ಮಲೆನಾಡು ಹಾಗೂ ಚಿಕ್ಕಮಗಳೂರು ಇತ್ಯಾದಿ ಭಾಗಗಳಲ್ಲಿ ದೆವ್ವಕ್ಕೆ ವರ್ಷಕ್ಕೆ ಒಂದು ಬಾರಿ ಅನ್ನ ಹಾಕುವ ಆಚರಣೆ. ಈ ಆಚರಣೆ ಜೂನ್ ತಿಂಗಳ ಯಾವುದಾದರೂ ತಮಗೆ ಅನುಕೂಲ ದಿನಗಳಲ್ಲಿ ಮಾಡುತ್ತಾರೆ. ತೋಟದ ನಿಗದಿತ ಜಾಗದಲ್ಲಿ ಅನ್ನ ಹಾಕುವ ಆಚರಣೆ ನಡೆಯುತ್ತದೆ. ಹಗಲಿನಲ್ಲಿ ನಡೆಯುವ ಈ ಆಚರಣೆಯಲ್ಲಿ ಹೆಂಗಸರು ಭಾಗವಹಿಸುವಂತಿಲ್ಲ. ವರ್ಷಕ್ಕೆ ಒಂದು ಬಾರಿ ಅನ್ನ ನೀಡದಿದ್ದರೆ ದಯ್ಯಗಳು, ಜನ ಜಾನುವಾರು ಹಾಗೂ ಆಸ್ತಿಪಾಸ್ತಿಗಳಿಗೆ ತೊಂದರೆ ಕೊಡುತ್ತವೆಂದು ನಂಬಿಕೆ ಇದೆ.

ಅನ್ನ ಹಾಕುವ ದಿನ ಗಂಡಸರು ಮತ್ತು ಮಕ್ಕಳು ಮನೆಯಿಂದ ಅಂದಿನ ಅಡುಗೆಗೆ ಬೇಕಾದ ವಸ್ತುಗಳನ್ನು ಪಾತ್ರೆ ಪಗಡಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಒಲೆಗಳನ್ನು ಹೂಡಿ, ಅಡುಗೆಗೆ ಸಿದ್ಧತೆ ನಡೆಸುತ್ತಾರೆ. ತೋಟದ ಮಧ್ಯೆ ಮರದ ಕೆಳಗೆ ಕಲ್ಲು ಗುಂಡನ್ನು ಇಟ್ಟು, ತೊಳೆದು, ತಿಲಕವಿಟ್ಟು ಹೂ, ಹಾರಗಳಿಂದ ಸಿಂಗರಿಸಿ, ಪೂಜಿಸಿ, ಹಂದಿ, ಕೋಳಿಯನ್ನು ಅಥವಾ ಕುರಿಯನ್ನೋ ಬಲಿ ಕೊಡುತ್ತಾರೆ. ಬಲಿ ಪ್ರಾಣಿಯ ಮಾಂಸದಿಂದ ಪದಾರ್ಥ ಹಾಗೂ ಸಾರು ತಯಾರಿಸಿ ಅನ್ನದೊಂದಿಗೆ ಎಡೆಮಾಡಿ, ಪೂಜಿಸುತ್ತಾರೆ. ನಂತರ ಎಲ್ಲರೂ ಕುಳಿತು ಊಟ ಮಾಡುತ್ತಾರೆ. ಉಳಿದ ಅಡುಗೆ ಪದಾರ್ಥಗಳನ್ನು ಮನೆಗೆ ತರುವಂತಿಲ್ಲ. ಈ ಆಚರಣೆಯಲ್ಲಿ ಆದಿಮಾನವನ ಪ್ರಕೃತಿ ಆರಾಧನೆಯ ಕುರುಹುಗಳು ಕನ್ನಡಿಸಿವೆ.