ಮಲೆನಾಡಿನ ಒಕ್ಕಲಿಗರಲ್ಲಿರುವ ತಮ್ಮ ಕುಲದೈವಕ್ಕೆ ಹರಕೆ ಸಲ್ಲಿಸುವ ಆಚರಣೆ. ಕೌಟುಂಬಿಕ ನೆಲೆಯಲ್ಲಿ ಆಚರಣೆಗೊಳ್ಳುವ ಇದರಲ್ಲಿ ಬಂಧುಬಾಂಧವರು, ಸ್ನೇಹಿತರು ಹಾಗೂ ಊರಿನವರು ಇರುತ್ತಾರೆ. ಗ್ರಾಮದೇವತೆಗಳಿಂದ ಕಷ್ಟಗಳ ವಿಚಾರಣೆ ಆಗದಿದ್ದಾಗ ಕೌಟುಂಬಿಕ ನೆಲೆಯಲ್ಲಿ ತಮ್ಮ ಕುಲದೇವತೆಗೆ ಹರಕೆ ಹೊತ್ತು ಹರಕೆ ಸಲ್ಲಿಸಲು ನಿಶ್ಚಯಿಸುತ್ತಾರೆ. ಪೂಜಾರಿಯಿಂದ ದಿನ, ಘಳಿಗೆ ಮುಹೂರ್ತ ಇತ್ಯಾದಿಗಳನ್ನು ತಿಳಿದುಕೊಳ್ಳುತ್ತಾರೆ. ಪೂಜಾ ಕಾರ್ಯಕ್ಕೆ ಬೇಕಾದ ಪರಿಕರಗಳನ್ನು ಸಿದ್ಧಪಡಿಸಿಕೊಂಡು, ತಮ್ಮ ಬಂಧು, ಬಳಗ, ಸ್ನೇಹಿತರು ಹಾಗೂ ಊರಿನವರನ್ನು ಆಹ್ವಾನಿಸುತ್ತಾರೆ.

ಮನೆಯ ಹತ್ತಿರದ ಹುತ್ತವೊಂದರ ಸುತ್ತ ಸ್ವಚ್ಛಗೊಳಿಸಿ, ಚಪ್ಪರ ಹಾಕಿ ಸಗಣಿ ಸಾರಿಸುತ್ತಾರೆ. ಚಪ್ಪರ ಹಾಗೂ ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸುತ್ತಾರೆ. ಪೂಜೆಗೆ ಬೇಕಾದ ಪರಿಕರಗಳನ್ನೆಲ್ಲಾ ಒಂದು ಹೊಸ ಬುಟ್ಟಿಯಲ್ಲಿ ತುಂಬಿಸಿಕೊಂಡು, ಮಡಿಯಿಟ್ಟು ಹರಕೆ ಸಲ್ಲಿಸುವ ದಂಪತಿಗಳು ಬಂಧುಗಳನ್ನೊಳಗೊಂಡ ವಾದ್ಯವೃಂದ ಮೆರವಣಿಗೆಯಲ್ಲಿ ಗುಡಿಗೆ ತೆರಳುತ್ತಾರೆ. ಗುಡಿಯಲ್ಲಿ ಕುಕ್ಕೆಯನ್ನಿಳಿಸಿ, ಉರುಳು ಸೇವೆ ಸಲ್ಲಿಸಲು ಪೂಜಾರಿ ಸೂಚಿಸುತ್ತಾನೆ. ದಂಪತಿಗಳು ಗುಡಿಯ ಸುತ್ತಲು ಊರುಳು ಸೇವೆ ಸಲ್ಲಿಸಿ, ಬಾಯಿಬೀಗ ಸೇವೆ ಸಲ್ಲಿಸುತ್ತಾರೆ. ಬೇವುಡುಗೆ ಎಂದು ಕರೆಯಲಾಗುವ ಲಕ್ಕೀಸೊಪ್ಪಿನಿಂದ ಮಾಡಿದ ಉಡುಗೆಯನ್ನು ಸುತ್ತಿಕೊಳ್ಳುತ್ತಾರೆ. ಬೇವುಡುಗೆಯೊಳಗೆ ದಂಪತಿಗಳು ತಮ್ಮ ಮೈಮೇಲಿನ ವಸ್ತ್ರಗಳನ್ನು ಕಳಚಿ, ಗುಡಿಯನ್ನು ಐದು ಸುತ್ತು ಬರುತ್ತಾ, ಅಂದಿನ ದೇವಿಕಾರ್ಯ ನಡೆಸಲು ದೇವಿಯ ಅನುಮತಿ ಕೋರುತ್ತಾರೆ.

ಬೇವುಡುಗೆಯನ್ನು ಕಳಚಿ, ವಸ್ತ್ರಾಭರಣಗಳಿಂದ ಸಿಂಗರಿಸಿಕೊಂಡ ದಂಪತಿಗಳನ್ನು ಪೂಜಾರಿಯು ತೀರ್ಥ ಪ್ರಸಾದ ನೀಡಿ, ಗುಡಿಯೊಳಗೆ ಬರಮಾಡಿಕೊಳ್ಳುತ್ತಾನೆ. ದಂಪತಿಗಳನ್ನು ಕುಕ್ಕೆಯ ಎದುರು ಕೂರಿಸಿ, ದೇವಿಯ ಆರಾಧನೆ ಆರಂಭಿಸುತ್ತಾರೆ. ಮಹಾಮಂಗಳಾರತಿಯಾದ ಬಳಿಕ ಗುಡಿಯ ಹೊರಗೆ ಕುರಿಯೊಂದನ್ನು ಬಲಿ ನೀಡಿ, ಬಲಿಯಾದ ಪ್ರಾಣಿಯ ತಲೆಯನ್ನು ಹಿಡಿದ ಒಬ್ಬನು ಯಾರಿಗೂ ಸಿಗದಂತೆ ಓಡಿ ಹೋಗುತ್ತಾನೆ.

ಕುಕ್ಕೆಯನ್ನು ಹೊತ್ತು ದಂಪತಿಗಳು ಮೆರವಣಿಗೆಯಲ್ಲಿ ಮನೆ ಸಮೀಪ ಆಗಲೇ ಸಿದ್ಧಪಡಿಸಿದ ಹುತ್ತದ ಬಳಿ ಬರುತ್ತಾರೆ. ಹುತ್ತವನ್ನು ಪೂಜಾರಿ ಪೂಜಿಸಿದ ನಂತರ ಕುರಿಯೊಂದನ್ನು ಬಲಿ ಅರ್ಪಿಸಲಾಗುತ್ತದೆ. ಬಲಿ ನೀಡಿದ ಕುರಿಯ ಮಾಂಸದಲ್ಲಿ ಸ್ವಲ್ಪ ಭಾಗ ಪಡೆದ ದಂಪತಿಗಳು ಕುಲದೇವಿಯ ಎಡೆಗಾಗಿ ಅಡುಗೆ ಮಾಡಿ ಸಿದ್ಧಪಡಿಸುತ್ತಾರೆ. ಮನೆಯ ನಡುಮನೆಯಲ್ಲಿ ನಾಲ್ಕು ಬಾಳೆ ಎಲೆಗಳನ್ನು ಹಾಸಿ ಅದರ ಮೇಲೆ ಪ್ರತ್ಯೇಕವಾಗಿ ರಾಶಿಯಂತೆ ಅಕ್ಕಿ, ಅಡಿಕೆ, ಮಾಂಸ ಹಾಗೂ ಕಡಬು ಬಡಿಸುತ್ತಾರೆ. ಪಕ್ಕದಲ್ಲಿ ಹೆಂಡ, ಸರಾಯಿ, ಬ್ರಾಂದಿ ಇಟ್ಟು ಪ್ರಾರ್ಥಿಸುತ್ತಾರೆ. ಪೂಜಾರಿಯು ಎಡೆಯ ರಾಶಿಗಳಿಗೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಮಾಡುತ್ತಾನೆ. ಈ ಸಂದರ್ಭದಲ್ಲಿ ಎಡೆಯ ರಾಶಿಗಳು ಒಡೆದು ಹೋಳಾದರೆ ದೇವಿ ಕಾರ್ಯ ಇಚ್ಛೆಯಂತೆ ಆಗಿದೆ ಎಂದು ತಿಳಿದು ಸಂತೋಷಪಡುತ್ತಾರೆ.

ಪೂಜಾರಿಯು ನೆರೆದ ಭಕ್ತರೆಲ್ಲರಿಗೂ ತೀರ್ಥ ಪ್ರಸಾದಗಳನ್ನು ನೀಡುತ್ತಾನೆ. ನಂತರ ಎಲ್ಲರೂ ಕುಳಿತು ತುಂಡು ಕಡುಬಿನ ಊಟ ಮಾಡುತ್ತಾರೆ. ರಾಶಿ ಪೂಜೆಯ ನಂತರ ಎಂಟು ದಿನಗಳ ಮೇಲೆ ಬರುವ ಒಂದು ಮಂಗಳವಾರ ‘ಆರು ಗೂಡಿಸುವ ಮನೆ ಪೂಜೆ’ ಮಾಡುತ್ತಾರೆ. ಅಂದಿನ ದಿನ ಗುಡಿಗೆ ಹೋದ ದಂಪತಿಗಳು ಪೂಜಿಸಿ, ಹುತ್ತಕ್ಕೆ ಕುರಿ ಬಲಿ ನೀಡಿ, ಹಿಂದಿನಂತೆ ಎಡೆ ಅಡುಗೆ ಮಾಡಿ, ಮನೆಯಲ್ಲಿ ಎಡೆ ಅರ್ಪಿಸುತ್ತಾರೆ. ಈ ಆಚರಣೆಗೆ ಹತ್ತಿರದ ಬಂಧುಗಳನ್ನು ಮಾತ್ರ ಆಹ್ವಾನಿಸುತ್ತಾರೆ.