ಗುಲ್ಬರ್ಗಾ ಜಿಲ್ಲೆಯಲಿ ದೇವರಿಗೆ ಮಾಡುವ ಮದುವೆ. ಸಿದ್ಧಲಿಂಗಪ್ಪ ಶಿರವಾಳದ ಗ್ರಾಮ ದೇವತೆ. ಪ್ರತಿ ಜನವರಿಯಲ್ಲಿ ಸಿದ್ಧಲಿಂಗಪ್ಪನಿಗೆ ಮದುವೆ ಸಂಭ್ರಮ. ಆದರೆ ಮದುವೆ ಸಮಾರಂಭ ಪೂರ್ತಿ ಆಗುವುದೇ ಇಲ್ಲ. ಸಂಕ್ರಾಂತಿ ಹಬ್ಬದ ಹದಿನೈದು ದಿನ ಮೊದಲು ಸಿದ್ಧಲಿಂಗಪ್ಪನ ಮದುವೆಯ ಸಿದ್ಧತೆಗಳು ಆರಂಭವಾಗುತ್ತವೆ. ಇನ್ನೇನು ಐದು ದಿನವಿರು ವಾಗ ಮದುವೆ ಸಂಭ್ರಮಕ್ಕೆ ಕಳೆ ಕಟ್ಟಲಾ ರಂಭಿಸುತ್ತದೆ. ಅಂದಿನಿಂದ ಮದುವೆಯ ವಿಧಿ-ವಿಧಾನಗಳು ವಿದ್ಯುಕ್ತವಾಗಿ ಆರಂಭ ವಾಗುತ್ತದೆ. ಮದುಮಗನಾದ ಸಿದ್ಧ ಲಿಂಗಪ್ಪನ ಮದುವೆಯ ಉತ್ಸಾಹ ಜಾತಿ, ಮತ, ಪಂಗಡಗಳ ಮೇರೆ ಇಲ್ಲದೆ ನಡೆಯುತ್ತದೆ.

ಸಂಕ್ರಾಂತಿಯ ಹಿಂದಿನ ದಿನ ಮದು ಮಗನಿಗೆ ಎಣ್ಣೆ ಹಚ್ಚುವ ಶಾಸ್ತ್ರ ನಡೆ ಯುತ್ತದೆ. ಮರುದಿನ ಶಹಪುರದಿಂದ ನೆಂಟರು ಹೆಣ್ಣಿನ ವಿಗ್ರಹವನ್ನು ಹೊತ್ತು ತರುತ್ತಾರೆ. ಹರದೇಸಿ ನಾಗೇಸಿ ಹಾಡು ಗಳಿಂದ ಬೀಗರನ್ನು ಎದುರು ಗೊಳ್ಳುತ್ತಾರೆ. ನೀರು ಹಾಕುವ ಶಾಸ್ತ್ರ ಮುಗಿದ ಬಳಿಕ ಏನೋ ಕಾರಣಕ್ಕೆ ಮದುಮಗನಿಗೆ ಮುನಿಸಾಗುತ್ತದೆ. ಸಿದ್ಧಲಿಂಗಪ್ಪ ದೇವರು ಮುನಿದುಕೊಂಡು ಊರ ಹೊರಗಿನ ಹಳ್ಳದಾಚೆಯ ದೂರದ ಪಾಳು ದೇಗುಲಕ್ಕೆ ಹೋಗಿ ಕುಳಿತುಕೊಳ್ಳುತ್ತಾನೆ. (ಸಿದ್ಧಲಿಂಗಪ್ಪನ ಮೂರ್ತಿಯನ್ನು  ಪೂಜಾರಿ ಎತ್ತಿ ಸಾಗಿಸುತ್ತಾನೆ) ಊರಿನ ಹಿರಿಯರು ಮದುಮಗನನ್ನು ಒಪ್ಪಿಸಿ, ಮದುವೆ ಮಂಟಪಕ್ಕೆ ಕರೆ ತರುತ್ತಾರೆ. ತಾಳಿ ಕಟ್ಟುವ ಸಮಯಕ್ಕೆ ಸರಿಯಾಗಿ ಒಬ್ಬ ಓಡುತ್ತ ಬಂದು ‘ಗುಲ್ಲಾಯಿತು’ ಎಂದು ಹೇಳುತ್ತಾನೆ. ತಕ್ಷಣ ದೇವರ ಮೂರ್ತಿ ಹಿಡಿದವ ಮೇಲೇಳುತ್ತಾನೆ. ಮದುವೆ ಅರ್ಧಕ್ಕೆ ನಿಲ್ಲುತ್ತದೆ. ಇನ್ನು ಮುಂದಿನ ವರ್ಷದ ಸಂಕ್ರಾಂತಿಗೆ ಮತ್ತೊಂದು ಮುಹೂರ್ತ ನೋಡಬೇಕು. ಇದು ಪ್ರತಿ ವರ್ಷ ನಡೆದು, ಮದುವೆ ಅರ್ಧಕ್ಕೆ ನಿಂತು ಹೋಗುತ್ತದೆ. ಮದುವೆ ಸಮಾರಂಭ ನಡೆಯುತ್ತದೆ. ಆದರೆ ಮದುವೆಯಾಗುವುದೇ ಇಲ್ಲ. ಊರಿನಲ್ಲಿ ಯಾವುದಾದರೂ ಅಸಂಭವವಾದದ್ದು ಆದರೆ “ಸಿದ್ಧಲಿಂಗಪ್ಪನ ಮದುವೆ ಆದಂಗೆ ಬಿಡು” ಎನ್ನುವ ನುಡಿ ಪ್ರಚಲಿತದಲ್ಲಿದೆ.