ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ವೈಷ್ಣವ ಒಕ್ಕಲಿಗರಲ್ಲಿ ಪ್ರಚಲಿತವಿರುವ ಕೃಷಿ ಸಂಬಂಧಿ ಹಬ್ಬ. ಯುಗಾದಿಯ ನಂತರದ ಅನುಕೂಲಕರ ದಿನಗಳಲ್ಲಿ ಈ ಹಬ್ಬವನ್ನು ಮಾಡುತ್ತಾರೆ. ದೊಂಬರ ಹಬ್ಬ ಊರೊಟ್ಟಿನ ಹಬ್ಬವಾಗಿದ್ದರಿಂದ, ಎಲ್ಲರ ಸಹಕಾರ ಬಹಳ ಮುಖ್ಯ. ನಿಗದಿತ ದಿನದಂದು ಊರಿನ ದೇವಾಲಯಕ್ಕೆ ಬಂದು ಸೇರುವಂತೆ ಊರಿನ ಹಿರಿಯರು ಕರೆ ನೀಡುತ್ತಾರೆ. ಸಭೆ ಸೇರಿ, ಹಬ್ಬದ ದಿನ, ಕೆಲಸ ಕಾರ್ಯಗಳನ್ನು ಗೊತ್ತು ಮಾಡಿಕೊಳ್ಳುತ್ತಾರೆ. ಹಬ್ಬಕ್ಕೆ ಹದಿನೈದು ದಿನಗಳ ಮೊದಲು ಉತ್ತರ ಕರ್ನಾಟಕ ಭಾಗದಲ್ಲಿ ವಾಸವಾಗಿರುವ ದೊಂಬತಿಯರನ್ನು ಕಂಡು ಹಬ್ಬಕ್ಕೆ ಬರುವಂತೆ ‘ವೀಳ್ಯ’ ಕೊಟ್ಟು ಬರುತ್ತಾರೆ.

ಗ್ರಾಮದವರೆಲ್ಲ ಸೇರಿ, ದೇವರ ಬನ, ಮದಾಸ್ತಿಕೆ ಕಟ್ಟೆಗಳನ್ನು ಸ್ವಚ್ಛಗೊಳಿಸಿ, ಸುಣ್ಣ ಬಣ್ಣ ಹಾಗೂ ತಳಿರು ತೋರಣಗಳಿಂದ ಅಲಂಕರಿಸಿರುತ್ತಾರೆ. ದೇವಾಲಯವನ್ನು ಸ್ವಚ್ಛಗೊಳಿಸಿ, ಬಣ್ಣ ಬಳಸಿ, ವಿಶೇಷವಾಗಿ ಅಲಂಕರಿಸಿ ಹಬ್ಬದ ಕ್ರಿಯಾವಿಧಿಗಳು ಗುರುವಾರವೇ ಆರಂಭವಾಗಬೇಕೆಂದು ನಿಯಮವಿದೆ. ಅಂದು ‘ಭೂತನ ನೋನಿ’ ನಡೆಯುತ್ತದೆ. ಹರಕೆಯಲ್ಲಿ ದೇವಸ್ಥಾನದ ವಹಿವಾಟುದಾರರು, ಗಣಮಕ್ಕಳು (ಗ್ರಾಮದ ದೇವತೆಗಳು ಆವಾಹನೆಗೊಳ್ಳುವ ವ್ಯಕ್ತಿಗಳು) ಬೌತಿದಾರರು (ದೇವರ ಮೂರ್ತಿಗಳನ್ನು ಹೊರುವವರು) ಗ್ರಾಮದ ಪ್ರಮುಖರು ಅಲ್ಲದೇ ಮನೆಗೆ ಒಬ್ಬರಂತೆ ತಪ್ಪದೇ ಹಾಜರಿರುತ್ತಾರೆ. ಇವರಲ್ಲಿ ಒಬ್ಬರು ಬಾರದಿದ್ದಾರೂ ‘ನೋನಿ’ ಆರಂಭವಾಗುವುದಿಲ್ಲ. ಎಲ್ಲರೂ ಆಗಮಿಸಿದ ಮೇಲೆ ಗಣಮಕ್ಕಳ ಮೇಲೆ ಗ್ರಾಮದೇವತೆಗಳು ಆವಾಹನೆಗೊಳ್ಳುತ್ತವೆ. ಊರಿನ ಹಿರಿಯನೊಬ್ಬ ‘ದೊಂಬರ ಹಬ್ಬ’ ಮಾಡುವ ಬಗ್ಗೆ ತಿಳಿಸಿ, ಹಬ್ಬದ ಸಂದರ್ಭ ದಲ್ಲಿ ಯಾವ ಅನಿಷ್ಟಗಳೂ ಬಾರದಂತೆ ನೋಡಿಕೊಳ್ಳಬೇಕೆಂದು ಬೇಡುತ್ತಾನೆ. ಅದಕ್ಕೆ ದೇವತೆಗಳು ಪೂರ್ಣ ಸಹಕರಿಸುವುದಾಗಿ ಸಮ್ಮತಿಸಿ ಮೈಬಿಟ್ಟು ಹೋಗುತ್ತವೆ.

ದೇವತೆಗಳು ಮೈಬಿಟ್ಟು ಹೋದ ನಂತರ ಭೂತನ ನೋನಿಗೆ ಬಂದ ಹಣ್ಣು ಕಾಯಿಗಳನ್ನು ಅರ್ಪಿಸಿ, ಪೂಜಾರಿಯು ಪೂಜೆ ಸಲ್ಲಿಸುತ್ತಾನೆ. ಪೂಜಾರಿ ಕೆಲಸವನ್ನು ಒಕ್ಕಲಿಗನೇ ಮಾಡುತ್ತಾನೆ. ಹಣ್ಣು ಕಾಯಿಗಳ ಸೇವೆ ಮುಗಿದ ಮೇಲೆ ಭೂತನಿಗೆ ಕುರಿ ಬಲಿಕೊಟ್ಟು, ರಕ್ತವನ್ನು ಭೂತನ ಕಲ್ಲಿಗೆ ಲೇಪಿಸುತ್ತಾರೆ. ಕುರಿಯನ್ನು ಹಸುಗೆ ಮಾಡಿ, ಮಾಂಸವನ್ನು ಹಂಚಿಕೊಂಡು ಮನೆಗಳಿಗೆ ಕಳುಹಿಸುತ್ತಾರೆ. ಎಡೆಗಾಗಿ ತಲೆಯ ಮಾಂಸದ ಸಾರು, ಮೃದು ಮಾಂಸದಿಂದ ಕರಕಲು ಕಡ್ಡಿ ಸಣ್ಣ ಸಣ್ಣ ತುಣುಕುಗಳನ್ನು ಕಡಿಯೊಂದಕ್ಕೆ ಪೋಣಿಸಿ, ಉಪ್ಪು ಸವರಿ, ಬೆಂಕಿಯಲ್ಲಿ ಬೇಯಿಸಿ ಮಾಡಿದ ಕರಕಲು ಕಡ್ಡಿ ಹಾಗೂ ಹದವಾಗಿ ಪಾತ್ರೆಯಲ್ಲಿ ಬೇಯಿಸಿದ ಹುರಿತುಂಡು ಸಿದ್ಧಪಡಿಸುತ್ತಾರೆ. ಅಕ್ಕಿಯಿಂದ ಮಾಡಿದ ಪಿಚ್ಚುಕಡಬು, ಅನ್ನ ಮಾಡಿ, ಭೂತನಿಗೆ ಹನ್ನೊಂದು ಎಲೆ ಹಾಕಿ, ಎಡೆಗಾಗಿ ಮಾಡಿದ ಮೇಲಿನ ಎಲ್ಲಾ ವಸ್ತುಗಳನ್ನು  ಬಡಿಸಿ, ಪೂಜಿಸಿ, ಕೈಮುಗಿಯುತ್ತಾರೆ. ಭೂತನ ಎದುರು ಇಟ್ಟ ಹನ್ನೊಂದು ಎಡೆಗಳಲ್ಲಿ ಒಂದನ್ನು ಅಲ್ಲಿಯೇ ಬಿಟ್ಟು ಉಳಿದ ಹತ್ತು ಎಡೆಗಳನ್ನು ಎತ್ತಿಕೊಳ್ಳುತ್ತಾರೆ. ಆ ಎಡೆಗಳನ್ನು ಗಣಮಕ್ಕಳು, ಬೌತಿದಾರರು, ಊರು ಮುಖಂಡರು ಹಂಚಿಕೊಂಡು ತಿನ್ನುತ್ತಾರೆ. ನೋನಿಗೆ ಬಂದವರಿಗೆಲ್ಲ ಹುರಿ ತುಂಡನ್ನು ಪ್ರಸಾದವಾಗಿ ನೀಡುತ್ತಾರೆ.

ಭೂತನ ನೋನಿ ಹರಕೆ ಆದ ಮೂರು ದಿನಗಳ ನಂತರ ಆರಂಭವಾಗುವ ದೊಂಬರ ಹಬ್ಬ ಒಟ್ಟು ಮೂರು ದಿನಗಳ ರಾತ್ರಿ ನಡೆಯುತ್ತದೆ. ಮೊದಲ ದಿನದ ಹಬ್ಬವನ್ನು ‘ಹರೆ’ಯಂತಲೂ, ಎರಡನೆ ದಿನದ ಹಬ್ಬವನ್ನು ಗ್ರಾಮದೇವರ ಹಬ್ಬವೆಂತಲೂ ಮತ್ತು ಮೂರನೆಯ ದಿನದ ಹಬ್ಬವನ್ನು ಹಸ್ರಾಯನ ಹಬ್ಬವೆಂತಲೂ ಕರೆಯುತ್ತಾರೆ. ‘ಹರೆ’ಯ ದಿನ ದೊಂಬತಿಯರು ನಡುಹಗಲು ದೇವತೆಗಳನ್ನು ಕೂರಿಸುವ ‘ರತೆ’ ಎಂದು ಕರೆಯುವ ಸ್ಥಳದ ಬಳಿ ಬಂದು ಡೊಳ್ಳು ಬಾರಿಸುತ್ತಾರೆ. ದೊಂಬತಿಯ ಡೊಳ್ಳು ಬಾರಿಸುತ್ತಿರುವಾಗಲೇ ಊರಿನ ಹಿರಿಯ ಮುಖಂಡನೊಬ್ಬ ಮರದ ಹರೆಯೊಂದನ್ನು ಕಡಿದು, ಅದನ್ನು ನೆಲದಲ್ಲಿ ನೆಡುತ್ತಾನೆ. ಈ ಕ್ರಿಯಾ ಪದ್ಧತಿಗೆ ‘ಹರೆ’ಯೆಂದು ಕರೆಯಲಾಗುತ್ತದೆ. ಅಂದು ಮತ್ತೊಮ್ಮೆ ಎಲ್ಲ ರತೆಕಟ್ಟೆಗಳನ್ನು ಸ್ವಚ್ಛಗೊಳಿಸಿ, ತಳಿರುತೋರಣಗಳಿಂದ ಸಿಂಗರಿಸುತ್ತಾರೆ. ಚಲವಾದಿಗಳು ಚಮ್ಮಾಳ, ಕೊಂಬು, ಕಹಳೆಗಳನ್ನು ಸಿದ್ಧ ಮಾಡಿಕೊಂಡರೆ, ದೀವಟಿಗೆ ಹಿಡಿಯುವವರು ದೊಂದಿ, ದೀವಟಿಗೆಗಳನ್ನು ಸಿದ್ಧ ಮಾಡಿಕೊಳ್ಳುತ್ತಾರೆ. ಅಂದು ಸೂರ್ಯಸ್ತವಾದ ನಂತರ ಬೇಯಿಸಿದ ಹುರುಳಿ ಹಿಡಿದ ಚೌತಿದಾರರು ಎಲ್ಲಾ ‘ರತೆಕಟ್ಟೆ’ಗಳಿಗೂ ಹುರುಳಿ ಬೀರಿ “ಇವತ್ತು ಹಾಲುಹಬ್ಬ ಮಾಡ್ತೀವಿ, ಬರ್ಬೇಕು” ಎಂದು ಹೇಳಿ ಗ್ರಾಮದೇವತೆಗಳನ್ನು ಆಹ್ವಾನಿಸುತ್ತಾರೆ.

ದೇವಾಲಯದಿಂದ ಚೌತಿದಾರರು ಉದ್ದಗತ್ತಿ, ಚೋಣ, ಕಂಚಿನ ಚೋಣ, ಮರದ ಜೋಣ, ಕುದುರೆ, ಕಬ್ಬಿಣದ ಸಲಾಕೆ ಇತ್ಯಾದಿಗಳನ್ನು ಹೊತ್ತು ಮೆರವಣಿಗೆಯಲ್ಲಿ ಹೊಳೆಯ ಕಡೆಗೆ ‘ಹೊಳೆ ಮೀಯುವ’ ಉತ್ಸವಕ್ಕೆ ತೆರಳುತ್ತಾರೆ. ಮೆರವಣಿಗೆಯಲ್ಲಿ ದೀವಟಿಗೆಯವರು, ಡೊಳ್ಳಿನ ಮೇಳದವರು, ಪೂಜಾರಿಗಳು, ಗಣ ಮಕ್ಕಳು, ದೊಂಬರು ಹಾಗೂ ಊರಿನವರು ಸೇರಿರುತ್ತಾರೆ. ಹೊಳೆಯ ದಡದಲ್ಲಿ ‘ಕಲಶದ ಗುಂಡಿ’ ಎಂದು ಕರೆಯುವ ಗದ್ದುಗೆಯೊಂದನ್ನು ನಿರ್ಮಿಸಿ, ಅದರ ಮೇಲೆ ಚೆನ್ನಾಗಿ ಬೆಳಗಿದ ಕಲಶ, ದೇವರ ಮೂರ್ತಿಗಳನ್ನು ಇರಿಸಿ, ವಸ್ತ್ರಾಭರಣಗಳಿಂದ ಅಲಂಕರಿಸಿ, ಪೂಜಿಸುತ್ತಾರೆ. ನಂತರ ಎಂಟು ಮಂದಿ ಬೌತಿದಾರರು ಒಂದೊಂದು ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯೊಂದಿಗೆ ಮೂಲ ‘ರತೆ’ಗೆ ಬಂದು ಸೇರುತ್ತಾರೆ. ಎಲ್ಲಾ ಮೂರ್ತಿಗಳನ್ನು ‘ರತೆ’ ಕಟ್ಟೆಯ ಗದ್ದುಗೆ ಮೇಲಿರಿಸಿ, ಹಣ್ಣು, ಹೂ, ಕಾಯಿಗಳಿಂದ ಪೂಜಿಸಿದ ಪೂಜಾರಿ ಮಹಾಮಂಗಳಾರತಿ ಮಾಡುತ್ತಾನೆ. ಮತ್ತೆ ರತೆಯಿಂದ ಚೌತಿದಾರರು ಮೂರ್ತಿಗಳನ್ನು ತಲೆಯ ಮೇಲೆ ಹೊತ್ತು ಇನ್ನೊಂದು ‘ರತೆ’ಗೆ ಸಾಗುತ್ತಾರೆ. ಮೂರ್ತಿ ಹೊತ್ತ ಬೌತಿದಾರರ ಮುಂದೆ ಮದ್ದಲೆ, ತಾಳ, ಡೊಳ್ಳು ಹಿಡಿದ ದೊಂಬರು ಹಾಗೂ ದೊಂಬತಿಯರ ಮೇಳನರ್ತನ ಮಾಡುತ್ತಾ “ಗಣಪತಿ ಗುಣದೇವನೆ ಗಜಾನನೇ” ಎಂದು ಹಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಗಣಮಕ್ಕಳ ಮೇಲೆ ದೇವರು ಆಹ್ವಾನೆಯಾಗುತ್ತದೆ. ಯಾವ ಮೂರ್ತಿಯ ದೇವರು ಆಹ್ವಾನೆಯಾಗುವುದೋ ಆ ಚೌತಿದಾರರಿಂದ ಮೂರ್ತಿಯನ್ನೂ ಪಡೆದು ತಲೆಯ ಮೇಲೆ ಹೊತ್ತು ಆವೇಶ ಭರಿತವಾಗಿ ಕುಣಿಯುತ್ತಾನೆ. ಪೂಜಾರಿಯ ಆ ಗಣಮಗನಿಗೆ ಮತ್ತು ಅವನು ಹೊತ್ತ ಮೂರ್ತಿಗೆ ಹಣ್ಣುಕಾಯಿ ಅರ್ಪಿಸಿ, ಪೂಜಿಸುತ್ತಾನೆ. ಹೀಗೆ ಎಲ್ಲರನ್ನು ಒಳಗೊಂಡ ಮೆರವಣಿಗೆ ಒಂದು ರತೆಯಿಂದ ಇನ್ನೊಂದು ರತೆಗೆ ಹೋಗುವುದನ್ನು ‘ಮದಾಸ್ತಿಕೆ’ ನಡೆಸುವುದು ಎಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಭಕ್ತರು ಕೇಳುವ ಪ್ರಶ್ನೆಗಳಿವೆ ಸಂಬಂಧಿಸಿದ ದೈವ, ಪರಿಹಾರ, ಸಲಹೆ ಸೂಚನೆ ನೀಡುತ್ತದೆ. ಆಗಲೇ ಸ್ನಾನಮಾಡಿ ಮಡಿಯುಟ್ಟ ಅಡುಗೆಯವರು ನಿಗದಿತ ದೇವಾಲಯದ ಸ್ಥಳಗಳಲ್ಲಿ ಎಡೆ ಅಡುಗೆಗಳನ್ನು ತಯಾರಿಸಿರುತ್ತಾರೆ. ಎಡೆ ಅಡುಗೆಗಾಗಿ ಊರಿನ ಪ್ರತಿ ಮನೆಗಳಿಂದಲೂ ಹಾಲು, ಅಕ್ಕಿ ಹಾಗೂ  ಇತರೆ ವಸ್ತುಗಳು ಸಂಗ್ರಹಿಸಲಾಗಿರುತ್ತದೆ. ಅಂದು ಎಡೆಗಾಗಿ ‘ಹುಗ್ಗಿ’ ಎಂಬ ತಿನಿಸು ತಯಾರಿಸಿರುತ್ತಾರೆ. ನೂರಾವೊಂದು ಎಡೆಗಳನ್ನು ಮೂಲಕಟ್ಟೆಯಲ್ಲಿ ಇಟ್ಟು ಪೂಜಿಸುತ್ತಾರೆ. ಆಗ ಮೈದುಂಬಿದ ಗಣಪಾತ್ರಿಯೊಬ್ಬ ಅಂದಿನ ಹಬ್ಬದ ಪೂಜಾ ವಿಧಿವಿಧಾನಗಳ ಬಗೆಗೆ ತೃಪ್ತಿ, ಸಮಾಧಾನ ಸೂಚಿಸಿದಾಗ ಮೈಬಿಟ್ಟು ಹೋಗುತ್ತದೆ. ಹುಗ್ಗಿಯನ್ನು ಗಣ ಮಕ್ಕಳು ಹಾಗೂ ಚೌತಿದಾರರಿಗೆ ನೀಡಿ, ಎಡೆಗಳನ್ನು ಕೈವಾಡದವರಿಗೆ ನೀಡಲಾಗುತ್ತದೆ. ಎರಡನೆ ದಿನ ನಡೆಯುವ ಗ್ರಾಮ ದೇವತೆಯ ಹಬ್ಬದಲ್ಲೂ ಇದೇ ರೀತಿ ಸಂಪ್ರದಾಯವನ್ನು ಅನುಸರಿಸುತ್ತಾರೆ.

ಗ್ರಾಮದೇವತೆ ಹಬ್ಬವಾದ ಎರಡನೇ ದಿನವೂ ರಾತ್ರಿ ದೇವತೆಗಳ ಮೂರ್ತಿ ಹಾಗೂ ವಸ್ತುಗಳನ್ನು ಹೊಳೆ ಮೀಯಿಸಿ, ಮೆರಣಿಗೆಯಲ್ಲಿ ಬಂದು ರತೆಯಲ್ಲಿ ಕೂರಿಸಿ ಪೂಜಾ ಕಾರ್ಯ ನಡೆಸಿ, ಹಿಂದಿನ ದಿನದಂತೆ ಎಲ್ಲಾ ‘ರತೆ’ ಕಟ್ಟೆಗಳಲ್ಲಿಯ ಹಣ್ಣು ಕಾಯಿ ಅರ್ಪಿಸಿ, ಮದಾಸ್ತಿಕೆ ನಡೆಸಿ ಮತ್ತೆ ಪುನಃ ಮೂಲ ರತೆಗೆ ಬಂದು, ಮೂರ್ತಿಗಳನ್ನು ಗದ್ದುಗೆಯ ಮೇಲೆ ಪ್ರತಿಷ್ಠಾಪಿಸಿ, ಪೂಜಿಸುತ್ತಾರೆ. ಡೊಳ್ಳಿನವರು ತೆಂಕು ದಿಕ್ಕಿಗೆ ಡೊಳ್ಳು ಬಾರಿಸುತ್ತಾ ದೇವತೆಗಳನ್ನು ಉದ್ದೇಶಿಸಿ “ಇಂದು ಹೋಗಿ ನಾಳೆ ಬನ್ನಿ” ಎಂದು ಹೇಳುವುದರ ಮೂಲಕ ಎರಡನೇ ದಿನದ ಹಬ್ಬದ ಕ್ರಿಯಾ ವಿಧಾನವನ್ನು ಮುಗಿಸುತ್ತಾರೆ. ಮೂರನೆಯ ದಿನ ಹಸ್ರಾಯನ ಹಬ್ಬ. ಇದು ಗ್ರಾಮದ ಪ್ರಧಾನ ದೈವ. ಕುಮಾರರಾಮನನ್ನೇ ಹಸ್ರಾಯನೆಂದು ಕರೆಯುತ್ತಾರೆ.

ಆ ದಿನ ಹಿರಿಯರನ್ನು ಸ್ಮರಿಸಿ ಮನೆಯ ಚಕ್ಕಣಿಗಳಿಗೆ ಮೀನು, ಕೋಳಿ, ಕುರಿಮಾಂಸ ಹಾಗೂ ಕಡಬು ತಯಾರಿಸಿ ಎಡೆ ಇಟ್ಟು ಪೂಜಿಸುತ್ತಾರೆ. ಅಂದು ರಾತ್ರಿ ಮನೆ ಮಂದಿಯೆಲ್ಲ ಕೈಮುಗಿದು, ಎಡೆಯ ಊಟವನ್ನು ಮಾಡಿ, ದೇವಾಲಯಕ್ಕೆ ಬಂದು ಸೇರುತ್ತಾರೆ. ಹಿಂದಿನ ದಿನ ದೇವರನ್ನು ಕಳುಹಿಸಿದ ದಿಕ್ಕಿನತ್ತ ಡೋಲು ಬಾರಿಸುತ್ತಾ ಮತ್ತೆ ಬರುವಂತೆ ಆಹ್ವಾನ ನೀಡುತ್ತಾರೆ. ಆಗ ದೊಂಬರ ಚೆನ್ನಿಯರು ನೃತ್ಯ ಮಾಡುತ್ತಾ ಮೂಲ ರತೆಯ ಕಡೆಗೆ ಬರುತ್ತಾರೆ. ಮೂರ್ತಿಗಳನ್ನೆಲ್ಲ ಮೂಲ ರತೆಯಲ್ಲಿರಿಸಿ ಪೂಜಿಸುತ್ತಾರೆ. ನಂತರ ಮೂರ್ತಿಗಳನ್ನು ಹೊತ್ತ ಚೌತಿದಾರರು ಹೊಳೆ ಮೀಯಿಸುವುದಕ್ಕೆ ಹೊಳೆಯ ಕಡೆಗೆ ಮೆರವಣಿಗೆ ಮೂಲಕ ಸಾಗುತ್ತಾರೆ. ಮೂರ್ತಿಗಳನ್ನು ಹೊಳೆ ಮೀಯಿಸಿ, ಗದ್ದುಗೆಯ ಮೇಲೆ ಕೂರಿಸಿ ಒಡವೆ ವಸ್ತ್ರಾಭರಣಗಳಿಂದ ಸಿಂಗರಿಸಿ, ಪೂಜಿಸುತ್ತಾರೆ. ಹರಕೆ ಹೊತ್ತ ಭಕ್ತರು ಕೈಯಾರತಿ ಹರಕೆ ತೀರಿಸುತ್ತಾರೆ. ಸಾಮಾನ್ಯವಾಗಿ ಮಕ್ಕಳಿಲ್ಲದವರು, ರೋಗ ರುಜಿನಗಳೊಂದಿಗೆ ನರಳಿದವರು ಇತ್ಯಾದಿ ಕಷ್ಟದಿಂದ ನರಳಿದವರು ತಮ್ಮ ಕೈ ಬೆರಳುಗಳಿಗೆ ಮಡಿವಾಳನಿಂದ ಒಳ್ಳೆಣ್ಣೆ ಬತ್ತಿಗಳನ್ನು ಸುತ್ತಿಸಿಕೊಂಡು, ದೀಪ ಹೊತ್ತಿಸಿ ಗದ್ದುಗೆಯನ್ನು ಐದು ಸಾರಿ ಸುತ್ತಿ, ನಂತರ ಬತ್ತಿ ಬಿಚ್ಚಿಕೊಂಡು ಹರಿವಾಣಾರತಿ  ಬೆಳಗಿ ಹರಕೆ ಒಪ್ಪಿಸುತ್ತಾರೆ. ನಂತರ ಮೆರವಣಿಗೆ ರತೆಯ ಬಳಿಗೆ ಬಂದು ಮದಾಸ್ತಿಕೆ ಮುಗಿಸಿ, ಪೂಜಾ ಕಾರ್ಯ ನಡೆಸಿ ಇನ್ನೊಂದು ರತೆಗೆ ತೆರಳು್ತದೆ. ಎಲ್ಲಾ ಮದಾಸ್ತಿಕೆಗಳು ಮುಗಿದ ನಂತರ ಕೊನೆಯಲ್ಲಿ ಹಸ್ರಾಯನ ಕಟ್ಟೆಗೆ ಬಂದು ಸೇರುತ್ತವೆ, ಹಸ್ರಾಯನ ಕಟ್ಟೆಯ ಎದುರು ಶೂಲ ಕಂಭವೊಂದನ್ನು ನಿಲ್ಲಿಸಿರುತ್ತಾರೆ. ಊರಿನ ಸಮಸ್ತರೂ, ಸುತ್ತಲಿನ ಊರಿನ ಭಕ್ತರು ಹಸ್ರಾಯನಿಗೆ ಹಣ್ಣುಕಾಯಿಗಳನ್ನು ಅರ್ಪಿಸುತ್ತಾರೆ. ಶೂಲಕಂಭಕ್ಕೆ ಜೀವಂತ ಕೋಳಿಯನ್ನು ಸಿಕ್ಕಿಸುತ್ತಾರೆ. ಅದರ ಸುತ್ತಾ ದೊಂಬತಿಯರು ಹಾಡುತ್ತ ನೃತ್ಯ ಮಾಡುತ್ತಾರೆ.

ಗಣಮಕ್ಕಳನ್ನು ಮೈದುಂಬಿದ ದೇವರುಗಳೆಲ್ಲ ಬೆಳಗಿನ ಜಾವಕ್ಕೆ ಮೈಬಿಟ್ಟು ಹೋಗುತ್ತವೆ. ಭಕ್ತರು ಊರಿನ ಎಲ್ಲಾ ದೇವತೆಗಳಿಗೂ ಕುರಿಕೋಳಿಗಳನ್ನು ಬಲಿ ನೀಡಲಾಗುತ್ತದೆ. ನಂತರ ಕೊಂಡ ಹಾಯ್ದು ಹರಕೆ ಒಪ್ಪಿಸುತ್ತಾರೆ. ದೇವತೆಗಳನ್ನೆಲ್ಲ ಕಲ್ಯಾಣೋತ್ಸವ ಮಾಡಿ, ಗುಡಿ ತುಂಬಿಸುತ್ತಾರೆ. ಅಂದು ಎಲ್ಲರಿಗೂ ಅನ್ನ ಸಂತರ್ಪಣೆ ಇರುತ್ತದೆ. ಹಬ್ಬದಲ್ಲಿ ಸಹಕರಿಸಿದ ಅಗಸರು, ದೀವಟಿಗೆಯವರು, ತಳವಾರರು, ಚಲವಾದಿಗಳು, ಕೈವಾಡದವರು, ದೊಂಬರು ಮುಂತಾದವರಿಗೆ ಅಕ್ಕಿ, ಹಣ, ಉಡುಗೊರೆ ಇತ್ಯಾದಿಗಳನ್ನು ನೀಡಿ ಸತ್ಕರಿಸುತ್ತಾರೆ. ಗಣಮಕ್ಕಳು  ಹಾಗೂ ಬೌತಿದಾರರಿಗೆ ವಿಶೇಷ ಸನ್ಮಾನ ಮಾಡಿ, ದವಸಧಾನ್ಯ, ಹಣ ಇತ್ಯಾದಿಗಳನ್ನು ನೀಡುತ್ತಾರೆ. ಕೊನೆಯಲ್ಲಿ ದೇವರ ಮೂರ್ತಿಗಳು, ಆಭರಣಗಳು, ಇತ್ಯಾದಿ ಪೂಜಾ ಸಾಮಾಗ್ರಿಗಳನ್ನು ಬುಟ್ಟಿಯಲ್ಲಿ ತುಂಬಿ ಊರ ಮುಖಂಡರ ಮನೆಯಲ್ಲಿ ಇಡುತ್ತಾರೆ. ದೇವರ ಒಡವೆಗಳನ್ನು ಮದುವೆ ಸಂದರ್ಭದಲ್ಲಿ ಕೇಳಿ ಪಡೆದು ಜೋಪಾನವಾಗಿ ಹಿಂದಿರುಗಿಸುತ್ತಾರೆ. ಇದಕ್ಕೆ ಯಾವುದೇ ಬಾಡಿಗೆ, ಸುಂಕ ಪಡೆಯುವುದಿಲ್ಲ. ಮದುಮಗನಾದರೆ ಬಂಧಿ ಸರಿಗೆ, ಗುಂಡಿನ ಸರ, ಮದುಮಗಳಾದರೆ ಜಡೆ ಬಂಗಾರ, ಬೈತಲೆ ಬಂಗಾರ, ಸೊಂಟಪಟ್ಟಿ, ತೋಳುಬಂಧಿ ಧರಿಸುತ್ತಾರೆ.