ತುಪ್ಪವನ್ನೇ ಕೇಂದ್ರವಾಗಿಟ್ಟುಕೊಂಡು ನಡೆಯುವ ಜಾತ್ರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿಯಲ್ಲಿ ಪ್ರತಿವರ್ಷ ಕಾರಹುಣ್ಣಿಮೆಯ ನಂತರ ಬರುವ ಮಂಗಳವಾರ ನಡೆಯುತ್ತದೆ. ಜಾತ್ರೆಗೆ ನಾವದಗಿಯ ಜನರಲ್ಲದೇ ಸುತ್ತ ಹತ್ತೂರಿನ ಜನ ಸೇರುತ್ತಾರೆ. ಅಂದು ನಾವದಗಿಯ ಸುತ್ತಲಿನ ಹಳ್ಳಿಗಳ ಜನ ತುಪ್ಪ ತಂದು ನೀಡು ತ್ತಾರೆ. ಆ ದಿನ ನಾವದಗಿಯ ಊರಿನಲ್ಲಿ ಯಾರ ಮನೆಯಲ್ಲಿಯೂ ಒಲೆ ಹಚ್ಚು ವುದಿಲ್ಲ. ಎಲ್ಲರೂ ಜಾತ್ರೆ ನಡೆಯುವ ರೇವಪ್ಪಯ್ಯ ಸಮಾಧಿ ಸ್ಥಳದಲ್ಲಿ ನಿರ್ಮಿಸಲಾಗಿರುವ ದೇವಾಲಯದಲ್ಲಿ ತಂಗುತ್ತಾರೆ. ಹೆಂಗಸರು ಜಾತ್ರೆಗಾಗಿ ಹೋಳಿಗೆ ತಯಾರಿಸುತ್ತಾರೆ. ಸುತ್ತಲಿನ ಹತ್ತೂರಿನ ಜನ ಕೊಟ್ಟ ತುಪ್ಪ ಹತ್ತಾರು ಡಬ್ಬಗಳಲ್ಲಿ ಸಂಗ್ರಹವಾಗುತ್ತದೆ. ಜಾತ್ರೆಗೆ ಬರುವ ಭಕ್ತರೆಲ್ಲರಿಗೂ ಹೋಳಿಗೆ ಜೊತೆಗೆ ತುಪ್ಪವನ್ನು ಬಡಿಸುತ್ತಾರೆ. ತಟ್ಟೆಯಲ್ಲಿ ಸುರಿದ ತುಪ್ಪ ಹೋಳಿಗೆಯನ್ನು ತೇಲಾಡಿಸುತ್ತದೆ. ಜನ ನೀರಿಗಿಂತ ನೀರಾಗಿ ಸುರಿದ ತುಪ್ಪದಲ್ಲಿ ತೊಯ್ದು ಹೋಳಿಗೆಯನ್ನು ಸಂಭ್ರಮದಿಂದ ತಿನ್ನುತ್ತಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಹೋಳಿಗೆ ತುಪ್ಪ-ಘ್ಜಿ‘್ನವುದೆಂದರೆ ಸಂತಸ, ಸಂಭ್ರಮದ ಘಳಿಗೆ, ಅಲ್ಲದೇ ಹೋಳಿಗೆ ತುಪ್ಪ ಸಮೃದ್ದಿಯ ಸಂಕೇತವೂ ಹೌದು. ಈ ಕಾರಣಕ್ಕಾಗಿಯೇ ಮದುವೆಯ ನಿಶ್ಚಿತಾರ್ಥವನ್ನು ‘ಹೋಳಿಗೆ ಊಟ’ ಎಂದು ಕರೆಯುತ್ತಾರೆ.

ರೇವಪ್ಪಯ್ಯ ಸಂತ ಆರಂಭಿಸಿದ ಸಮೃದ್ದಿಯ ಸಂಕೇತವಾಗಿರುವ ಹೋಳಿಗೆ ತುಪ್ಪದ ಜಾತ್ರೆಯಲ್ಲಿ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ ಎಂದು ನಂಬುತ್ತಾರೆ. ರೇವಪ್ಪನಿಗೆ ಕೃತಜ್ಞತೆ ಸಲ್ಲಿಸಲು ಹೋಳಿಗೆ-ತುಪ್ಪ ನೈವೇದ್ಯವನ್ನು ಜಾತ್ರೆಯ ದಿನ ಸಲ್ಲಿಸುತ್ತಾರೆ.