ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಲ್ಲಾಪುರದ ಬಸವನ ಗುಡಿಗೆ ದನಗಳನ್ನು ಸುತ್ತಿಸುವ ವಿಶಿಷ್ಟ ಬಗೆಯ ಆಚರಣೆ ನಡೆಯುತ್ತದೆ. ಗುಡಿ ಶತಮಾನಗಳಷ್ಟು ಹಳೆಯದಾಗಿದ್ದು, ಅಲ್ಲಿಯ ಬಸವಣ್ಣನ ಮೂರ್ತಿ ಉದ್ಭವಮೂರ್ತಿ ಎಂದು ಹೇಳುತ್ತಾರೆ. ಪ್ರತಿವರ್ಷ ಶ್ರಾವಣ ಮಾಸದಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಯ ವಿಶೇಷವೆಂದರೆ ಜನರೊಂದಿಗೆ ದನಗಳ ಜಾತ್ರೆಯು ನಡೆಯುವುದು. ಅಂದು ಭಕ್ತರು ತಮ್ಮ ದನಕರುಗಳನ್ನು ಗುಡಿಗೆ ಸುತ್ತಿಸಿ ಪರಿಹಾರ ಕಂಡುಕೊಳ್ಳುತ್ತಾರೆ. ಅವುಗಳಿಗೆ ಅಂಗಾರ ಹಚ್ಚಿ ತೀರ್ಥ ಕುಡಿಸುತ್ತಾರೆ. ಇದರಿಂದ ತಮ್ಮ ದನಕರುಗಳು ಚೆನ್ನಾಗಿರುತ್ತವೆ ಎಂದು ನಂಬಿಕೆ ಇದೆ.

ಪ್ರತಿ ಸೋಮವಾರ ಕೃಷಿ ಕೆಲಸಗಳಿಗೆ ರಜೆ ಮಾಡುತ್ತಾರೆ. ಅಂದು ಎತ್ತುಗಳನ್ನು ಸ್ನಾನ ಮಾಡಿಸಿ, ಗುಡಿಗೆ ಕರೆತರುತ್ತಾರೆ. ಗುಡಿಗೆ ಪ್ರದಕ್ಷಿಣೆ ಹಾಕಿಸಿ ತೀರ್ಥ ಹಾಕಿಸುತ್ತಾರೆ. ಅನಾರೋಗ್ಯ ಪೀಡಿತ ದನಕರುಗಳಿಗೆ ಔಷಧಿ ಹಾಕಿಸುತ್ತಾರೆ. ಅಲ್ಲದೆ ಹಾವು ಕಡಿತಕ್ಕೂ ಚಿಕಿತ್ಸೆ ನೀಡುತ್ತಾರೆ. ಎತ್ತುಗಳಿಗೆ ಹಲ್ಲೆ ಕಟ್ಟುವವರು, ಕೋಡು ಕೆತ್ತುವವರನ್ನು ಇಲ್ಲಿ ಕಾಣಬಹುದು. ಪ್ರತಿ ಅಮಾವಾಸ್ಯೆಯ ದಿನದಂದು ಬಸವಣ್ಣನಿಗೆ ವಿಶೇಷ ಪೂಜೆ ಇರುತ್ತದೆ. ಅಲ್ಲಿ ಸೇರುವ ದನಕರುಗಳು ಅನಾರೋಗ್ಯದಿಂದ ಬಳಲಿರುವವೇ ಹೆಚ್ಚು. ಎಲ್ಲ ತರದ ರೋಗಗಳಿಗೂ ಅಲ್ಲಿ ಚಿಕಿತ್ಸೆ ನೀಡುತ್ತಾರೆ. ಅಲ್ಲಿ ಸೇರುವ ರೈತ ಭಕ್ತರಿಗೆ ಊಟದ ವ್ಯವಸ್ಥೆ ಇರುತ್ತದೆ. ದನಕರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಿರುತ್ತಾರೆ. ಅವೆಲ್ಲ ಸಹಜ ಕೃಷಿಯ ಪ್ರೋಕುರುಹುಗಳು. ವೈಜ್ಞಾನಿಕ ಕೃಷಿ ಹೆಸರಿನಲ್ಲಿ ಸರಕಾರ ರೈತರನ್ನು ದಾರಿ ತಪ್ಪಿಸಿದ ಈ ಹೊತ್ತಿನಲ್ಲಿ ಗಾಣ, ಮೇಟಿ, ಕಣ ಇತ್ಯಾದಿಗಳನ್ನು ನೆನಪಿಗೆ ತರುವ ಆಚರಣೆಗಳು ಜೀವಮುಖಿಯಾಗಿ ಕಾಣುತ್ತದೆ.