ಕರ್ನಾಟಕ ಹಾಗೂ ಆಂಧ್ರದ ಗಡಿಭಾಗ ಸಿರುಗುಪ್ಪ ಸಮೀಪದ ಹೊಳಗುಂದಾ ಊರಿನ ದೈವ ಮಾಳಮಲ್ಲೇಶ್ವರ ಸ್ವಾಮಿ. ಪ್ರತಿ ವರ್ಷ ವಿಜಯದಶಮಿ ದಿನದಂದು ಕಾರಣಿಕೋತ್ಸವ ಜರುಗುತ್ತದೆ. ವರ್ಷಕ್ಕೆ ಒಂದು ಬಾರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಆ ವರ್ಷದ ಭವಿಷ್ಯವನ್ನು ಒಂದು ಮಾತಿನಲ್ಲಿ ಹೇಳುವ ಸಂಪ್ರದಾಯವಿದೆ.

ಸೂರ್ಯೋದಯದಲ್ಲಿ ದೇವರ ಪ್ರಧಾನ ಅರ್ಚಕ ಆ ವರ್ಷದ ಭವಿಷ್ಯ ನುಡಿಯುತ್ತಾನೆ. ದಿನಾಂಕ 10.10.2008ರಲ್ಲಿ ನಡೆದ ಕಾರಣಿಕೋತ್ಸವದಲ್ಲಿ “3500ರೂ ಹತ್ತಿ ಹರಳೆ, 950 ಜೋಳ… ಮುತ್ತಿನಂತಹ ಮಳೆ… ರತ್ನದಂತ ಬೆಳೆ… ಮೂರು ಆರಾದೀತು… ಆರು ಮೂರಾದೀತು… ಲಕ್ಷ್ಮಿ ಸರಸ್ವತಿ ಒಂದಾಗಿ ಗಗನಕ್ಕೆ ಚಂದ್ರ ಹಾರ ಕಟ್ಟಿರುತ್ತಾರೆ… ಬಹುಪರಾಕ್” ಎಂಬುದಾಗಿ ಅರ್ಚಕರು ಭವಿಷ್ಯ ನುಡಿದಿದ್ದರು.

ಕಾರಣಿಕೋತ್ಸವದಲ್ಲಿ ಸಿರಗುಪ್ಪದ ನಣಿಕೆ, ಸುಳುಗಾಯಿ, ವಿರುಪಾಪುರ, ಕುಳವಳ್ಳಿ, ಬೆಳೇಕಲ್ಲು, … ಎಳ್ಳಾರ್ಥಿ, ಹೊಳೆಗುಂದಿ, ಸಮ್ಮತಗೇರಿ, ಆಲೂರು, ಗೋಳ್ಯೆಂ. ಮಾರಲಮಡಿಕೆ, ಹಾಲರವಿ, ಆಂಧ್ರದ ಕರ್ನೂಲು, ಅನಂತಪುರ ಮತ್ತು ಕರ್ನಾಟಕದ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಉತ್ಸವವನ್ನು ವೀಕ್ಷಿಸಲು ಹಾಗೂ ಕಾರಣಿಕವನ್ನು ಕೇಳಲು ಸೇರುತ್ತಾರೆ.

ಬಡಿಗೆ ಹಿಡಿದು ಹೊಡೆದಾಡುವುದು ಇಲ್ಲಿನ ವಿಶೇಷ ಆಚರಣೆಗಳಲ್ಲೊಂದು. ರಾತ್ರಿಯಲ್ಲಿ ಭಕ್ತರು ಬಡಿಗೆಯನ್ನು ಹಿಡಿದು ಒಬ್ಬರಿಗೊಬ್ಬರು ಹೊಡೆದಾಡುತ್ತಾರೆ. ರಾತ್ರಿಯಲ್ಲಿ ಬಡಿದಾಡುತ್ತಲೇ ಮಾಳಮಲ್ಲೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು ಮೆರವಣಿಗೆ ಮಾಡುತ್ತಾರೆ. ಬಡಿಗೆ ಹೊಡೆದಾಟದಲ್ಲಿ ಅನೇಕರು ಮಾರಣಾಂತಿಕವಾಗಿ ಗಾಯಗೊಳ್ಳುತ್ತಾರೆ. ಗಾಯಾಳುಗಳ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಿಸುತ್ತಾರೆ.

ಭಕ್ತಿಯ ಪರಾಕಾಷ್ಠೆಯಲ್ಲಿ ಮುಳುಗಿ ಅರಿಶಿಣ, ಭಂಡಾರ ಎರಚುತ್ತಾ ಪಂಜಿನ ಮೆರವಣಿಗೆಯಲ್ಲಿ ಗುಡ್ಡ ಹತ್ತಿ ಇಳಿಯುತ್ತಾರೆ. ಬಡಿಗೆ ಹೊಡೆದಾಟದಲ್ಲಿ ಭಕ್ತರು ಮರಣ ಹೊಂದಿದರೂ ಕೇಸು ದಾಖಲಿಸುವಂತಿಲ್ಲ. ಆಧುನಿಕ ಕಾನೂನಿನ ವ್ಯವಸ್ಥೆಯ ಎದುರೇ ನಡೆಯುತ್ತದೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ  ಸಾವಿರಾರು ಪೊಲೀಸ್ ಪೇದೆಗಳ ಎದುರೇ ನಡೆಯುವ ಈ ಹೊಡೆದಾಟವು, ಸಂಪ್ರದಾಯ ಆಚರಣೆಗಳು ಜೀವಂತವಾಗಿವೆ ಎನ್ನುವುದಕ್ಕೆ ಹಿಡಿದ ಕನ್ನಡಿಯಾಗಿದೆ. ರಥೋತ್ಸವ ವೈಭವಯುತವಾಗಿ ನಡೆಯುತ್ತದೆ. ಗೊರವಯ್ಯಗಳ ಆಟ, ಊಟ, ಕಬ್ಬಿಣ ಸರಪಳಿ ಹರಿಯುವುದು, ಕಡುಬಿನ ಕಾಳಗ ಇತ್ಯಾದಿ ಧಾರ್ಮಿಕ ಆಚರಣೆಗಳು ಮೂರು ದಿನಗಳ ಕಾಲ ನಡೆಯುತ್ತವೆ.