದೀಪೋಳ್ಗೆ” ಎಂದು ಒಕ್ಕೊರಲಿನಿಂದ ಹಾಡುತ್ತಾರೆ. ದೀಪ ಬೆಳಗುವ ಮೊದಲು ಊರಿನ ಕುಳುವಾಡಿಯು ದೀಪ ಹಚ್ಚುವ ಸ್ಥಳಗಳಲ್ಲಿ ಪಾಟೆ, ಕಕ್ಕೆ, ಲಿಂಗದ ಹೂ, ಪಟ್ಟಿ, ಹಿಂಗಾರ ಇತ್ಯಾದಿ ಹೂವುಗಳನ್ನು ಚೆಲ್ಲಿ ಸ್ಥಳ ಗೊತ್ತು ಮಾಡಿರುತ್ತಾನೆ.

ತಮ್ಮ ಹೊಲ, ಗದ್ದೆ, ಗ್ರಾಮ ದೇವತೆ ಇತ್ಯಾದಿಗಳಲ್ಲಿ ದೀಪ ಬೆಳಗಿ ಬಂದು, ತಾವು ನಡೆದುಕೊಳ್ಳುವ ದೇವರಿಗೆ ಮುಡಿಪುಕಟ್ಟಿ ಅಂಗಳದ ತುಳಸಿ ದೇವರಿಗೆ ಪೂಜಿಸಿ, ಕೆರಕಲು ಹೂಡಿದಲ್ಲೆಲ್ಲ ದೀಪ ಬೆಳಗುವುದನ್ನು ದೀಪೋತ್ಸವ ಎಂದು ಕರೆಯುತ್ತಾರೆ. ದೀಪ ಬೆಳಗುವ ಮುನ್ನ ಎಡೆಗಳನ್ನು ನೈವೇದ್ಯ ಮಾಡುತ್ತಾರೆ. ಮೇಳಿದೇವರು, ತುಳಸಿ ಕೆರಕಲು, ಕಣ, ಬಾವಿ ಕೊಟ್ಟಿಗೆ, ಗೊಬ್ಬರ ಗುಂಡಿ, ಪಣತ ಹಾಗೂ ಕಡಗೋಲು ಇನ್ನು ಮುಂತಾದ ಕಡೆಗಳಲ್ಲಿ ಇಟ್ಟು ಕೆರಕಲುಗಳಿಗೆ ಎಡೆ ತೋರಿಸಿ ಪೂಜಿಸುತ್ತಾರೆ.

ಬಲಿಪಾಡ್ಯಮಿಯ ಕೊನೆಯಲ್ಲಿ ‘ಜಕ್ಕಣಿ’ಗಳಿಗೆ ಎಡೆ ಸಲ್ಲಿಸುತ್ತಾರೆ. ಪಿತೃಗಳನ್ನು ‘ಒಕ್ಕಣಿ’ಗಳೆಂದು ಕರೆಯುತ್ತಾರೆ. ಜೈನ ಎಡೆಯ ಜೊತೆಗೆ ಐದು ಬಗೆಯ ಪಲ್ಯಗಳನ್ನು ಬಡಿಸಿ, ಮಣೆಗಳ ಮೇಲೆ ಸಣ್ಣ ಸಣ್ಣ ಕಲಶಗಳನ್ನು ಇಟ್ಟು, ದೀಪ ಉರಿಸಿ, ಧೂಪ ಹಾಕಿಕೊಳ್ಳುತ್ತಾರೆ. ಎರಡು ಎಡೆಗಳನ್ನು ಎತ್ತಿ ‘ಗುಳ್ಳಿಗೆ’ಗಾಗಿ ಮನೆಯ ಮೇಲೆ ಇಡುತ್ತಾರೆ. ಅಂದು ಮನೆಯ ಬಾಗಿಲುಗಳ ಎರಡು ಬದಿಗಳಲ್ಲಿ ಹಣತೆ ಇಟ್ಟು ಬೆಳಗುತ್ತಾರೆ. ನಂತರ ಎಲ್ಲರೂ ಒಂದೇ ಪಂಕ್ತಿಯಲ್ಲಿ ಕುಳಿತು ಊಟ ಮಾಡುತ್ತಾರೆ.