ಹರಕೆಯ ರೂಪದಲ್ಲಿ ದೇವರಿಗೆ ಅರ್ಪಿಸುವ ನಾಯಿಯ ಮೂರ್ತಿ. ಸಕಲೇಶಪುರ ತಾಲೂಕಿನ ಮರಗುತ್ತೂರಿನಲ್ಲಿ ನಡೆಯುವ ವಿಶಿಷ್ಟ ಸೇವೆ. ಅಯ್ಯಪ್ಪ ದೇವರ ಪೂಜೆಗಾಗಿ ಗುಡಿಯನ್ನು ಸ್ವಚ್ಛಗೊಳಿಸಿ, ತಳಿರುತೋರಣಗಳಿಂದ ಸಿಂಗರಿಸುತ್ತಾರೆ. ಗುಡಿಯ ಮುಂದಿನ ಭಾಗದಲ್ಲಿ ಚಪ್ಪರಹಾಕಿ, ಸಗಣಿಯಿಂದ ಸಾರಿಸಿ ಅಣಿಗೊಳಿಸುತ್ತಾರೆ. ಗುಡಿಯ ಸುತ್ತಲಿನ ಊರುಗಳಿಂದ ಜನ ತಂಡೋಪತಂಡವಾಗಿ ವಾದ್ಯಮೇಳಗಳ ಮೆರವಣಿಗೆಯಲ್ಲಿ, ಛತ್ರಿ ಚಾಮರಗಳನ್ನು ಹಿಡಿದು, ಪ್ರತಿಯೊಬ್ಬರು ಕೊರಳಿಗೆ ಹಾರ ಧರಿಸಿ ಗುಡಿಯನ್ನು ಬಂದು ಸೇರುತ್ತಾರೆ.

ಆಗಲೇ ಗುಡಿಯ ಒಳಗೆ ಪೂಜಾರಿ ಮೂರ್ತಿಯನ್ನು ವಸ್ತ್ರ, ಆಭರಣ ಹಾಗೂ ಹೂಗಳಿಂದ ಅಲಂಕರಿಸಿ, ಪೂಜಿಸಿ, ನೈವೇದ್ಯ ಅರ್ಪಿಸುತ್ತಾನೆ. ನಂತರ ಅಲ್ಲಿ ನೆರೆದ ಭಕ್ತರಿಗೆ ತೀರ್ಥ ನೀಡಿ ಮುಂದಿನ ಸೇವೆಗೆ ಸೂಚನೆ ನೀಡುತ್ತಾನೆ. ಪೂಜಾರಿಯನ್ನು ದೇವರ ಮನುಷ್ಯನೆಂದು ಕರೆಯುತ್ತಾರೆ. ದೇವರ ಮನುಷ್ಯನ ಸೂಚನೆ ಆದ ತಕ್ಷಣ ಎಲ್ಲರೂ ಅಲ್ಲಿಂದ 20 ಕಿ.ಮೀ. ದೂರದ ‘ಕಾಗಿನೇರಿ’ ಬೆಟ್ಟದ ಕಡೆ ಓಡುತ್ತಾರೆ. ನಂತರ ಅಯ್ಯಪ್ಪ ದೇವರಿಗೆ ವಿಶಿಷ್ಟ ಹರಕೆ ಸಲ್ಲಿಸುತ್ತಾರೆ. ತಾವು ಆಗಲೇ ಸಿದ್ಧಪಡಿಸಿ ಕೊಂಡು ಬಂದ ಮಣ್ಣಿನ ನಾಯಿಯ ಮೂರ್ತಿಯನ್ನು ‘ನಾಯಿ ಬನ’ದಲ್ಲಿ ಇರಿಸಿ ಅಯ್ಯಪ್ಪನನ್ನು ಪೂಜಿಸಿ ನಮಸ್ಕರಿಸುತ್ತಾರೆ.

ಅಯ್ಯಪ್ಪ ಸ್ವಾಮಿ ಹಾಗೂ ನಾಯಿ ಬನದ ಸಂಬಂಧಕ್ಕೆ ಕಥೆಯೊಂದನ್ನು ಹೀಗೆ ಹೇಳುತ್ತಾರೆ. ಹಿಂದೆ ಅಯ್ಯಪ್ಪ ಸ್ವಾಮಿಯ ಕಾಗಿನೇರಿ ಬೆಟ್ಟದ ಮೇಲಿನ ಕೆರೆಯ ಸಮೀಪ ಬೇಟೆಗೆಂದು ಬರುತ್ತಿದ್ದನಂತೆ. ಬೇಟೆಯ ಸಂದರ್ಭದಲ್ಲಿ ಅವನೊಂದಿಗೆ ಬೇಟೆ ನಾಯಿಗಳ ‘ದಂಡೇ’ ಇರುತ್ತಿದ್ದವಂತೆ. ಅಲ್ಲಿಯ ಕೆರೆಯೊಂದಕ್ಕೆ ಅಯ್ಯಪ್ಪ ಸ್ವಾಮಿಯು ಒಂದು ಜಾತಿಯ ಮರದ ಚಕ್ಕೆಯ ಮದ್ದನ್ನು ಕದಡುತ್ತಿದ್ದನಂತೆ. ಮದ್ದಿನಿಂದ ತೇಲುತ್ತಿದ್ದಾಗ ಮೀನುಗಳನ್ನು ಹಿಡಿದು ತನ್ನ ನಾಯಿಗಳಿಗೆ ಹಾಕಿದನಂತೆ, ಈ ಹಿನ್ನೆಲೆಯಲ್ಲಿ ಅಲ್ಲಿ ನಾಯಿ ಬನವಿದೆ.

ದೇವರ ಮನುಷ್ಯನ ‘ಹೊ’ ಕಾರ ಕೇಳಿದ ತಕ್ಷಣ ಓಡುತ್ತ ಹೊರಟ ಭಕ್ತರು ಕತ್ತಲಾಗುವುದರೊಳಗೆ ಕಾಗಿನೇರಿ ಬೆಟ್ಟದ ಕೆರೆಯನ್ನು ತಲುಪಿ, ಮಲೆಕುಡಿಯನಿಂದ ಮದ್ದಿನ ಚಕ್ಕೆಯನ್ನು ಪಡೆದು, ಪಾಲಳ್ಳಿ ಹೊಳೆಯಲ್ಲಿ ಕದಡುತ್ತಾರೆ. ಮದ್ದಿನಿಂದ ಸತ್ತು ತೇಲುತ್ತಿರುವ ಮೀನುಗಳನ್ನು ಸಂಗ್ರಹಿಸಿ, ಮನೆಗೆ ತಂದು ಒಣಗಿಸಿ, ಸಂಗ್ರಹಿಸಿಡುತ್ತಾರೆ. ನಂತರ ಆರಿದ್ರ ಮಳೆಯ ವೇಳೆಯಲ್ಲಿ ಮೀನುಗಳಿಂದ ಸಾರು ಮಾಡಿ ಅಯ್ಯಪ್ಪ ಸ್ವಾಮಿಯ ಬಳಿಯಿರುವ ನಾಯಿ ಬನದ ನಾಯಿ ಮೂರ್ತಿಗಳ ಮುಂದಿರುವ ಮಣ್ಣಿನ ಬಟ್ಟಲಿಗೆ ಹಾಕಿ ಹರಕೆ ಒಪ್ಪಿಸುತ್ತಾರೆ. ಭಕ್ತರು ನಾಯಿ ಬನಕ್ಕೆ ಅರ್ಪಿಸಿದ ಮಣ್ಣಿನ ನಾಯಿ ಮೂರ್ತಿಗಳು ಸಾವಿರಾರು ಸಂಖ್ಯೆಯಲ್ಲಿ ಕಾಣಸಿಗುತ್ತವೆ.