ಮಂಡ್ಯ ಜಿಲ್ಲೆಯ ಕೊಪ್ಪದ ಪುಟ್ಟ ಗ್ರಾಮದ ದೈವ ತೋಪಿನ ತಿಮ್ಮಪ್ಪ. ಪ್ರತಿ ವರ್ಷ ಜುಲೈ ತಿಂಗಳಲ್ಲಿ ನಡೆಯುವ ಜಾತ್ರೆಯಲ್ಲಿ ನೆರೆದ ಭಕ್ತರಿಗೆಲ್ಲ ಅಂದು ದಾಸೋಹವಿರುತ್ತದೆ. ಅಂದಿನ ಊಟವನ್ನು ಭಕ್ತರು ತಾವರೆ ಎಲೆಯಲ್ಲಿ ಮಾಡುವುದು ವಿಶೇಷ. ಜಾತ್ರೆಯಲ್ಲಿ ಸರಿಸುಮಾರು ನಲವತ್ತು ಸಾವಿರಕ್ಕೂ ಹೆಚ್ಚಿನ ಜನ ಸೇರುತ್ತಾರೆ.

ರಾತ್ರಿಯಿಡೀ ಪೂಜೆ ಪುನಸ್ಕಾರಗಳು ಜರುಗುತ್ತವೆ. ಅಲ್ಲದೆ ಬಂಡಿ ಉತ್ಸವದಲ್ಲಿ ದೇವರ ಮೆರವಣಿಗೆ ಹೊರಡುತ್ತದೆ. ಮೆರವಣಿಗೆಗಾಗಿ ಮೂರು ಬಂಡಿಗಳನ್ನು ಅಲಂಕೃತಗೊಳಿಸಿರುತ್ತಾರೆ. ಅನಂತರ ಬಂಕದಕಟ್ಟೆ ಅಮ್ಮ, ಲಕ್ಷ್ಮಿದೇವಿ ಹಾಗೂ ಮುದ್ದೇನಹಳ್ಳಿ ಅಮ್ಮನಿಗೆ ಪೂಜೆ ನಡೆಯುತ್ತದೆ. ತೋಪಿನ ತಿಮ್ಮಪ್ಪನ ಮೂರ್ತಿ ಯನ್ನು ಬಿರುಡೆ ಕಂಬದಲ್ಲಿ ಕಟ್ಟುತ್ತಾರೆ. ಮೆರವಣಿಗೆಯಲ್ಲಿ ಪೂಜಾಕುಣಿತ ಮತ್ತು ಪಟದ ಕುಣಿತದ ತಂಡಗಳಿರುತ್ತವೆ. ಮೆರವಣಿಗೆ ನಡುರಾತ್ರಿ ತೋಪಿನ ತಿಮ್ಮಪ್ಪನ ದೇವಸ್ಥಾನ ಸೇರುತ್ತದೆ. ಸುಮಾರು ಐದು ನೂರಕ್ಕೂ ಹೆಚ್ಚು ಹೆಂಗಸರು ಮಕ್ಕಳು ಬಾಯ್ಬೀಗ ಹಾಕಿಕೊಂಡು ಮೆರವಣಿಗೆಯಲ್ಲಿ ಸಾಗುತ್ತಾರೆ. ತಿಮ್ಮಪ್ಪನ ಸನ್ನಿಧಿಯಲ್ಲಿ ಪೂಜಾರರು ಬಾಯ್ಬೀಗ ಬಿಡಿಸುತ್ತಾರೆ. ಮೆರವಣಿಗೆಯು,  ಬೆಳಿಗ್ಗೆ ಸುಮಾರು ಆರು ಗಂಟೆಗೆ ಮುಗಿಯುತ್ತದೆ.

ಮೆರವಣಿಗೆಯಲ್ಲಿ ಭಾಗವಹಿಸಿದ ವಾದ್ಯಗಾರರ ಸಂಗೀತ ಪರಿಕರಗಳಿಗೆ ಪೂಜೆ ಸಲ್ಲಿಸಿ, ತಿಮ್ಮಪ್ಪನಿಗೆ ತಾವರೆ ಎಲೆಯಲ್ಲಿ ಅಂದಿನ ಅಡುಗೆಯನ್ನು ನೈವೇದ್ಯ ಅರ್ಪಿಸಿ, ಎಲ್ಲರೂ ಊಟ ಮಾಡುತ್ತಾರೆ. ಅಂದು ಸಾವಿರಾರು ಜನ ಸಹಪಂಕ್ತಿ ಸವಿಯೂಟ ಮಾಡುತ್ತಾರೆ. ಊಟದ ಖರ್ಚು ವೆಚ್ಚಗಳನ್ನು ಆಖಲವಾಡಿಯ ಜನ ಪಟ್ಟಿ ಮಾಡುವ ಮೂಲಕ ಸಂಗ್ರಹಿಸುತ್ತಾರೆ. ಪ್ರತಿ ಕುಟುಂಬವೂ ಹತ್ತು ಸೇರು ಅಕ್ಕಿ, ಒಂದು ಸೇರು ಬೇಳೆ, ಒಂದು ಹೊರೆ ಸೌದೆ, ಒಂದು ಕಟ್ಟು ತಾವರೆ ಎಲೆ (200 ರಿಂದ 3000) 100/- ರೂ. ವಂತಿಕೆ ನೀಡುವುದರ ಜೊತೆಗೆ  ಮನೆಗೊಬ್ಬರಂತೆ ಕೆಲಸ ಕಾರ್ಯಗಳಿಗೆ ಹಾಜರಾಗುತ್ತಾರೆ. ತಂಡಗಳನ್ನಾಗಿ ಮಾಡಿಕೊಂಡು ಅಡುಗೆ, ನೀರು ಸರಬರಾಜು, ದೇವರ ಪೂಜೆ, ಬಡಿಸುವ ಕೆಲಸ ಇತ್ಯಾದಿಗಳನ್ನು ಹಂಚಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ತಾವರೆ ಎಲೆ ಊಟದ ಹಿಂದಿನ ದಿನ ತಮಟೆಯಿಂದ ಸಾರಿ ಅಕ್ಕಿ, ಬೇಳೆ ತರುವುದರಿಂದ ಹಬ್ಬಕ್ಕೆ ಚಾಲನೆ ದೊರಕುತ್ತದೆ. ಹೀಗೆ ಸಂಗ್ರಹವಾದ ಪದಾರ್ಥಗಳನ್ನು ದೇವರ ನೈವೇದ್ಯಕ್ಕಾಗಿ ಮಾತ್ರ ಬಳಸುತ್ತಾರೆ. ಪಟ್ಟಿಗೆ ಆಖಲವಾಡಿಯಿಂದ ಪರಸ್ಥಳಗಳಿಗೆ ಹೋದವರು ಮದುವೆಯಾಗಿ ಬೇರೆ ಊರಲ್ಲಿರುವ ಹೆಣ್ಣುಮಕ್ಕಳು ಅಲ್ಲದೆ ಊರಿಗೆ ಸಂಬಂಧಪಟ್ಟವರೆಲ್ಲರೂ ಅಕ್ಕಿ, ಬೇಳೆ ಇತ್ಯಾದಿಗಳನ್ನು  ನೀಡುತ್ತಾರೆ. ಹರಕೆ ಹೊತ್ತವರು ನೀಡುವ ತುಪ್ಪವು ಸುಮಾರು 100 ಕೆ.ಜಿ. ಸಂಗ್ರಹವಾಗುತ್ತದೆ. ಈ ತುಪ್ಪದಿಂದಲ್ಲೇ ಅಂದಿನ ಭೋಜನ ಸಿದ್ಧವಾಗುತ್ತದೆ. ಜಾತ್ರೆಯ ಸಹಭೋಜನ ಸಾಮರಸ್ಯವನ್ನುಂಟು ಮಾಡುವ ವೇದಿಕೆಯಾಗಿದೆ.