ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯಕೊಪ್ಪಲು ಗ್ರಾಮದಲ್ಲಿ ದೈವಗಳ ಮೂರ್ತಿಗಳನ್ನು ಯುಗಾದಿ ದಿನ ಸ್ನಾನ ಮಾಡಿಸುವ ವಿಶಿಷ್ಟ ಬಗೆಯ ಆಚರಣೆ. ವರ್ಷಕ್ಕೆ ಒಂದು ಬಾರಿ ಸುತ್ತಲಿನ ಗ್ರಾಮದ ಗ್ರಾಮ ದೈವಗಳ ಉತ್ಸವಮೂರ್ತಿಗಳನ್ನು ಬುಜ್ಜಣಿಗೆ ಪೆಟ್ಟಿಗೆಯಲ್ಲಿ ತಂದು ಕಾವೇರಿಯಲ್ಲಿ ಮುಳುಗಿಸಿ ಪುಣ್ಯಸ್ನಾನ ಮಾಡಿಸುತ್ತಾರೆ. ಯುಗಾದಿಯ ನಸುಕಿನಲ್ಲೇ ಬೋರೆದೇವರ ದೇವಸ್ಥಾನದ ಹತ್ತಿರ ಕಾವೇರಿ ನದಿ ದರ್ಶನಕ್ಕೆ ಸೇರುತ್ತಾರೆ. ದೇವರ ಬುಜ್ಜಣಿಗೆ ಪೆಟ್ಟಿಗೆಯನ್ನು ಲಾರಿ, ಟ್ರ್ಯಾಕ್ಟರ್, ಸ್ಕೂಟರ್, ಸೈಕಲ್ ಇತ್ಯಾದಿಗಳ ಮೂಲಕ ತರುತ್ತಾರೆ.

ಅರಕೆರೆ ಬಿಸಿಲು ಮಾರಮ್ಮ, ಸೀಹಳ್ಳಿ ಹುಚ್ಚಮ್ಮ, ಬೆಳ್ಳೆಕೆರೆ ಹುಚ್ಚರಾಯ ಅಲ್ಲದೆ ಮಂಗಲ, ಕಲಸಗೆರೆ, ಪೀಹಳ್ಳಿ, ಚೆನ್ನೇನಕೆರೆ, ಟಿ.ಎಂ. ಹೊಸೂರು, ಕೊಡೆಯಾಲ ಕೊತ್ತತ್ತಿ, ಪಣಕನಹಳ್ಳಿ ಮತ್ತಿತರ ಗ್ರಾಮಗಳ ದೈವಗಳು ಬಂದು ಸೇರುತ್ತವೆ. ಜನರು ತಮ್ಮ ಗ್ರಾಮದೈವಗಳ ಉತ್ಸವಮೂರ್ತಿಗಳನ್ನು ಪ್ರಭಾವಳಿ, ಪಟದ ಕಳಸಗಳನ್ನು ಹುಣಸೆ ಹಣ್ಣು, ವಿಭೂತಿ ಪುಡಿಯಿಂದ ಚೆನ್ನಾಗಿ ಉಜ್ಜಿ ಫಳಫಳ ಹೊಳೆಯುವಂತೆ ಮಾಡುತ್ತಾರೆ. ‘ಪಟ’ವನ್ನು ಹೂವುಗಳಿಂದ ಅಲಂಕರಿಸಿ ಗಂಗೆ ಪೂಜೆಯ ನಂತರ ಪತ್ತಿನ ಸೇವೆ ಮುಗಿಸಿ ‘ಕಾಕು’ ಹಾಕುತ್ತಾ ಆಯಾ ಊರವರು ಗುಂಪಾಗಿ ಊರಿನ ಹಾದಿ ಹಿಡಿಯುತ್ತಾರೆ. ಈ ಉತ್ಸವದಲ್ಲಿ ವಾಲಗದವರು, ತಮಟೆಯವರು, ಕೊಂಬು ಕಹಳೆ, ಬಣ್ಣ ಬಣ್ಣದ ಛತ್ರಿ, ಚಾಮರ ಹಿಡಿದವರು, ನಂದಿಕಂಬ ಹೊತ್ತವರು, ಬೀಗದವರು ಸೇರಿ ಸಾಲಾಗಿ ನಡೆಯುತ್ತಾರೆ. ಆಚರಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೋಸಂಬರಿ ಪಾನಕ ವಿತರಣೆಯಾಗುತ್ತದೆ. ಅಲ್ಲದೆ ಸಾಮೂಹಿಕ ಭೋಜನವಿರುತ್ತದೆ. ಇದನ್ನು ‘ಅರವಟ್ಟಿಗೆ ಸೇವೆ’ ಎಂದು ಕರೆಯುತ್ತಾರೆ. ನಂತರ ಮಳೆ ಬರುವುದೆಂದು ನಂಬುತ್ತಾರೆ.