ತಿರುಪತಿಗೆ ಭಕ್ತರು ಗುಂಪುಗೂಡಿ ಹೋಗುವುದು. ಹಿಂದೆ ವಾಹನ ಸೌಕರ್ಯಗಳಿಲ್ಲದ ಕಾಲದಲ್ಲಿ ತಿರುಪತಿಯಂತಹ ದೈವ ಸನ್ನಿಧಾನಕ್ಕೆ ಭಕ್ತರು ಕಾಲ್ನಡಿಗೆಯಲ್ಲೇ ಹೋಗಬೇಕಾಗಿತ್ತು. ಊರಿನ ಹತ್ತಾರು ಜನ ಭಕ್ತರು ಸೇರಿ ಹೋಗುತ್ತಿದ್ದರು. ಭಕ್ತರ ಗುಂಪನ್ನು ದಂಡು ಎಂದು ಕರೆಯುತ್ತಿದ್ದರು. ದಂಡು ಎಂಬ ಪದಕ್ಕೆ ಜನರ ದೊಡ್ಡ ಗುಂಪು, ಅಲ್ಲದೇ ಇನ್ನೊಂದು ರೀತಿಯಲ್ಲಿ ಸೈನ್ಯದ ಒಂದು ತುಕಡಿ ಎನ್ನುವ ಅರ್ಥವಿದೆ.

ಭಕ್ತರೆಲ್ಲ ಸೇರಿ ಯಾತ್ರೆ ಹೊರಟಾಗ ಊರಿನ ಜನರೆಲ್ಲಾ ಸೇರಿ ನಡೆಸುವ ಆಚರಣೆಗೆ ದಂಡು ಹೊರಡಿಸುವುದೆಂದು ಕರೆಯುತ್ತಾರೆ. ಕೆಲವರು ಯಾತ್ರೆ ಹೊರಟವರಿಗೆ ಕಜ್ಜಾಯ ಕೊಡುತ್ತೇವೆಂದು ಹರಕೆ ಹೊತ್ತುಕೊಂಡಿರುತ್ತಾರೆ. ಅಂಥವರು ಯಾತ್ರೆ ಹೊರಟ ದಿನ ಊರಿನ ದೇವಾಲಯದಲ್ಲಿ ಸೇರಿ, ದೇವತೆಗೆ ತಾವು ತಂದ ಆಹಾರ ಪದಾರ್ಥಗಳನ್ನು ಎಡೆಮಾಡಿ, ಪೂಜಿಸುತ್ತಾರೆ. ನಂತರ ತಿರುಪತಿಗೆ ಹೋಗುವ ಎಲ್ಲಾ ಭಕ್ತರಿಗೂ ಎಡೆಯನ್ನು ಹಂಚಿ, ಎಲೆ ಅಡಿಕೆಯೊಂದಿಗೆ ಹಣವನ್ನು ಕೊಡುತ್ತಾರೆ. ದಂಡನ್ನು ಕಳುಹಿಸುವಾಗ ತಮಟೆ ಹಾಗೂ ನಗಾರಿಗಳನ್ನು ಬಾರಿಸುತ್ತಾರೆ. ಈ ಬಗೆಯ ಆಚರಣೆಗಳನ್ನು ಬಯಲುಸೀಮೆಯ ಕಡೆ ಕಾಣಬಹುದು.

ಮಲೆನಾಡಿನ ಭಾಗಗಳಲ್ಲಿ ಸನ್ನಿಧಾನಕ್ಕೆ ಹೋಗುವ ಸಂಕಲ್ಪ ಮಾಡಿಕೊಂಡ ಭಕ್ತರು ಒಂದು ಒಳ್ಳೆಯ ದಿನದಲ್ಲಿ ಸ್ನಾನ ಮಾಡಿ, ಮಡಿಯುಟ್ಟು, ತುಳಸಿಗೆ ತುಪ್ಪದ ದೀಪ ಬೆಳಗಿ, ತಮ್ಮ ಮನೆ-ಮಾರು ದನಕರು ತೋಟ ಇತ್ಯಾದಿಗಳ ಜವಾಬ್ದಾರಿಯನ್ನು ಆಕೆಗೆ ಒಪ್ಪಿಸಿ, ಹೊರಡುತ್ತಾರೆ. ಅಂದು ಹಬ್ಬದ ಅಡುಗೆ ಮಾಡಿ ಮನೆಯ ಜಕಣಿಗಳಿಗೆ ಎಡೆಮಾಡಿ ಭಕ್ತಿಯಿಂದ ಕೈ ಮುಗಿದು, ಎಲ್ಲರೊಂದಿಗೆ ಊಟ ಮಾಡುತ್ತಾರೆ. ಮನೆಯಿಂದ ಹೊರಡುವಾಗ ತಾವು ಪ್ರತಿ ವರ್ಷ ಕಾಣಿಕೆಯಾಗಿ ಕಟ್ಟುತ್ತಿದ್ದ ಹಣದ ಗಂಟನ್ನು ಹಾಗೂ ನೆರೆಹೊರೆಯವರು ನೀಡಿದ ಕಾಣಿಕೆ ಗಂಟನ್ನು ಕೊಂಡೊಯ್ಯುತ್ತಾರೆ. ಮನೆಯ ನಿಜಮನೆಯಲ್ಲಿ ದೀಪವೊಂದನ್ನು ಹಚ್ಚಿ, ಅಂಗಳದಲ್ಲಿ ತುಳಸಿ ಗಿಡವನ್ನು ನೆಟ್ಟು ಯಾತ್ರೆ ಕೈಗೊಳ್ಳುತ್ತಾರೆ. ದೀಪ ಆರಿ, ತುಳಸಿ ಗಿಡ ಬಾಡಿದರೆ ಯಾತ್ರೆಯಲ್ಲಿದ್ದವರಿಗೆ ಕೇಡಾಗಿದೆಯೆಂದು ಭಾವಿಸುತ್ತಾರೆ. ಎಷ್ಟೋ ಸಾರಿ ಯಾತ್ರೆ ಹೋದವರು ಮನೆಗೆ ಬರುವುದಿಲ್ಲ. ಮುಪ್ಪಿನ ಕಾರಣದಿಂದಲೋ, ನಡಿಗೆಯ ಆಯಾಸದಿಂದಲೋ, ರೋಗ ಇತ್ಯಾದಿಗಳಿಂದಲೋ ಮರಣಿಸುತ್ತಾರೆ. ಅಂಥ ಸಂದರ್ಭದಲ್ಲಿ ಉಳಿದರೂ ಅವರ ಶವಸಂಸ್ಕಾರ ಇತ್ಯಾದಿಗಳನ್ನು ಅಲ್ಲಿಯೇ ಮಾಡಿ ಮುಗಿಸಿ, ಊರಿಗೆ ಬಂದಾಗ ಸತ್ತ ವ್ಯಕ್ತಿಯ ಮನೆಗೆ ವಿಷಯ ತಿಳಿಸುತ್ತಾರೆ. ವಿಷಯ ತಿಳಿದ ಮನೆಯವರು ಮುಂದಿನ ವಿಧಿ ವಿಧಾನಗಳನ್ನು ಮಾಡಿ ಮುಗಿಸುತ್ತಾರೆ.