ದೇವರ ಸೇವೆ ಸಲ್ಲಿಸಲು ಊರಿನವರು ದೇವರಿಗೆ ವಾಹನವನ್ನಾಗಿ ಬಿಟ್ಟ ಗೂಳಿ. ಹೆಣ್ಣುದೇವರಿಗೆ ಕೋಣ ಬಿಡುವ ಪದ್ಧತಿ ಇದೆ. ಗಂಡು ಗೂಳಿ ಶಿವನ ವಾಹನವಾದ ನಂದಿಯ ಅಂಶ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಆಚರಣೆ ಕರ್ನಾಟಕದ ಎಲ್ಲಾ ಕಡೆ ಕಂಡುಬರುತ್ತದೆ. ಊರಿನ ಹಿತಕ್ಕಾಗಿ, ಜನ ಹಾಗೂ ದನಕರುಗಳ ಒಳಿತಿಗಾಗಿ ಗೂಳಿಯನ್ನು ಊರ ದೇವರ ಹೆಸರಿಗೆ ಬಿಡುತ್ತಾರೆ. ಒಮ್ಮೆ ದೇವರಿಗೆ ಬಿಟ್ಟ ಗೂಳಿಯನ್ನು ಯಾರು ನೋಯಿಸುವಂತಿಲ್ಲ. ಮನೆಯ ಮುಂದೆ ಬಂದರೆ ಮಾಡಿದ ಅಡುಗೆಯನ್ನು ನೀಡಿ ಭಕ್ತಿ ಯಿಂದ ಕೈಮುಗಿಯುತ್ತಾರೆ. ನಡೆದಾಡುವ ರಸ್ತೆಯಲ್ಲಿ ಮಲ ಗಿದರೆ ಏಳಿಸುವಂತಿಲ್ಲ. ಬೆಳೆ ಯನ್ನು ತಿಂದರೂ ಹೊಡೆಯುವುದಿರಲಿ, ಬೈಯುವಂತಿಲ್ಲ. ಗೂಳಿಯನ್ನು ಊರಿನ ಆಸ್ತಿಯೆಂದೇ ಭಾವಿಸಲಾಗುತ್ತದೆ. ಪ್ರಾಯಕ್ಕೆ ಬಂದ ದನಕರುಗಳಿಗೆ ಗರ್ಭ ಕಟ್ಟಿಸಲು ಬಳಸಿಕೊಳ್ಳಲಾಗುತ್ತದೆ.

ಹಬ್ಬ ಹಾಗೂ ಜಾತ್ರೆ ಇತ್ಯಾದಿ ವಿಶೇಷ ದಿನಗಳಲ್ಲಿ ಗೂಳಿಯನ್ನು ಮೈತೊಳೆದು, ಕೋಡುಗಳಿಗೆ ಎಣ್ಣೆ ಹಚ್ಚಿ, ತಿಲಕವಿಟ್ಟು ಪೂಜಿಸಿ, ನೈವೇದ್ಯ ನೀಡುತ್ತಾರೆ. ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ದೇವರ ಗೂಳಿಯನ್ನು ಮಕ್ಕಳ ಫಲ ಪಡೆಯಲು ಮಕ್ಕಳಿಲ್ಲದ ಹೆಂಗಸರು ದಾಟಿಸಿಕೊಳ್ಳುತ್ತಾರೆ. ಹೀಗೆ ದಾಟಿಸಿಕೊಂಡರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ಕೆಲವು ಸಂದರ್ಭದಲ್ಲಿ ಬಣ್ಣದ ಬಟ್ಟೆಯ ಜೂಲಾ ಹಾಕಿ ಅಲಂಕರಿಸಿ, ಅದರ ಮೇಲೆ ನಗಾರಿ ಇರಿಸಿ, ಬಡಿಯುತ್ತಾ ಮೆರವಣಿಗೆಯ ಮುಂದೆ ನಡೆಸಿಕೊಂಡು ಹೋಗುತ್ತಾರೆ.