ತಿರುಪತಿ ಯಾತ್ರಿಕರ ಮನೆಗಳಲ್ಲಿ ನಡೆಯುವ ಆಚರಣೆ. ಈ ಆಚರಣೆ ರಾತ್ರಿಯ ಊಟದ ನಂತರ ನಡೆಯುತ್ತದೆ. ದಾಸಯ್ಯನ ಮನೆಯು ಸೇರಿದಂತೆ ಯಾತ್ರೆ ಕೈಗೊಳ್ಳುವವರ ನಡುಮನೆಯನ್ನು ಸಾರಿಸಿ, ರಂಗೋಲಿ ಇಟ್ಟು ಕಂಬಳಿ ಹಾಸಿ, ನೀರು ತುಂಬಿದ ತಂಬಿಗೆ ಪ್ರತಿಷ್ಠಾಪಿಸುತ್ತಾರೆ. ಕಂಬಳಿಯ ಮೇಲೆ ಇಪ್ಪತ್ತೊಂದು ಎಲೆ ಹಾಗೂ ಅಡಿಕೆಯನ್ನು ಇಡುತ್ತಾರೆ. ಎಡೆಗಾಗಿ ಸಿದ್ಧಪಡಿಸಿದ ಕಜ್ಜಾಯಗಳನ್ನು ತಟ್ಟೆಯಲ್ಲಿ ತುಂಬಿಸಿ ಕಳಸದ ಪಕ್ಕ ಕಂಬಳಿಯ ಮೇಲೆ ಇಡುತ್ತಾರೆ. ಪಕ್ಕದಲ್ಲೊಂದು ದೊಡ್ಡ ದೀಪದ ಕಂಬನ್ನು ಇಟ್ಟು, ದೀಪ ಉರಿಸುತ್ತಾರೆ. ಕಳಸದ ಎದುರು ಬಾಳೆಹಣ್ಣಿನ ಚಿಪ್ಪು, ತೆಂಗಿನಕಾಯಿ, ಯಾತ್ರೆಗೆ ಬೇಕಾದ ಸಾಮಾನುಗಳ ಗಂಟು, ದೇವರಗಂಟು ಹಾಗೂ ಮುಡುಪಿನ ಚೀಲಗಳನ್ನು ಇಡುತ್ತಾರೆ.

ಪೂಜೆಯ ನಂತರ ಎಲ್ಲಾ ದಾಸಪ್ಪ, ಜೋಗಪ್ಪಗಳು ಹಾಗೂ ಊರಿನ ಪ್ರಮುಖರು ವಾದ್ಯಮೇಳಗಳೊಂದಿಗೆ ಮುಖ್ಯ ದಾಸಪ್ಪನ ಮನೆಗೆ ಬರುತ್ತಾರೆ. ಬಾಂಕಿ, ಸಿಂಗನಾದ ಊದುತ್ತಾ ಜಾಗಟೆ, ಗಂಟೆ ಬಾರಿಸಿ ಗೋವಿಂದನ ಸ್ಮರಣೆ ಮಾಡುತ್ತಾ ಮಹಾಪೂಜೆ ಮಾಡುತ್ತಾರೆ. ಇದನ್ನು ‘ತೋಪು ಕಟ್ಟುವುದು’ ಎಂದು ಕರೆಯುತ್ತಾರೆ. ಪೂಜೆಯ ವೇಳೆ “ವಾರುದ್ದಾಸಯ್ಯ ಏಳಗೇನ ಮಾಡಿಯೋ, ಪೊತ್ತಾಯ್ತದಲ್ಲಿ ಗಿರಿಮ್ಯಾಕೇತಿಮ್ಮಯ್ಯ ತೋಪು ಕಟ್ಟಿ ಅವನು ತಡ ಮಾಡದೆ, ನಡುದಾರಿ, ಸರ್ರಾನೆಗಿರಿಯ ಅತ್ತಬಹುವುದು, ಅಟ್ಟಿ  ಕಸವಗುಡಿಸಿ ತೊಟ್ಟಿ ದೀವುಗೆ ಎತ್ತೆ, ಪಟ್ಟೆ ಜೋತುರವ ಮಾಡೇ ನಮ್ಮನೆಯ, ಪುತ್ರ ನೊಯ್‌ತಾನೆ ತಿರುಪತಿಗೆ” ಎಂಬುದಾಗಿ ಹಾಡುತ್ತಾರೆ. ತಿರುಪತಿಗೆ ಯಾತ್ರೆ ಹೊರಟ ಎಲ್ಲಾ ಯಾತ್ರಿಕರ ಮನೆಯಲ್ಲಿ ತೋಪು ಕಟ್ಟುವ ಶಾಸ್ತ್ರ ನಡೆಯುತ್ತದೆ. ತೋಪುಶಾಸ್ತ್ರ ಮುಗಿದ ಮೇಲೆ ಕಳಸದ ಮುಂದೆ ಇರುವ ಯಾತ್ರೆಗೆ ಬೇಕಾದ ವಸ್ತುಗಳ ಗಂಟುಗಳನ್ನು ಹೊತ್ತು ಹೊಸಲು ದಾಟುತ್ತಾರೆ. ಒಮ್ಮೆ ಹೊಸಲು ದಾಟಿದ ಮೇಲೆ ತಿರುಪತಿಗೆ ಹೋಗಿ ಬರುವಾಗ ಹೊಸಲು ದಾಟಿದ ಮನೆ ಸೇರುತ್ತಾರೆ. ಯಾತ್ರೆಗೆ ಹೋಗದೆ ಹೊಸಲು ದಾಟುವಂತಿಲ್ಲ. ತೋಪು ಕಟ್ಟಿದ ನಂತರ ಯಾತ್ರಿಕರನ್ನು ಊರಿನ ಬೇರೆ ಮನೆಯವರು ಕರೆದು ಸತ್ಕರಿಸುತ್ತಾರೆ. ಎಲ್ಲಾ ಆತಿಥ್ಯಗಳನ್ನು ಸ್ವೀಕರಿಸಿದ ಮೇಲೆ ಯಾತ್ರಿಗಳು ಊರಿನ ಹನುಮಂತ ಗುಡಿಗೆ ತೆರಳಿ ದೇವರಿಗೆ ಪೂಜಿಸಿ ಪೂಜಾರಿಯಿಂದ ಹೂಮಾಲೆಗಳನ್ನು ಹಾಕಿಸಿಕೊಂಡು ತಿರುಪತಿ ಯಾತ್ರೆಗೆ ಹೊರಡುತ್ತಾರೆ.